ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪುಣೆ ಪೋಶೆ ಕಾರು ಅಪಘಾತ ಪ್ರಕರಣ: ರಕ್ತದ ಮಾದರಿ ಬದಲಿಸಿದ ಇಬ್ಬರು ವೈದ್ಯರ ಬಂಧನ

Published 27 ಮೇ 2024, 4:34 IST
Last Updated 27 ಮೇ 2024, 4:34 IST
ಅಕ್ಷರ ಗಾತ್ರ

ಮುಂಬೈ: ಬಹುಚರ್ಚಿತ ವಿಲಾಸಿ ಪೋಶೆ ಕಾರು ಅಪಘಾತ ಪ್ರಕರಣದಲ್ಲಿ, ಪೊಲೀಸರು ಸಂಗ್ರಹಿಸಿದ್ದ, 17 ವರ್ಷ ವಯಸ್ಸಿನ ಬಾಲಕನ ರಕ್ತದ ಮಾದರಿಯನ್ನು ಕಸದಬುಟ್ಟಿಗೆ ಎಸೆದು ಬೇರೊಬ್ಬರ ರಕ್ತವನ್ನು ಇರಿಸಿದ್ದ ಬೆಳವಣಿಗೆ ಬಯಲಾಗಿದೆ.

ಬಾಲಕನ ತಂದೆಯ ಆಮಿಷಕ್ಕೆ ಒಳಗಾಗಿ ಈ ಕೃತ್ಯ ಎಸಗಿದ್ದ ಸಾಸೂನ್‌ ಸರ್ಕಾರಿ ಆಸ್ಪತ್ರೆಯ ಇಬ್ಬರು ವೈದ್ಯರು, ಒಬ್ಬ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಕೋರ್ಟ್‌ಗೆ ಹಾಜರುಪಡಿಸಿದ್ದು, ಸ್ಥಳೀಯ ಜೆಎಂಎಫ್‌ಸಿ ಕೋರ್ಟ್‌ನ ನ್ಯಾಯಾಧೀಶ ಎ.ಎ.ಪಾಂಡೆ ಅವರು ಮೇ 30ರ ವರೆಗೆ ಪೊಲೀಸರ ವಶಕ್ಕೆ ಒಪ್ಪಿಸಿದರು.

ಸಾಸೂನ್‌ ಸರ್ಕಾರಿ ಆಸ್ಪತ್ರೆಯ ಪ್ರಯೋಗಾಲಯ ವಿಭಾಗದ ಮುಖ್ಯಸ್ಥ ಡಾ.ಅಜಯ್‌ ತಾವರೆ, ಮುಖ್ಯ ವೈದ್ಯಾಧಿಕಾರಿ ಡಾ.ಶ್ರೀಹರಿ ಹಾಲನೂರ್ ಮತ್ತು ಗುಮಾಸ್ತ ಅತುಲ್‌ ಘಾಟ್‌ಕಾಂಬ್ಳೆ ಬಂಧಿತರು. ‘ಬಂಧಿತ ವೈದ್ಯರ ವಿರುದ್ಧ ಸಾಕ್ಷ್ಯಗಳ ನಾಶ ಕೃತ್ಯದಲ್ಲಿ ಭಾಗಿಯಾದ ಆರೋಪವಿದೆ’ ಪೊಲೀಸ್ ಕಮೀಷನರ್ ಅಮಿತೇಶ್‌ ಕುಮಾರ್‌ ತಿಳಿಸಿದರು.

‘ಬಾಲಕನ ತಂದೆ ವೈದ್ಯರಿಗೆ ಹಲವು ಬಾರಿ ಪೋನ್‌ ಕರೆ ಮಾಡಿದ್ದು, ಬಾಲಕನ ರಕ್ತದ ಮಾದರಿಯನ್ನು ಬದಲಿಸುವಂತೆ ಆಮಿಷವನ್ನು ಒಡ್ಡಿದ್ದರು. ವೈದ್ಯರ ಕೃತ್ಯದಿಂದಾಗಿ ಸಾಸೂನ್ ಆಸ್ಪತ್ರೆ ಪ್ರಯೋಗಾಲಯದ ವರದಿಯಲ್ಲಿ ‘ಬಾಲಕನ ರಕ್ತದಲ್ಲಿ ಮದ್ಯದ ಅಂಶವಿದ್ದ ಮಾಹಿತಿ ಉಲ್ಲೇಖವಾಗಿರಲಿಲ್ಲ’ ಎಂದು ಕಮೀಷನರ್ ತಿಳಿಸಿದರು.

ರಕ್ತದ ಮಾದರಿ ಬದಲಿಸಲು ಕೆಲ ಹಣಕಾಸು ವಹಿವಾಟು ನಡೆದಿದೆ. ಈ ಸಂಬಂಧ ತನಿಖೆಯ ಭಾಗವಾಗಿ ವೈದ್ಯರ ಮನೆಗಳಲ್ಲಿ ತಪಾಸಣೆ ನಡೆಸಬೇಕಾಗಿದೆ. 10 ದಿನ ನಮ್ಮ ವಶಕ್ಕೆ ನೀಡಬೇಕು ಎಂದು ಪೊಲೀಸರು ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು.

‘ಬಾಲಕನ ರಕ್ತದ ಬದಲಿಗೆ ಇರಿಸಲು ಯಾರ ರಕ್ತ ಸಂಗ್ರಹಿಸಲಾಗಿತ್ತು ಎಂಬ ಬಗ್ಗೆ ತನಿಖೆ ನಡೆದಿದೆ. ಆಸ್ಪತ್ರೆಯ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯ ಸಂಗ್ರಹಿಸಲಾಗಿದೆ. ಈ ಬೆಳವಣಿಗೆ ಬಳಿಕ ಬಾಲಕನ ವಿರುದ್ಧ ದಾಖಲಿಸಿದ್ದ ಪ್ರಕರಣದಲ್ಲಿ ಐಪಿಸಿ ಸೆಕ್ಷನ್‌ 201 (ಸಾಕ್ಷ್ಯ ನಾಶ) ಮತ್ತು 120 ಬಿ (ಕ್ರಿಮಿನಲ್ ಸಂಚು) ಅನ್ನೂ ಸೇರಿಸಲಾಗಿದೆ’ ಎಂದು ವಿವರಿಸಿದರು.

ಡಾ.ತಾವರೆ ನಿರ್ದೇಶನದಂತೆ ಬಾಲಕನ ರಕ್ತದ ಮಾದರಿ ಬದಲಿಸಿದ್ದು, ಪೊಲೀಸರು ಸಂಗ್ರಹಿಸಿದ್ದ ಮಾದರಿಯನ್ನು ಕಸದ ಬುಟ್ಟಿಗೆ ಎಸೆಯಲಾಗಿತ್ತು. ಮುಂಜಾಗ್ರತೆಯಾಗಿ ತನಿಖಾಧಿಕಾರಿಗಳು ಡಿಎನ್‌ಎ ಮಾದರಿ ಪರೀಕ್ಷೆಗೆ ಹೆಚ್ಚುವರಿಯಾಗಿ ರಕ್ತದ ಮಾದರಿ ಸಂಗ್ರಹಿಸಿ, ಅದನ್ನು ಬೇರೊಂದು ಆಸ್ಪತ್ರೆಗೆ ಪರೀಕ್ಷೆಗೆ ಕಳುಹಿಸಲಾಗಿತ್ತು’ ಎಂದರು.

ಸಾಸೂನ್ ಆಸ್ಪತ್ರೆ ಮತ್ತು ಬೇರೊಂದು ಆಸ್ಪತ್ರೆಯ ವರದಿಯಲ್ಲಿ ಸಾಮ್ಯತೆ ಇರಲಿಲ್ಲ. ಬೇರೊಂದು ಆಸ್ಪತ್ರೆ ವರದಿಯಿಂದ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತದ ಮಾದರಿ ಬದಲಾಗಿದೆ ಎಂಬುದು ಗೊತ್ತಾಯಿತು. ಇಬ್ಬರು ವೈದ್ಯರಿಗೂ ಪೊಲೀಸರು ಹೆಚ್ಚುವರಿಯಾಗಿ ಮಾದರಿ ಸಂಗ್ರಹಿಸಿರುವ ಮಾಹಿತಿ ಇರಲಿಲ್ಲ ಎಂದರು.

ಪೋಶೆ ಕಾರು ಅಪಘಾತಕ್ಕೆ ಸಂಬಂಧಿಸಿದಂತೆ ಬಾಲಕನ ತಂದೆ, ರಿಯಲ್‌ ಎಸ್ಟೇಟ್‌ ಉದ್ಯಮಿ ವಿಶಾಲ್ ಅಗರವಾಲ್ ಹಾಗೂ ತಾತ ಸುರೇಂದ್ರ ಅಗರವಾಲ್ ಅವರನ್ನು ಈಗಾಗಲೇ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. 

ಬಾಲಕನ ತಂದೆಯನ್ನು ಸಹ ಆರೋಪಿ ಎಂದು ಹೆಸರಿಸಲಾಗಿದೆ. ಬಾಲ ನ್ಯಾಯ ಮಂಡಳಿಯು ಬಾಲಕನಿಗೆ ಜಾಮೀನು ನೀಡಿದ್ದು, ರಸ್ತೆ ಸುರಕ್ಷತೆ ಕುರಿತು ಪ್ರಬಂಧ ಬರೆಯಲು ಆದೇಶಿಸಿತ್ತು. ಪ್ರಸ್ತುತ ಆತನನ್ನು ಬಾಲಮಂದಿರಕ್ಕೆ ಕಳುಹಿಸಲಾಗಿದೆ.

ಮೇ 19ರಂದು ಅಪಘಾತ ಸಂಭವಿಸಿದ್ದು, ಬಾಲಕ ಚಾಲನೆ ಮಾಡುತ್ತಿದ್ದ ಕಾರು ಡಿಕ್ಕಿಯಾಗಿ ಬೈಕ್‌ನಲ್ಲಿ ತೆರಳುತ್ತಿದ್ದ 24 ವರ್ಷದ ಇಬ್ಬರು ಐ.ಟಿ ವೃತ್ತಿಪರರು ಸತ್ತಿದ್ದರು. ಅಪಘಾತವಾದಾಗ ಬಾಲಕನು ಮದ್ಯಪಾನ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದರು.

ವಶಕ್ಕೆ ಪಡೆಯಲು ನ್ಯಾಯಾಲಯ ಒಪ್ಪಿಗೆ
ಪುಣೆ: ಪೋಶೆ ಕಾರು ಅಪಘಾತ ಪ್ರಕರಣ ಸಂಬಂಧ ಯರವಾಡ ಕೇಂದ್ರ ಕಾರಾಗೃಹದಲ್ಲಿರುವ ಬಾಲಕನ ತಂದೆಯನ್ನು ಪೊಲೀಸ್‌ ವಶಕ್ಕೆ ಪಡೆಯಲು ಸ್ಥಳೀಯ ನ್ಯಾಯಾಲಯ ಅನುಮೋದನೆ ನೀಡಿದೆ. ಅಪಹರಣ ಮತ್ತು ಬಾಲಕನ ತಂದೆ ವಿಶಾಲ್‌ ಅಗರವಾಲ್‌ ಅವರ ಕಾರು ಚಾಲಕನಿಂದ ದುರುದ್ದೇಶದಿಂದ ತಪ್ಪೊಪ್ಪಿಗೆ ಆರೋಪಗಳಿಗೆ ಸಂಬಂಧಿಸಿದ ಪ್ರಕರಣ ಸಂಬಂಧ ವಶಕ್ಕೆ ಪಡೆಯಲು ಕೋರ್ಟ್ ಸಮ್ಮತಿಸಿದೆ. ಬಾಲಕನ ತಂದೆ ಎರಡು ಪಬ್‌ಗಳ ವ್ಯವಸ್ಥಾಪಕರು ಮಾಲೀಕರ ವಿರುದ್ಧ ದಾಖಲಿಸಿರುವ ಪ್ರಕರಣದ ಸಂಬಂಧ ವಿಶಾಲ್‌ ಅಗರವಾಲ್‌ರನ್ನು ಬಂಧಿಸಲಾಗಿದೆ. ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.  ದುರುದ್ದೇಶಪೂರ್ವಕ ತಪ್ಪೊಪ್ಪಿಗೆ ಸಂಬಂಧಿಸಿ ತಮ್ಮ ವಶಕ್ಕೆ ಒಪ್ಪಿಸುವಂತೆ ಕೋರಿ ಪೊಲೀಸರು ಅರ್ಜಿ ಸಲ್ಲಿಸಿದ್ದರು.  

ಮೂರು ಪ್ರತ್ಯೇಕ ಪ್ರಕರಣ 

ಮುಂಬೈ: ಪುಣೆಯ ಪೋಶೆ ಕಾರು ಅಪಘಾತಕ್ಕೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೂ ಮೂರು ಪ್ರತ್ಯೇಕ ಪ್ರಕರಣ ದಾಖಲಿಸಿದ್ದಾರೆ. ಮೊದಲ ಪ್ರಕರಣದಲ್ಲಿ ಐಪಿಸಿ 304 ಎ (ವೇಗ ನಿರ್ಲಕ್ಷ್ಯತನದ ‌ವಾಹನ ಚಾಲನೆ) ಐಪಿಸಿ 304 (ಉದ್ದೇಶಪೂರ್ವಕವಲ್ಲದ ಕೃತ್ಯ) ಹಾಗೂ ಮೋಟಾರು ವಾಹನ ಕಾಯ್ದೆಯಡಿ ಬಾಲಕನು ಚಾಲನಾ ರಹದಾರಿ ಹೊಂದಿರಲಿಲ್ಲ ವಾಹನಕ್ಕೆ ನೋಂದಣಿ ಸಂಖ್ಯೆ ಇರಲಿಲ್ಲ ಎಂಬ ಬಗ್ಗೆ ಪ್ರಕರಣ ದಾಖಲಿಸಲಾಗಿದೆ.

ಎರಡನೆಯದರಲ್ಲಿ ಬಾಲಕನ ತಂದೆ ವಿಶಾಲ್‌ ಅಗರವಾಲ್ ವಿರುದ್ಧ ಮಗನಿಗೆ ಮದ್ಯ ಕುಡಿದು ವಾಹನ ಚಲಾಯಿಸಲು ಅವಕಾಶ ನೀಡಿದ್ದಕಾಗಿ ಬಾಲನ್ಯಾಯ ಕಾಯ್ದೆ ಸೆಕ್ಷನ್‌ 75 77ರಡಿ ಪ್ರಕರಣ ದಾಖಲಾಗಿದೆ.   ಮೂರನೆಯದರಲ್ಲಿ ಬಾಲಕನ ತಾತ ಸುರೇಂದ್ರ ಕುಮಾರ್ ವಿರುದ್ಧ ದುರುದ್ದೇಶದಿಂದ ತಪ್ಪೊಪ್ಪಿಗೆ ನೀಡುವಂತೆ ಕುಟುಂಬದ ವಾಹನ ಚಾಲಕನಿಗೆ ಬೆದರಿಕೆ ಒಡ್ಡಿದ್ದ ಆರೋಪದಡಿ ಮೊಕದ್ದಮೆಯನ್ನು ದಾಖಲಿಸಲಾಗಿದೆ.

‘ಶಾಶ್ವತ ನೋಂದಣಿ ಸಂಖ್ಯೆಗೆ ₹1758 ಪಾವತಿ ಆಗಿರಲಿಲ್ಲ‘

ಪುಣೆ: ಪೋಶೆ ಕಾರು ತಯಾರಕ ಸಂಸ್ಥೆಯ ಪ್ರತಿನಿಧಿಗಳು ಸೋಮವಾರ ಯರವಾಡ ಪೊಲೀಸ್ ಠಾಣೆಗೆ ತೆರಳಿದ್ದು ಅಪಘಾತಕ್ಕೀಡಾಗಿದ್ದ ವಿಲಾಸಿ ಕಾರಿನ ತಾಂತ್ರಿಕ ಪರಿಶೀಲನೆ ನಡೆಸಿದರು.  ಪೋಶೆ ಕಾರು ತಯಾರಕ ಸಂಸ್ಥೆಯ ಪ್ರತಿನಿಧಿಗಳು ಪ್ರಾದೇಶಿಕ ಸಾರಿಗೆ ಸಂಸ್ಥೆಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ತಾಂತ್ರಿಕ ಪರಿಶಿಲನೆ ನಡೆಸಿದರು ಎಂದು ಆರ್‌‌ಟಿಒ ಸಂಜೀವ್‌ ಭೋರ್ ತಿಳಿಸಿದರು.

ಶಾಶ್ವತ ನೋಂದಣಿ ಸಂಖ್ಯೆಗಾಗಿ ಮಾಲೀಕರು ₹1758 ಪಾವತಿಸಿರಲಿಲ್ಲ. ಹೀಗಾಗಿ ಈ ಪ್ರಕ್ರಿಯೆಯು ಬಾಕಿ ಉಳಿದಿತ್ತು ಎಂದು ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿಗಳು ತಿಳಿಸಿದರು. ಮಹಾರಾಷ್ಟ್ರ ಪ್ರಾದೇಶಿಕ ಸಾರಿಗೆ ಕಮೀಷನರ್ ವಿವೇಕ್ ಭೀಮಣ್ಣವರ್ ‘ಕಾರನ್ನು ಬೆಂಗಳೂರಿನ ಡೀಲರ್‌ ಮಾರ್ಚ್‌ನಲ್ಲಿ ತರಿಸಿದ್ದರು. ಅಲ್ಲಿಂದ ತಾತ್ಕಾಲಿಕ ನೋಂದಣಿ ಆಧರಿಸಿ ಮಹಾರಾಷ್ಟ್ರಕ್ಕೆ ಕಳುಹಿಸಲಾಗಿತ್ತು’ ಎಂದು ಈ ಹಿಂದೆ ಮಾಹಿತಿ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT