ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗಾಂಧಿ ಕುಟುಂಬದೊಂದಿಗೆ ರಾಯ್‌ಬರೇಲಿ ಕ್ಷೇತ್ರ: ಕಾಂಗ್ರೆಸ್‌ನ ಅಜಯ್‌ ರಾಯ್‌

ಉತ್ತರ ಪ್ರದೇಶ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಅಜಯ್ ರಾಯ್ ವಿಶ್ವಾಸ
Published 17 ಫೆಬ್ರುವರಿ 2024, 13:05 IST
Last Updated 17 ಫೆಬ್ರುವರಿ 2024, 13:05 IST
ಅಕ್ಷರ ಗಾತ್ರ

ವಾರಾಣಸಿ (ಪಿಟಿಐ): ‘ರಾಯ್‌ಬರೇಲಿ ಲೋಕಸಭಾ ಕ್ಷೇತ್ರವು ಗಾಂಧಿ ಕುಟುಂಬದೊಂದಿಗೆ ಉಳಿಯಲಿದೆ’ ಎಂದು ಉತ್ತರ ಪ್ರದೇಶ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಅಜಯ್‌ ರಾಯ್‌ ಶನಿವಾರ ಇಲ್ಲಿ ತಿಳಿಸಿದರು.

‘ತಲೆತಲಾಂತರದಿಂದಲೂ ರಾಯ್‌ಬರೇಲಿಯ ಜನರು ಗಾಂಧಿ ಕುಟುಂಬದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದಾರೆ. ಈ ಲೋಕಸಭಾ ಕ್ಷೇತ್ರವು ಗಾಂಧಿ ಕುಟುಂಬಕ್ಕೆ ಮೀಸಲಾದದ್ದು. ಆ ಕುಟುಂಬದೊಂದಿಗೆ ಉಳಿಯಲಿದೆ’ ಎಂದು ಅವರು ಮಾಧ್ಯಮ ಸಂವಾದದಲ್ಲಿ ಹೇಳಿದರು.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಗಾಂಧಿ ಕುಟುಂಬದಿಂದ ಯಾರು ಸ್ಪರ್ಧಿಸಲಿದ್ದಾರೆ ಎಂದು ಪತ್ರಕರ್ತರು ಪ್ರಶ್ನಿಸಿದ್ದಕ್ಕೆ, ‘ಯಾರು ಸ್ಪರ್ಧಿಸಬೇಕು ಎಂಬುದನ್ನು ಗಾಂಧಿ ಕುಟುಂಬವೇ ನಿರ್ಧರಿಸಲಿದೆ’ ಎಂದು ಉತ್ತರಿಸಿದರು.

ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ 2004ರಿಂದಲೂ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ವಯೋಸಹಜ ಕಾರಣ ಹಾಗೂ ಆರೋಗ್ಯದ ಸಮಸ್ಯೆಯಿಂದ ರಾಯ್‌ಬರೇಲಿ ಲೋಕಸಭಾ ಕ್ಷೇತ್ರದಿಂದ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಇಲ್ಲಿನ ಮತದಾರರಿಗೆ ಗುರುವಾರ ಪತ್ರ ಮುಖೇನ ತಿಳಿಸಿದ್ದು, ತಮ್ಮ ಕುಟುಂಬದ ಸದಸ್ಯರೇ ಸ್ಪರ್ಧಿಸಲಿದ್ದಾರೆ ಎಂಬ ಸುಳಿವನ್ನು ನೀಡಿದ್ದಾರೆ.

‘ಇನ್ಮುಂದೆ ನೇರವಾಗಿ ನಿಮ್ಮ ಸೇವೆಗೆ ನನಗೆ ಅವಕಾಶವಿರಲ್ಲ. ಆದರೆ ನನ್ನ ಹೃದಯ ಯಾವಾಗಲೂ ನಿಮ್ಮೊಂದಿಗಿರುತ್ತದೆ. ಈ ಹಿಂದಿನಂತೆಯೇ ಮುಂದೆಯೂ ಸಹ ನೀವು ನನ್ನ ಮತ್ತು ನನ್ನ ಕುಟುಂಬಕ್ಕೆ ಬೆಂಬಲವಾಗಿರುತ್ತೀರಿ ಎಂಬುದು ನನಗೆ ಗೊತ್ತಿದೆ’ ಎಂದು ಸೋನಿಯಾ ಹಿಂದಿಯಲ್ಲಿ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ರಾಯ್‌ಬರೇಲಿಯಿಂದ ಸೋನಿಯಾ ಪುತ್ರಿ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT