ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸರ 12 ತಂಡಗಳಿಂದ ಪುಣೆ ಪೋಶೆ ಕಾರು ಅಪಘಾತ ಪ್ರಕರಣ ತನಿಖೆ

ಸುಮಾರು 100 ಪೊಲೀಸರಿಂದ ಬಹು ಆಯಾಮದಲ್ಲಿ ಪರಿಶೀಲನೆ
Published 2 ಜೂನ್ 2024, 15:59 IST
Last Updated 2 ಜೂನ್ 2024, 15:59 IST
ಅಕ್ಷರ ಗಾತ್ರ

ಪುಣೆ: ಪೋಶೆ ಕಾರು ಅಪಘಾತ ಪ್ರಕರಣದಲ್ಲಿ ಕಾನೂನು ಸಂಘರ್ಷಕ್ಕೆ ಒಳಗಾಗಿರುವ 17 ವರ್ಷ ವಯಸ್ಸಿನ ಬಾಲಕನ ಪೋಷಕರು, ರಕ್ತದ ಮಾದರಿಯನ್ನು ಬದಲಿಸುವ ಸಲುವಾಗಿ ಸಸೂನ್ ಆಸ್ಪತ್ರೆಗೆ ಭೇಟಿ ನೀಡಿದ್ದಾಗಿ ಪುಣೆಯ ನ್ಯಾಯಾಲಯವೊಂದಕ್ಕೆ ಭಾನುವಾರ ತಿಳಿಸಿದ್ದಾರೆ.

ಅಪಘಾತ ಪ್ರಕರಣದಲ್ಲಿ ತಮ್ಮ ಮಗನ ಪರವಾಗಿ ದಂಪತಿಯು ಸಾಕ್ಷ್ಯನಾಶಕ್ಕೆ ಮುಂದಾಗಿತ್ತು. ಹೀಗಾಗಿ ಅವರ ಪೊಲೀಸ್ ಬಂಧನದ ಅವಧಿಯನ್ನು ವಿಸ್ತರಿಸಬೇಕು ಎಂದು ಪೊಲೀಸರು ನ್ಯಾಯಾಲಯಕ್ಕೆ ಮನವಿ ಮಾಡಿದರು. ಈ ವೇಳೆ ದಂಪತಿಯು ಆಸ್ಪತ್ರೆಗೆ ಭೇಟಿ ನೀಡಿದ್ದ ಕುರಿತು ಪೊಲೀಸರು ಮಾಹಿತಿ ನೀಡಿದರು.

ತಮ್ಮ ರಕ್ತದ ಮಾದರಿಯೊಂದಿಗೆ ಮಗನ ರಕ್ತದ ಮಾದರಿಯನ್ನು ಬದಲಾಯಿಸಿದ್ದ ಆರೋಪ ಮೇಲೆ ತಾಯಿ ಶಿವಾನಿ ಅಗರ್ವಾಲ್‌ ಅವರನ್ನು ಪೊಲೀಸರು ಜೂನ್‌ 1ರಂದು ಬಂಧಿಸಿದ್ದರು. 

100 ಪೊಲೀಸರ ನೇಮಕ

ತನಿಖೆಯನ್ನು ಬಹು ಆಯಾಮದಲ್ಲಿ ನಡೆಸುವ ಸಲುವಾಗಿ 100  ಪೊಲೀಸ್‌ ಸಿಬ್ಬಂದಿಯನ್ನು ಒಳಗೊಂಡಿರುವ ಹತ್ತಕ್ಕೂ ಹೆಚ್ಚು ತಂಡಗಳನ್ನು ರಚಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

‘ಈ ಪ್ರಕರಣದ ತನಿಖೆಯನ್ನು ಪರಿಣಾಮಕಾರಿಯಾಗಿ ನಡೆಸುವ ಸಲುವಾಗಿ ನಾವು ಹಲವು ತಂಡಗಳನ್ನು ನಿಯೋಜಿಸಿದ್ದೇವೆ. ಅಧಿಕಾರಿಗಳೂ ಸೇರಿ 8–10 ಪೊಲೀಸರು ಪ್ರತಿ ತಂಡಗಳಲ್ಲೂ ಇದ್ದಾರೆ. ಪ್ರಕರಣದ ಹಲವು ಆಯಾಮಗಳನ್ನು ಪರಿಶೀಲಿಸುತ್ತಿದ್ದೇವೆ’ ಎಂದು ಹೆಚ್ಚುವರಿ ಪೊಲೀಸ್‌ ಆಯುಕ್ತ (ಅಪರಾಧ) ಶೈಲೇಶ್‌ ಬಲ್ಕವಾಡೆ ಅವರು ಹೇಳಿದ್ದಾರೆ.

ಇದೇ ವೇಳೆ, ಬಾಲಕನ ತಾಯಿಯ ಉಪಸ್ಥಿತಿಯಲ್ಲಿ ಬಾಲಕನ ಜೊತೆ ಪೊಲೀಸರು ವೀಕ್ಷಣಾ ಗೃಹದಲ್ಲಿ ಒಂದು ಗಂಟೆಗೂ ಹೆಚ್ಚು ಸಮಯ ಮಾತನಾಡಿದರು.

ಘಟನೆಗೆ ಸಂಬಂಧಿಸಿ ಪೊಲೀಸರು ಈಗಾಗಲೇ ಮೂರು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಮೊದಲನೆಯ ಎಫ್‌ಐಆರ್‌ ಅಪಘಾತಕ್ಕೆ ಸಂಬಂಧಿಸಿದ್ದು. ಎರಡನೆಯ ಎಫ್‌ಐಆರ್‌ ಅನ್ನು ಹದಿಹರೆಯದವನಿಗೆ ಮದ್ಯ ಪೂರೈಕೆ ಮಾಡಿದ ಮದ್ಯದಂಗಡಿ ವಿರುದ್ಧ ದಾಖಲಿಸಲಾಗಿದೆ. ತಮ್ಮ ಮನೆಯ ಚಾಲಕನನ್ನು ಈ ಪ್ರಕರಣದಲ್ಲಿ ಸಿಕ್ಕಿಸಲು ಪ್ರಯತ್ನಿಸಿದ್ದಕ್ಕಾಗಿ ಬಾಲಕನ ತಂದೆ ವಿರುದ್ಧ ಮೂರನೇ ಎಫ್‌ಐಆರ್‌ ಅನ್ನು ದಾಖಲಿಸಲಾಗಿದೆ. ಬಾಲಕನಿಗೆ ಕಾರು ಚಾಲನೆ ಮಾಡಲು ಅನುವು ಮಾಡಿಕೊಟ್ಟದ್ದಕ್ಕಾಗಿ ಆತನ ತಂದೆ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.

ಮೇ 19ರಂದು ನಡೆದ ಪೋಶೆ ಕಾರು ಅಪಘಾತದಲ್ಲಿ ಇಬ್ಬರು ಟೆಕಿಗಳು ಮೃತಪಟ್ಟಿದ್ದರು. 

ಜೂನ್ 5ರವರೆಗೆ ಬಾಲಕನ ಪೋಷಕರು ಪೊಲೀಸ್‌ ವಶಕ್ಕೆ

ಪೋಶೆ ಕಾರು ಅಪಘಾತ ಮಾಡಿದ ಆರೋಪ ಹೊತ್ತಿರುವ ಬಾಲಕನ ಪೋಷಕರನ್ನು ಜೂನ್‌ 5ರವರೆಗೆ ಪೊಲೀಸ್ ವಶಕ್ಕೆ ನೀಡುವಂತೆ ಪುಣೆ ಹೈಕೋರ್ಟ್‌ ಆದೇಶಿಸಿದೆ. ಸಾಕ್ಷ್ಯನಾಶಕ್ಕೆ ಪ್ರಯತ್ನಿಸಿದ ಆರೋಪದ ಮೇಲೆ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಸಾಕ್ಷ್ಯನಾಶ ಮಾಡುವ ಸಲುವಾಗಿ ಬಾಲಕನ ರಕ್ತದ ಮಾದರಿಯನ್ನು ಬದಲಿಸಲು ದಂಪತಿ ಸಂಚು ಮಾಡಿದ್ದರು. ಇದಕ್ಕಾಗಿ ಅವರು ಸರ್ಕಾರಿ ಆಸ್ಪತ್ರೆಗೆ ತೆರಳಿ ಅಲ್ಲಿಯ ಸಿಬ್ಬಂದಿಯಿಂದ ನೆರವು ಪಡೆದಿದ್ದರು ಎಂದು ಪೊಲೀಸರು ನ್ಯಾಯಾಲಯಕ್ಕೆ ಹೇಳಿದರು.  ಪ್ರತಿವಾದ ಮಂಡಿಸಿದ ಆರೋಪಿಗಳ ಪರ ವಕೀಲರು ಪೊಲೀಸರು ತಮ್ಮ ಕಕ್ಷಿದಾರರ ಮನೆಯಲ್ಲಿ ಈಗಾಗಲೇ ಶೋಧ ನಡೆಸಿದ್ದಾರೆ. ಸಿ.ಸಿ.ಟಿ.ವಿ. ಕ್ಯಾಮರಾಗಳನ್ನು ಪರಿಶೀಲಿಸಿದ್ದಾರೆ. ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 201 (ಸಾಕ್ಷ್ಯನಾಶಕ್ಕೆ ಯತ್ನ) ಅಡಿ ಪ್ರಕರಣ ದಾಖಲಿಸಲಾಗಿದೆ. ಇದು ಜಾಮೀನಿಗೆ ಅರ್ಹವಾದ ಪ್ರಕರಣವಾಗಿದ್ದು ಅವರನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಬೇಕು ಎಂದು ನ್ಯಾಯಾಲಯಕ್ಕೆ ಕೋರಿದರು.  ಎರಡೂ ಕಡೆಯ ವಾದ ಆಲಿಸಿದ ನ್ಯಾಯಾಲಯವು ಈ ನಿರ್ದೇಶನ ನೀಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT