ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲು: ವಿವಾದದ ತಿದಿಯೊತ್ತಿದ ಭಾಗವತ್‌

Last Updated 8 ಫೆಬ್ರುವರಿ 2022, 1:26 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘವು (ಆರ್‌ಎಸ್‌ಎಸ್‌) ಅಪಾಯಕಾರಿ ಉದ್ದೇಶಗಳನ್ನು ಹೊಂದಿದೆ ಎಂದು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಆರೋಪಿಸಿದ್ದಾರೆ. ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್‌ ಅವರು ಮೀಸಲಾತಿ ಕುರಿತಂತೆ ಚರ್ಚೆಯಾಗಬೇಕು ಎಂದು ಹೇಳಿದ್ದಾರೆ. ಆದರೆ ಅದು ನೆಪ ಮಾತ್ರ. ಆರ್‌ಎಸ್‌ಎಸ್‌–ಬಿಜೆಪಿಯ ನಿಜವಾದ ಗುರಿ ಇರುವುದು ಸಾಮಾಜಿಕ ನ್ಯಾಯದ ನಾಶ ಎಂದು ಪ್ರಿಯಾಂಕಾ ಪ್ರತಿಪಾದಿಸಿದ್ದಾರೆ.

ಆರ್‌ಎಸ್‌ಎಸ್‌ ಅತಿಯಾದ ಆತ್ಮವಿಶ್ವಾಸ ಹೊಂದಿದೆ ಮತ್ತು ಅದರ ಉದ್ದೇಶಗಳು ಅಪಾಯಕಾರಿಯಾಗಿವೆ. ಬಿಜೆಪಿ ಸರ್ಕಾರವುಜನಪರ ಕಾನೂನುಗಳ ಕತ್ತು ಹಿಸುಕುತ್ತಿರುವ ಸಂದರ್ಭದಲ್ಲಿಯೇ ಮೀಸಲಾತಿ ಚರ್ಚೆಯನ್ನು ಆರ್‌ಎಸ್‌ಎಸ್‌ ಮುನ್ನೆಲೆಗೆ ತಂದಿದೆ ಎಂದು ಅವರು ಹೇಳಿದ್ದಾರೆ.

‘ಇದು ಕಾರ್ಯರೂಪಕ್ಕೆ ಬರಲು ನೀವು ಅವಕಾಶ ಕೊಡುವಿರಾ’ ಎಂದು ದೇಶದ ಜನರನ್ನು ಅವರು ಪ್ರಶ್ನಿಸಿದ್ದಾರೆ.

ಮೀಸಲಾತಿ ಬಗ್ಗೆ ಭಾಗವತ್‌ ನೀಡಿದ ಹೇಳಿಕೆಯನ್ನು ವಿವಾದವಾಗಿಸುವ ಅಗತ್ಯ ಇಲ್ಲ. ಎಲ್ಲ ವಿವಾದಗಳು ಸೌಹಾರ್ದಯುತವಾಗಿ ಪರಿಹಾರವಾಗಬೇಕು ಎಂಬುದೇ ಅವರ ಉದ್ದೇಶ ಎಂದು ಆರ್‌ಎಸ್‌ಎಸ್‌ ಸೋಮವಾರವೇ ಸ್ಪಷ್ಟನೆ ನೀಡಿದೆ.

ಮೀಸಲು ಚರ್ಚೆ ಬೇಕಿಲ್ಲ: ಪಾಸ್ವಾನ್‌

ಮೀಸಲಾತಿಯು ತುಳಿತಕ್ಕೆ ಒಳಗಾದ ಮತ್ತು ದುರ್ಬಲ ವರ್ಗಗಳ ಸಾಂವಿಧಾನಿಕ ಹಕ್ಕು. ಹಾಗಾಗಿ ಈ ವಿಚಾರದಲ್ಲಿ ಯಾವುದೇ ಚರ್ಚೆಯ ಅಗತ್ಯ ಇಲ್ಲ ಎಂದು ಕೇಂದ್ರ ಸಚಿವ ರಾಮವಿಲಾಸ್‌ ಪಾಸ್ವಾನ್‌ ಹೇಳಿದ್ದಾರೆ.

‘ಜಗತ್ತಿನ ಯಾವ ಶಕ್ತಿಯೂ ಮೀಸಲಾತಿಯ ಸಾಂವಿಧಾನಿಕ ಅವಕಾಶವನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹಲವು ಬಾರಿ ಹೇಳಿದ್ದಾರೆ. ಆರ್‌ಎಸ್‌ಎಸ್‌ ಮುಖ್ಯಸ್ಥರ ಹೇಳಿಕೆಯನ್ನು ಹಿಡಿದುಕೊಂಡು ಜನರ ಮನಸ್ಸಿನಲ್ಲಿ ಗೊಂದಲ ಸೃಷ್ಟಿಸಲು ವಿರೋಧ ಪಕ್ಷಗಳು ಯತ್ನಿಸುತ್ತಿವೆ ಎಂದು ಪಾಸ್ವಾನ್‌ ಆರೋಪಿಸಿದ್ದಾರೆ.

ಮಹಾತ್ಮ ಗಾಂಧಿ ಮತ್ತು ಬಾಬಾಸಾಹೇಬ್‌ ಅಂಬೇಡ್ಕರ್‌ ನಡುವೆ ನಡೆದ ಪೂನಾ ಒಪ್ಪಂದದ ಫಲವಾಗಿ ಮೀಸಲಾತಿ ಜಾರಿಗೆ ಬಂತು. ಇದರ ಬಗ್ಗೆ ಈಗ ಚರ್ಚೆಯ ಅಗತ್ಯ ಇಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ. ವಿರೋಧ ಪಕ್ಷಗಳು ಎಬ್ಬಿಸುತ್ತಿರುವ ಹುಯಿಲು ಆಧಾರರಹಿತ ಎಂದಿದ್ದಾರೆ.

ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗಗಳಿಗೆ ಮಾತ್ರ ಹಿಂದೆ ಮೀಸಲಾತಿ ಇತ್ತು. ಮೋದಿ ನೇತೃತ್ವದ ಸರ್ಕಾರವು ಆರ್ಥಿಕವಾಗಿ ಹಿಂದುಳಿದವರಿಗೂ ಮೀಸಲಾತಿ ನೀಡಿದೆ. ಹಾಗಾಗಿ, ಮೀಸಲಾತಿ ವಿಚಾರದಲ್ಲಿ ಯಾವುದೇ ವಿವಾದ ಇಲ್ಲ ಎಂದು ಅವರು ಹೇಳಿದ್ದಾರೆ.

ದಲಿತರು ಬೀದಿಗೆ ಇಳಿಯಲಿದ್ದಾರೆ: ರಾವಣ

‘ಮೀಸಲಾತಿಯ ಬಗ್ಗೆ ಚರ್ಚೆ ಏರ್ಪಡಿಸುವ ಬದಲು, ಜಾತಿ ವ್ಯವಸ್ಥೆಯನ್ನು ಹೋಗಲಾಡಿಸುವ ಬಗ್ಗೆ ಭಾಗವತ್ ಚರ್ಚೆಗೆ ಕರೆಯಬೇಕಿತ್ತು. ಮೀಸಲಾತಿಯನ್ನು ವಿರೋಧಿಸುವವರ ಜತೆಯಲ್ಲಿ ಚರ್ಚೆ ನಡೆಸಲು ಭಾಗವತ್ ಇಚ್ಛಿಸಿದ್ದಾರೆ. ಬದಲಿಗೆ ಮೀಸಲಾತಿಗೆ ಸಂಬಂಧಿಸಿದವರ ಜತೆಯಲ್ಲಿ ಮಾಧ್ಯಮಗಳ ಎದುರಿನಲ್ಲಿ ಚರ್ಚೆ ನಡೆಸಬೇಕು’ ಎಂದು ಭೀಮ್‌ ಆರ್ಮಿ ನಾಯಕ ಚಂದ್ರಶೇಖರ್ ಆಜಾದ್ ಅಲಿಯಾಸ್‌ ರಾವಣ ಸವಾಲು ಹಾಕಿದ್ದಾರೆ.

‘ಜಾತಿ ವ್ಯವಸ್ಥೆಯಿಂದ ನಾವು (ದಲಿತರು) ಎಷ್ಟು ನೊಂದಿದ್ದೇವೆ ಎಂಬುದನ್ನು ಜನರ ಮುಂದೆ ಇಡುತ್ತೇವೆ. ದೇಶಕ್ಕೆ ಸ್ವಾತಂತ್ರ್ಯ ಬಂದು 73 ವರ್ಷಗಳಾಗಿವೆ. ಆದರೆ ದೇಶದ ಜನಸಂಖ್ಯೆಯ ಶೇ 54ರಷ್ಟಿರುವ ದಲಿತರ ಬಳಿ ಸ್ವಲ್ಪವೂ ಜಮೀನು ಇಲ್ಲ. ಮೀಸಲಾತಿ ಕುರಿತು ಚರ್ಚೆಗೆ ಆಹ್ವಾನ ನೀಡುವ ಮೂಲಕ ಆರ್‌ಎಸ್‌ಎಸ್‌ ತನ್ನ ದಲಿತ ವಿರೋಧಿ ಮನಸ್ಥಿತಿಯನ್ನು ಬಹಿರಂಗಪಡಿಸಿದೆ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಜಮ್ಮು–ಕಾಶ್ಮೀರದ ವಿಶೇಷಾಧಿಕಾರ ತೆಗೆದುಹಾಕುವಾಗ ಯಾರೂ ಮಾತನಾಡಲಿಲ್ಲ. ಆದರೆ ಮೀಸಲಾತಿ ವಿಚಾರದಲ್ಲಿ ಸರ್ಕಾರ ಏನನ್ನಾದರು ಮಾಡುವ ಮುನ್ನವೇ ನಾವು ಮಾತನಾಡಲಿದ್ದೇವೆ. ದಲಿತರನ್ನು ದುರ್ಬಲರು ಎಂದು ಪರಿಗಣಿಸಬೇಕಿಲ್ಲ. ಮೀಸಲಾತಿಯನ್ನು ರದ್ದುಪಡಿಸಲು ಸರ್ಕಾರ ಮುಂದಾದರೆ, ದಲಿತರು ಬೀದಿಗೆ ಇಳಿಯಲಿದ್ದಾರೆ’ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT