ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಕಾನೂನು ತಡೆಗೆ ಮಸೂದೆ ರೂಪಿಸಿ: ಸೋನಿಯಾ ಸಲಹೆ

ಕಾಂಗ್ರೆಸ್‌ ಆಡಳಿತದ ರಾಜ್ಯಗಳಿಗೆ ಸೋನಿಯಾ ಸಲಹೆ
Last Updated 28 ಸೆಪ್ಟೆಂಬರ್ 2020, 18:21 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಸರ್ಕಾರ ರೂಪಿಸಿರುವ ಮೂರು ಕೃಷಿ ಕಾನೂನುಗಳ ವ್ಯಾಪ್ತಿಯಿಂದ ರಾಜ್ಯಗಳನ್ನು ಹೊರಗಿಡಲು ಸಾಧ್ಯವಾಗುವಂತೆ ರಾಜ್ಯಮಟ್ಟದಲ್ಲಿ ಕಾನೂನು ರಚಿಸುವ ಸಾಧ್ಯತೆಗಳ ಬಗ್ಗೆ ಚಿಂತನೆ ನಡೆಸುವಂತೆ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕಾಂಗ್ರೆಸ್‌ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಸೋಮವಾರ ಸಲಹೆ ನೀಡಿದ್ದಾರೆ.

ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ಪಂಜಾಬ್‌, ಹರಿಯಾಣ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಕಾಂಗ್ರೆಸ್‌ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿರುವ ಸಂದರ್ಭದಲ್ಲೆ ಸೋನಿಯಾ ಈ ಸೂಚನೆ ನೀಡಿದ್ದಾರೆ.

‘ಕಾಂಗ್ರೆಸ್‌ ಆಡಳಿತವಿರುವ ಪಂಜಾಬ್‌, ಛತ್ತೀಸ್‌ಗಡ, ರಾಜಸ್ಥಾನ ಹಾಗೂ ಪುದುಚೇರಿ ಸರ್ಕಾರಗಳಿಗೆ ಈ ಬಗ್ಗೆ ಪತ್ರಗಳನ್ನು ಕಳುಹಿಸಲಾಗಿದೆ. ಕೇಂದ್ರ ಸರ್ಕಾರವು ಜಾರಿ ಮಾಡಿರುವ ಕೃಷಿ ಕಾನೂನುಗಳು ರೈತವಿರೋಧಿಯಾಗಿದ್ದು, ಅವು ಜಾರಿಯಾಗದಂತೆ ಸಂವಿಧಾನದ 254(2)ನೇ ವಿಧಿಯಡಿ ಕಾನೂನುಗಳನ್ನು ರಚಿಸಬೇಕು. ಹೀಗೆ ಮಾಡಿದರೆ, ಮೂರು ಕೃಷಿ ಕಾನೂನುಗಳ ರೈತವಿರೋಧಿ ನೀತಿಗಳಿಂದ ರೈತರನ್ನು ರಕ್ಷಿಸಲು ಸಾಧ್ಯವಾಗಲಿದೆ ಎಂದು ಸೋನಿಯಾ ಸಲಹೆ ನೀಡಿದ್ದಾರೆ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ತಿಳಿಸಿದ್ದಾರೆ.

ಕೇಂದ್ರದ ಮಾಜಿ ಸಚಿವ ಅರುಣ್‌ ಜೇಟ್ಲಿ ಅವರು ಹಿಂದೆ ಇಂಥದ್ದೇ ತಂತ್ರವನ್ನು ಅನುಸರಿಸಿದ್ದರು. ಯುಪಿಎ ಅವಧಿಯಲ್ಲಿ ಜಾರಿ ಮಾಡಲಾಗಿದ್ದ ಭೂಸ್ವಾಧೀನ ಕಾನೂನನ್ನು ತಿದ್ದುಪಡಿ ಮಾಡಲು 2015ರಲ್ಲಿ ಮೋದಿ ನೇತೃತ್ವದ ಸರ್ಕಾರ ಮುಂದಾಗಿತ್ತು. ಅದು ಸಾಧ್ಯವಾಗದಾದಾಗ ಸಂವಿಧಾನದ ವಿಧಿ 254 (2)ರ ಅಡಿಯಲ್ಲಿ ರಾಜ್ಯಮಟ್ಟದಲ್ಲಿ ಕಾನೂನು ರಚಿಸುವಂತೆ ಬಿಜೆಪಿ ನೇತೃತ್ವದ ಸರ್ಕಾರಗಳಿಗೆ ಸಲಹೆ ನೀಡಿದ್ದರು. ಕಾಂಗ್ರೆಸ್‌ ಈಗ ಅದೇ ತಂತ್ರದ ಮೊರೆಹೋಗಿದೆ.

ಆದರೆ, ಕೃಷಿ ಕಾನೂನಿನ ವಿರುದ್ಧ ರಾಜ್ಯ ಸರ್ಕಾರಗಳು ಮಸೂದೆಗಳನ್ನು ರೂಪಿಸಿದರೂ ಆಯಾ ರಾಜ್ಯದ ರಾಜ್ಯಪಾಲರು ಮತ್ತು ರಾಷ್ಟ್ರಪತಿಯ ಅಂಕಿತವಿಲ್ಲದೆ ಅವುಗಳಿಗೆ ಕಾನೂನು ರೂಪ ನೀಡಲು ಸಾಧ್ಯವಾಗುವುದಿಲ್ಲ.

‘ಅಶಾಂತಿ ಸೃಷ್ಟಿಯಾದೀತು’

‘ರಾಜ್ಯದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯಿಂದ ಅಶಾಂತಿ ಸೃಷ್ಟಿಯಾಗುವ ಸಾಧ್ಯತೆ ಇದ್ದು, ಪಾಕಿಸ್ತಾನದ ಐಎಸ್‌ಐ ಸಂಘಟನೆಯು ಇದರ ಲಾಭ ಪಡೆಯುವ ಸಾಧ್ಯತೆ ಇದೆ’ ಎಂದು ಪಂಜಾಬ್‌ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ಹೇಳಿದ್ದಾರೆ.

‘ಇತ್ತೀಚಿನ ತಿಂಗಳುಗಳಲ್ಲಿ ಪಂಜಾಬ್‌ನಲ್ಲಿ 150ಕ್ಕೂ ಹೆಚ್ಚು ಭಯೋತ್ಪಾದಕರನ್ನು ಬಂಧಿಸಿ, ಅಪಾರ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಈಗಿನ ಸಂದರ್ಭವನ್ನು ಬಳಸಿಕೊಂಡು, ಭಾರತದಲ್ಲಿ ಶಾಂತಿ ಕದಡಲು ಮುಂದಾಗುವವರಿಗೆ ಪಾಕಿಸ್ತಾನ ಬೆಂಬಲಿತ ಶಕ್ತಿಗಳು ಪ್ರೋತ್ಸಾಹ ನೀಡುವ ಸಾಧ್ಯತೆ ಇದೆ’ ಎಂದು ಅವರು ಹೇಳಿದ್ದಾರೆ.

ಕೃಷಿ ಸಂಬಂಧಿ ಕಾನೂನುಗಳು ರೈತರಿಗೆ ಮರಣ ಶಾಸನವಾಗಿವೆ. ಸದನದ ಒಳಗೆ ಮತ್ತು ಹೊರಗೆ ಇದನ್ನು ವಿರೋಧಿಸುವವರ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ತಿಳಿಸಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT