ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ ಚುನಾವಣೆ: ‘ಶಿವಸೈನಿಕನನ್ನು ಸಿ.ಎಂ ಮಾಡುವೆ’

ಬಿಜೆಪಿಗೆ ಸ್ಪಷ್ಟ ಸಂದೇಶ ರವಾನಿಸಿದ ಉದ್ಧವ್‌ ಠಾಕ್ರೆ
Last Updated 28 ಸೆಪ್ಟೆಂಬರ್ 2019, 20:40 IST
ಅಕ್ಷರ ಗಾತ್ರ

ಮುಂಬೈ: ‘ಶಿವಸೈನಿಕನನ್ನು (ಶಿವಸೇನಾ ಕಾರ್ಯಕರ್ತ) ಮಹಾರಾಷ್ಟ್ರದ ಮುಖ್ಯಮಂತ್ರಿ ಮಾಡುತ್ತೇನೆ ಎಂದು ನನ್ನ ತಂದೆ, ಬಾಳಾ ಠಾಕ್ರೆ ಅವರಿಗೆ ನಾನು ಮಾತು ಕೊಟ್ಟಿದ್ದೆ. ಅದನ್ನು ಈಡೇರಿಸಲು ಬದ್ಧನಾಗಿದ್ದೇನೆ’ ಎನ್ನುವ ಮೂಲಕ ಶಿವಸೇನಾ ಮುಖ್ಯಸ್ಥ ಉದ್ಧವ್‌ ಠಾಕ್ರೆ ಬಿಜೆಪಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ಪಕ್ಷದ ಕಾರ್ಯಕರ್ತರು ಹಾಗೂ ಟಿಕೆಟ್‌ ಆಂಕಾಂಕ್ಷಿಗಳನ್ನುದ್ದೇಶಿಸಿ ಶನಿವಾರ ಮಾತನಾಡಿದ ಅವರು, ‘ವಿಧಾನಸಭೆ ಚುನಾವಣೆಯ ಸೀಟು ಹಂಚಿಕೆ ಕುರಿತು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಜೊತೆಗೆ ಮಾತುಕತೆ ನಡೆಯುತ್ತಿದೆ. ಶೀಘ್ರದಲ್ಲೇ ಅಂತಿಮ ತೀರ್ಮಾನ ಹೊರಬೀಳಲಿದೆ. ಮಹಾರಾಷ್ಟ್ರ ವಿಧಾನಸಭೆಯಲ್ಲಿ ಶಿವಸೇನೆಯ ಧ್ವಜ ಹಾರಾಡಬೇಕು ಎಂಬುದು ನಮ್ಮ ಬಯಕೆ’ ಎಂದರು.

ಮಹಾರಾಷ್ಟ್ರದ ವಿಧಾನಸಭೆ ಚುನಾವಣೆಗೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿರುವ ಶಿವಸೇನಾ, 50:50 ಅನುಪಾತದಲ್ಲಿ ಸೀಟು ಹಂಚಿಕೆ ಆಗಬೇಕು ಎಂಬ ಬೇಡಿಕೆ ಇಟ್ಟಿದೆ. ಅಷ್ಟೇ ಅಲ್ಲದೆ ಉದ್ಧವ್‌ ಅವರ ಪುತ್ರ ಆದಿತ್ಯ ಠಾಕ್ರೆ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸುತ್ತಿದೆ. ಆದರೆ ಈ ಈರಡೂ ಬೇಡಿಕೆಗಳನ್ನು ಸ್ವೀಕರಿಸಲು ಬಿಜೆಪಿ ಸಿದ್ಧವಿಲ್ಲ.

‘ಬಿಜೆಪಿ ಜೊತೆ ಮೈತ್ರಿ ಸಾಧ್ಯವಾದರೆ ನಾವು ಆ ಪಕ್ಷದ ಬೆನ್ನಿಗೆ ಇರಿಯುವುದಿಲ್ಲ. ನಮ್ಮ ವಿರೋಧವನ್ನು ಬಹಿರಂಗವಾಗಿ ವ್ಯಕ್ತಪಡಿಸುತ್ತೇವೆ. ಮಹಾರಾಷ್ಟ್ರದಲ್ಲಿ ಅಧಿಕಾರ ಹಿಡಿಯಲು ನಾನು ಬಯಸುತ್ತೇನೆ. ಆ ಉದ್ದೇಶದಿಂದಲೇ ಎಲ್ಲಾ 288 ಕ್ಷೇತ್ರಗಳ ಟಿಕೆಟ್‌ ಆಕಾಂಕ್ಷಿಗಳನ್ನು ಆಹ್ವಾನಿಸಿದ್ದೇನೆ. ಪ್ರತಿ ಕ್ಷೇತ್ರದಲ್ಲೂ ಪಕ್ಷವನ್ನು ಬಲಪಡಿಸುವುದು ನನ್ನ ಉದ್ದೇಶ ಎಂದರು.

‘ಬಿಜೆಪಿ ಜೊತೆ ಮೈತ್ರಿ ಸಾಧ್ಯವಾದರೆ, ಅವರ ಅಭ್ಯರ್ಥಿಗಳ ಗೆಲುವಿಗೆ ನಮ್ಮ ಕಾರ್ಯಕರ್ತರು ಶ್ರಮಿಸುತ್ತಾರೆ. ಅದರಂತೆ ಸೇನಾದ ಅಭ್ಯರ್ಥಿಗಳಿಗೆ ಬಿಜೆಪಿಯ ಬೆಂಬಲ ಲಭಿಸಲಿದೆ. ರಾಜ್ಯದ ಬಡವರು ಮತ್ತು ರೈತರ ಸಮಸ್ಯೆಗಳನ್ನು ಈಡೇರಿಸಬೇಕಾದರೆ ಎಲ್ಲರೂ ಜೊತೆಯಾಗಿ ಕೆಲಸಮಾಡುವುದು ಅಗತ್ಯ’ ಎಂದು ಉದ್ಧವ್‌ ಹೇಳಿದರು.

ಲೋಕಸಭೆಗೆ ಚೌಹಾಣ್ ಸ್ಪರ್ಧೆ
ಸಾತಾರ ಲೋಕಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆಯಲ್ಲಿ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್‌ನ ಹಿರಿಯ ಮುಖಂಡ ಪೃಥ್ವಿರಾಜ್‌ ಚೌಹಾಣ ಅವರು ಎನ್‌ಸಿಪಿ– ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ.

ಉಪಚುನಾವಣೆಯಲ್ಲಿ ಈ ಕ್ಷೇತ್ರವನ್ನು ಮಿತ್ರಪಕ್ಷ ಕಾಂಗ್ರೆಸ್‌ಗೆ ಬಿಟ್ಟುಕೊಡಲು ಎನ್‌ಸಿಪಿ ತೀರ್ಮಾನಿಸಿದೆ.

ಚೌಹಾಣ್‌ ಅವರು ಪ್ರಸಕ್ತ ಸಾತಾರ ಜಿಲ್ಲೆಯ ಕರಾಡ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ. ಸಾತಾರ ಕ್ಷೇತ್ರವನ್ನು ಎನ್‌ಸಿಪಿ– ಕಾಂಗ್ರೆಸ್‌ ಭದ್ರಕೋಟೆ ಎಂದು ಪರಿಗಣಿಸಲಾಗುತ್ತದೆ. ಆದರೆ ಉದಯನ್‌ರಾಜೆ ಅವರು ಬಿಜೆಪಿ ಸೇರಿದ್ದರಿಂದ ಇಲ್ಲಿನ ಸಮೀಕರಣ ಬದಲಾಗುವ ನಿರೀಕ್ಷೆ ಇದೆ. ‌

2019ರ ಲೋಕಸಭಾ ಚುನಾವಣೆಯಲ್ಲಿ ಸಾತಾರ ಕ್ಷೇತ್ರದಿಂದ ಆಯ್ಕೆಯಾಗಿದ್ದ ಎನ್‌ಸಿಪಿಯ ಉದಯನ್‌ರಾಜೆ ಭೋಸಲೆ ಬಿಜೆಪಿ ಸೇರುವ ಸಲುವಾಗಿ ತಮ್ಮ ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಇವರು ಬಿಜೆಪಿಯ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ.

ಆರೋಪದಿಂದ ಬೇಸತ್ತು ರಾಜೀನಾಮೆ:ಅಜಿತ್‌ ಪವಾರ್‌
‘ಮಹಾರಾಷ್ಟ್ರ ರಾಜ್ಯ ಸಹಕಾರ ಬ್ಯಾಂಕ್‌ನ ವಂಚನೆ ಹಗರಣಕ್ಕೆ ಸಂಬಂಧಿಸಿದಂತೆ ಚಿಕ್ಕಪ್ಪ ಶರದ್‌ ಪವಾರ್‌ ವಿರುದ್ಧ ಆರೋಪಗಳು ಬಂದಿರುವುದರಿಂದ ಬೇಸರಗೊಂಡು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ’ ಎಂದು ಎನ್‌ಸಿಪಿ ಮುಖಂಡ ಅಜಿತ್‌ ಪವಾರ್‌ ಅವರು ಹೇಳಿದ್ದಾರೆ.

ಶಾಸಕ ಸ್ಥಾನಕ್ಕೆ ಶುಕ್ರವಾರ ಹಠಾತ್‌ ರಾಜೀನಾಮೆ ನೀಡುವ ಮೂಲಕ ಅಜಿತ್‌ ಅವರು ಮಹಾರಾಷ್ಟ್ರ ರಾಜಕೀಯದಲ್ಲಿ ಸಂಚಲನ ಉಂಟುಮಾಡಿದ್ದರು. ಪಕ್ಷದೊಳಗೆ ಮತ್ತು ಪವಾರ್‌ ಕುಟುಂಬದೊಳಗಿನ ಕಲಹವೇ ರಾಜೀನಾಮೆಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿತ್ತು. ರಾಜೀನಾಮೆಗೆ ಯಾವುದೇ ಕಾರಣವನ್ನು ನೀಡದ ಅಜಿತ್‌, ಶನಿವಾರ ಬೆಳಿಗ್ಗೆ ಶರದ್‌ ಪವಾರ್‌ ಅವರನ್ನು ಭೇಟಿಮಾಡಿ ಮಾತುಕತೆ ನಡೆಸಿದ್ದರು.

ಸಂಜೆ ಮಾಧ್ಯಮಗೋಷ್ಠಿ ನಡೆಸಿದ ಅವರು, ‘ಶರದ್‌ ಪವಾರ್‌ ಯಾವ ರೀತಿಯಿಂದಲೂ ಈ ಬ್ಯಾಂಕ್‌ ಜೊತೆ ಸಂಬಂಧ ಹೊಂದಿರಲಿಲ್ಲ. ಆದರೂ ಹಗರಣದ ಜೊತೆ ಅವರ ಹೆಸರನ್ನು ತಳಕುಹಾಕಲಾಗುತ್ತಿದೆ. ಅವರ ಬೆಂಬಲದಿಂದಲೇ ನಾನು ಉಪಮುಖ್ಯಮಂತ್ರಿ ಹುದ್ದೆಗೆ ಏರಿದ್ದೆ. ನನ್ನ ಕಾರಣದಿಂದ ಅವರು ಈ ವಯಸ್ಸನಲ್ಲಿ ಆರೋಪಗಳನ್ನು ಎದುರಿಸುವಂತಾಗಿದೆ ಎಂಬ ನೋವಿನಿಂದ ರಾಜೀನಾಮೆ ನೀಡಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT