ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಪೋಶೆ ಕಾರು ಅಪಘಾತ ಪ್ರಕರಣ: ಬಾಲಕನ ಅಜ್ಜನನ್ನು ಬಂಧಿಸಿದ ಪುಣೆ ಪೊಲೀಸರು

Published 25 ಮೇ 2024, 5:22 IST
Last Updated 25 ಮೇ 2024, 5:22 IST
ಅಕ್ಷರ ಗಾತ್ರ

ಪುಣೆ: ‘ಪೋಶೆ ಕಾರು ಅಪಘಾತ ಪ್ರಕರಣದಲ್ಲಿ 17 ವರ್ಷದ ಬಾಲಕ ಕಾರು ಚಾಲನೆ ಮಾಡುತ್ತಿರಲಿಲ್ಲವೆಂದು ಬಿಂಬಿಸಲು ಪ್ರಯತ್ನಿಸಿದ್ದಕ್ಕೆ ಸಂಬಂಧಿಸಿ ಬಾಲಕನ ಅಜ್ಜನನ್ನು ಬಂಧಿಸಲಾಗಿದೆ ಎಂದು ಪುಣೆ ಪೊಲೀಸ್ ಆಯುಕ್ತ ಅಮಿತೇಶ್ ಕುಮಾರ್ ಶನಿವಾರ ಹೇಳಿದ್ದಾರೆ.

ಬಾಲಕನ ಅಜ್ಜನ ವಿರುದ್ಧ ಐಪಿಸಿ ಸೆಕ್ಷನ್‌ 365 ಮತ್ತು 368 ಅಡಿಯಲ್ಲಿ ಪ್ರತ್ಯೇಕ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅಮಿತೇಶ್ ಮಾಹಿತಿ ನೀಡಿದ್ದಾರೆ ಎಂದು ಸುದ್ದಿಸಂಸ್ಥೆ ‘ಎಎನ್‌ಐ’ ವರದಿ ಮಾಡಿದೆ.

‘ಕಾರನ್ನು ಯಾರೂ ಚಾಲನೆ ಮಾಡುತ್ತಿದ್ದರು ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ. ಈ ಸಂಬಂಧ ಬಾಲಕನ ಕುಟುಂಬದ ವಯಸ್ಕ ಚಾಲಕನ ಹೇಳಿಕೆಯನ್ನು ದಾಖಲಿಸಿಕೊಂಡಿದ್ದೇವೆ. ಆತನ ಹೇಳಿಕೆ ಮಹತ್ವದ್ದಾಗಿದೆ’ ಎಂದು ಅವರು ಹೇಳಿದ್ದಾರೆ.

ಪ್ರಕರಣ ಸಂಬಂಧ ಶುಕ್ರವಾರ ಮಾತನಾಡಿದ್ದ ಅಮಿತೇಶ್ ಕುಮಾರ್, ‘ಪ್ರಕರಣ ದಾಖಲಿಸಿಕೊಳ್ಳುವಾಗ ಕೆಲವು ಪೊಲೀಸರು ಲೋಪ ಎಸಗಿರುವುದು ತನಿಖೆಯಿಂದ ತಿಳಿದು ಬಂದಿದೆ. ಈ ಕುರಿತು ಇಬ್ಬರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ. ಪ್ರಕರಣದ ತನಿಖೆಯನ್ನು ಯರವಾಡ ಠಾಣೆಯಿಂದ ಅಪರಾಧ ವಿಭಾಗಕ್ಕೆ ವರ್ಗಾಯಿಸಲಾಗಿದೆ’ ಎಂದು ತಿಳಿಸಿದ್ದರು.

‘ಇತ್ತೀಚೆಗೆ ಪುಣೆಯ ಕಲ್ಯಾಣಿನಗರ ಪ್ರದೇಶದಲ್ಲಿ ಪೋಶೆ ಕಾರು ಬೈಕಿಗೆ ಡಿಕ್ಕಿ ಹೊಡೆದು, ಮಧ್ಯಪ್ರದೇಶ ಮೂಲದ ಇಬ್ಬರು ಟೆಕಿಗಳು ಮೃತಪಟ್ಟಾಗ ಕಾರನ್ನು ಚಾಲನೆ ಮಾಡುತ್ತಿದ್ದುದು ಬಾಲಕನ ಕುಟುಂಬದ ವಯಸ್ಕ ಚಾಲಕನೇ ಹೊರತು ಬಾಲಕನಲ್ಲ ಎಂದು ಬಿಂಬಿಸಲು ಪ್ರಯತ್ನಿಸಲಾಗಿದೆ. ಇಂತಹ ಪ್ರಯತ್ನಗಳನ್ನು ಮಾಡಿದವರ ವಿರುದ್ಧ ಐಪಿಸಿಯ ಸೆಕ್ಷನ್ 201 (ಸಾಕ್ಷ್ಯ ನಾಶ) ಅಡಿಯಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಅವರು ಹೇಳಿದ್ದರು.

‘ಅಪಘಾತ ನಡೆದಾಗ ಬಾಲಕ ಕಾರು ಚಾಲನೆ ಮಾಡುತ್ತಿದ್ದ ಎಂಬುದು ಸ್ಪಷ್ಟವಾಗಿ ಗೊತ್ತಾಗಿದೆ. ನಾವು ಈಗಾಗಲೇ ಎಲ್ಲ ಪುರಾವೆಗಳನ್ನು ಸಂಗ್ರಹಿಸಿದ್ದೇವೆ. ಬಾಲಕ ಮನೆಯಿಂದ ಹೊರಬರುವಾಗ ಆತ ಕಾರಿನೊಂದಿಗೆ ಮನೆಯಿಂದ ಹೊರಬಂದಿರುವುದು ಭದ್ರತಾ ರಿಜಿಸ್ಟರ್‌ನಲ್ಲಿ ದಾಖಲಾಗಿದೆ’ ಎಂದಿದ್ದರು.

‘ಕಾರನ್ನು ಬಾಲಕ ಚಾಲನೆ ಮಾಡುತ್ತಿದ್ದ ಎನ್ನುವುದು ತಾಂತ್ರಿಕ ಸಾಕ್ಷ್ಯಗಳು ಮತ್ತು ಸಿ.ಸಿ.ಟಿ.ವಿ. ಕ್ಯಾಮೆರಾಗಳ ದೃಶ್ಯಗಳಿಂದ ದೃಢಪಟ್ಟಿದೆ. ಅಪಘಾತ ನಡೆದಾಗ ಬಾಲಕ ಡ್ರೈವಿಂಗ್‌ ಸೀಟಿನಲ್ಲಿದ್ದದ್ದನ್ನು ಪ್ರತ್ಯಕ್ಷದರ್ಶಿಗಳು ಸಹ ದೃಢಪಡಿಸಿದ್ದಾರೆ’ ಎಂದು ತಿಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT