ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸತ್ತಿನಲ್ಲಿ ಕೃಷಿ ಕಾಯ್ದೆಗಳನ್ನು ಹಿಂಪಡೆಯುವವರೆಗೂ ಹೋರಾಟ: ರಾಕೇಶ್ ಟಿಕಾಯತ್‌

Last Updated 19 ನವೆಂಬರ್ 2021, 5:42 IST
ಅಕ್ಷರ ಗಾತ್ರ

ಗಾಜಿಯಾಬಾದ್‌: ‘ವಿವಾದಾತ್ಮಕ ಮೂರು ಕೃಷಿ ಕಾಯ್ದೆಗಳನ್ನು ಚಳಿಗಾಲದ ಸಂಸತ್ತಿನ ಅಧಿವೇಶನದಲ್ಲಿ ಅಧಿಕೃತವಾಗಿ ಹಿಂದಕ್ಕೆ ಪಡೆದ ನಂತರವೇ ನಾವು ಪ್ರತಿಭಟನೆಯನ್ನು ಕೈಬಿಡುತ್ತೇವೆ’ ಎಂದು ಭಾರತೀಯ ಕಿಸಾನ್ ಒಕ್ಕೂಟದ (ಬಿಕೆಯು) ನಾಯಕ ರಾಕೇಶ್ ಟಿಕಾಯತ್ ಹೇಳಿದ್ದಾರೆ.

ಇದೇ ವೇಳೆ ‘ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಮತ್ತು ಇತರೆ ಬೇಡಿಕೆಗಳ ಕುರಿತು ಕೇಂದ್ರ ಸರ್ಕಾರ ರೈತರೊಂದಿಗೆ ಚರ್ಚಿಸಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ಬೆಳಿಗ್ಗೆ ಮೂರು ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವ ನಿರ್ಧಾರ ಪ್ರಕಟಿಸಿದ ನಂತರಬಿಕೆಯು ರಾಷ್ಟ್ರೀಯ ವಕ್ತಾರರೂ ಆಗಿರುವ ರಾಕೇಶ್ ಅವರು ಈ ಕುರಿತು ಟ್ವೀಟ್‌ ಮಾಡಿದ್ದಾರೆ.

‘ಪ್ರತಿಭಟನೆಯನ್ನು ತಕ್ಷಣವೇ ಹಿಂಪಡೆಯುವುದಿಲ್ಲ. ಸಂಸತ್ತಿನಲ್ಲಿ ಕೃಷಿ ಕಾನೂನುಗಳನ್ನು ರದ್ದುಪಡಿಸುವ ದಿನಕ್ಕಾಗಿ ನಾವು ಕಾಯುತ್ತೇವೆ. ಎಂಎಸ್‌ಪಿ ಹಾಗೂ ಇತರೆ ವಿಷಯಗಳ ಬಗ್ಗೆಯೂ ಸರ್ಕಾರ ರೈತರೊಂದಿಗೆ ಮಾತನಾಡಬೇಕು’ ಎಂದು ಟಿಕಾಯತ್ ಹೇಳಿದ್ದಾರೆ.

ಬಿಕೆಯು ಉಗ್ರಾಹಾನ್ ಬಣ ಸ್ವಾಗತ (ನವದೆಹಲಿ ವರದಿ): ಪ್ರಧಾನಿ ನರೇಂದ್ರ ಮೋದಿಯವರು ವಿವಾದಾತ್ಮಕ ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸಲು ತೆಗೆದುಕೊಂಡ ನಿರ್ಧಾರವನ್ನು ಭಾರತೀಯ ಕಿಸಾನ್ ಒಕ್ಕೂಟದ (ಬಿಕೆಯು) ಉಗ್ರಾಹಾನ್‌ ಬಣ ಸ್ವಾಗತಿಸಿದೆ.

ಗುರುನಾನಕ್ ಜಯಂತಿಯ ದಿನದಂದು ಪ್ರಧಾನಿಯವರು ಕೈಗೊಂಡಿರುವ ಈ ನಿರ್ಧಾರ ಉತ್ತಮವಾಗಿದೆ ಎಂದು ಬಣದ ನಾಯಕ ಜೋಗಿಂದರ್ ಸಿಂಗ್ ಉಗ್ರಾಹಾನ್ ತಿಳಿಸಿದ್ದಾರೆ.

ಪ್ರಧಾನಿಗೆ ಧನ್ಯವಾದ ಸಲ್ಲಿಸಿದ ಅಮರಿಂದರ್ ಸಿಂಗ್‌ (ಚಂಡೀಗಡ ವರದಿ): ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯಲು ನಿರ್ಧರಿಸಿರುವುದಾಗಿ ಘೋಷಿಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅಭಿನಂದನೆ ಸಲ್ಲಿಸಿದ್ದಾರೆ.

’ಬಹಳ ಒಳ್ಳೆಯ ಸುದ್ದಿ ಇದು. ಪಂಜಾಬ್‌ನ ಪ್ರತಿ ವ್ಯಕ್ತಿಯ ಬೇಡಿಕೆಗಳಿಗೆ ಸಮ್ಮತಿಸಿದ್ದಕ್ಕಾಗಿ ಮತ್ತು ಗುರುನಾನಕ್ ಜಯಂತಿಯ ಪುಣ್ಯದಿನದಂದು ಮೂರು ಕಾಯ್ದೆಗಳನ್ನು ರದ್ದುಪಡಿಸುವ ನಿರ್ಧಾರ ಪ್ರಕಟಿಸಿದ್ದಕ್ಕಾಗಿ ಪ್ರಧಾನಿ ಮೋದಿಯವರಿಗೆ ಧನ್ಯವಾದಗಳು. ರೈತರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರ ಕೆಲಸ ಮಾಡುತ್ತದೆ ಎಂದು ನನಗೆ ವಿಶ್ವಾಸವಿದೆ’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT