ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಎಸ್‌ಎಸ್‌ನಿಂದ ಬಹುಸಂಸ್ಕೃತಿ ಬುಡಮೇಲು–ರಾಹುಲ್‌; ರಾಹುಲ್‌ ಅಪ್ರಬುಧ್ಧ–ಬಿಜೆಪಿ

ಬಿಜೆಪಿ, ಮೋದಿ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ವಾಗ್ದಾಳಿ * ಬಿಜೆಪಿ ತಿರುಗೇಟು
Last Updated 24 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಆರ್‌ಎಸ್‌ಎಸ್‌ ಮತ್ತು ಅರಬ್‌ ಜಗತ್ತಿನ ‘ಮುಸ್ಲಿಂ ಬ್ರದರ್‌ಹುಡ್‌’ ಸಿದ್ಧಾಂತಗಳ ನಡುವೆ ಹೆಚ್ಚಿನ ವ್ಯತ್ಯಾಸಗಳಿಲ್ಲ. ಈ ಎರಡೂ ಸಿದ್ಧಾಂತಗಳು ಒಂದೇ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.

ಭಾರತದ ಜೀವಾಳವಾಗಿರುವ ಬಹು ಸಂಸ್ಕೃತಿಯನ್ನು ಆರ್‌ಎಸ್‌ಎಸ್‌ ಬುಡಮೇಲು ಮಾಡಲು ಹೊರಟಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ವರ್ಚಸ್ಸಿಗೆ ಧಕ್ಕೆ ತಂದಿದೆ ಎಂದು ಅವರು ಆರೋಪಿಸಿದ್ದಾರೆ.

ಲಂಡನ್‌ ಸ್ಕೂಲ್‌ ಆಫ್‌ ಎಕಾನಾಮಿಕ್ಸ್‌ ವಿದ್ಯಾರ್ಥಿಗಳ ಜತೆ ಶುಕ್ರವಾರ ನಡೆದ ಸಂವಾದದಲ್ಲಿ ಅವರು, ಆರ್‌ಎಸ್‌ಎಸ್‌, ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಹಣಕಾಸು ಸಚಿವರು ಮತ್ತು ಭಾರತೀಯ ರಿಸರ್ವ್ ಬ್ಯಾಂಕ್‌ ಅನ್ನು (ಆರ್‌ಬಿಐ) ಕತ್ತಲಲ್ಲಿ ಇಟ್ಟು ನೋಟು ರದ್ದು ಕಲ್ಪನೆಯನ್ನು ಪ್ರಧಾನಿ ತಲೆಯಲ್ಲಿ ಆರ್‌ಎಸ್‌ಎಸ್‌ ನೇರವಾಗಿ ತುಂಬಿತು ಎಂದರು.

ರಾಹುಲ್‌ ಆರೋಪಗಳಿಂದ ತೀವ್ರವಾಗಿ ಕೆರಳಿರುವ ಬಿಜೆಪಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.

‘ಭಾರತ ಮತ್ತು ಭಾರತೀಯ ಸಂಸ್ಕೃತಿಯ ಬಗ್ಗೆ ರಾಹುಲ್‌ಗೆ ಜ್ಞಾನ ಇಲ್ಲ. ರಾಷ್ಟ್ರೀಯ ಪಕ್ಷವೊಂದರ ಅಧ್ಯಕ್ಷರಾಗಲು ಅವರು ಅಪ್ರಬುದ್ಧರು’ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ತಿರುಗೇಟು ನೀಡಿದ್ದಾರೆ.

ದೋಕಲಾದಲ್ಲಿ ಚೀನಾ ಸೇನೆ

ಭಾರತ ಗಡಿ ಪ್ರದೇಶ ದೋಕಲಾದಲ್ಲಿ ಚೀನಾ ಸೇನೆ ಇನ್ನೂ ಬೀಡುಬಿಟ್ಟಿದೆ ಎಂದು ರಾಹುಲ್‌ ಗಾಂಧಿ ಇದೇ ವೇಳೆ ಹೇಳಿದ್ದಾರೆ. ದೋಕಲಾ ಸಂಘರ್ಷಕ್ಕೆ ಪ್ರಧಾನಿ ನರೇಂದ್ರ ಮೋದಿ ನೇರ ಕಾರಣ ಎಂದು ಅವರು ಆರೋಪಿಸಿದ್ದಾರೆ.

ದೋಕಲಾ ಸಮಸ್ಯೆ ನಿರ್ವಹಿಸುವಲ್ಲಿ ಮೋದಿ ಸಂಪೂರ್ಣ ಎಡವಿದ್ದಾರೆ. ಪ್ರಧಾನಿ ಎಚ್ಚರಿಕೆಯ ಹೆಜ್ಜೆಗಳನ್ನು ಇಟ್ಟಿದ್ದರೆ ಚೀನಾ ಜತೆಗಿನ ಸಂಘರ್ಷ ತಪ್ಪಿಸಬಹುದಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ದ್ವೇಷ ಬಿತ್ತುತ್ತಿವೆ

ಗುರುವಾರ ರಾತ್ರಿ ಬರ್ಲಿನ್‌ನಲ್ಲಿ ನಡೆದ ಸಾಗರೋತ್ತರ ಭಾರತೀಯ ಕಾಂಗ್ರೆಸ್‌ ಸಮಾರಂಭದಲ್ಲಿ ಮಾತನಾಡಿದ ರಾಹುಲ್‌ ಗಾಂಧಿ, ಆರ್‌ಎಸ್‌ಎಸ್‌ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಸಮಾಜದಲ್ಲಿ ದ್ವೇಷದ ವಿಷಬೀಜ ಬಿತ್ತುವ ಮೂಲಕ ಸಾಮರಸ್ಯ ಕದಡುವ ಮತ್ತು ದೇಶ ಒಡೆಯುವ ಕೆಲಸ ಮಾಡುತ್ತಿವೆ ಎಂದು ಆರೋಪ ಮಾಡಿದ್ದಾರೆ.

ಸಿಖ್‌ ಧರ್ಮೀಯರ ಮೊದಲ ಧರ್ಮಗುರು ಗುರು ನಾನಕ್‌ ದೇವ್‌ ಕಾಲದಿಂದ ಬಂದಿರುವ ‘ವಿವಿಧತೆಯಲ್ಲಿ ಏಕತೆ’ ಮಂತ್ರವನ್ನು ಕಾಂಗ್ರೆಸ್‌ ತನ್ನ ಉಸಿರಾಗಿಸಿಕೊಂಡಿದೆ. ಎನ್‌ಡಿಎ ಸರ್ಕಾರ ಇದಕ್ಕೆ ವಿರುದ್ಧವಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದ್ದರು.

ಭಾರತದ ಯುವ ಜನಾಂಗದ ಭವಿಷ್ಯ ಅಂಧಕಾರದಲ್ಲಿ ಮುಳುಗಿದೆ. ರೈತರ ಆತ್ಮಹತ್ಯೆಗಳು ನಿಲ್ಲುತ್ತಿಲ್ಲ. ಈ ಬಗ್ಗೆ ಕಿಂಚಿತ್ತೂ ತಲೆಕೆಡಿಸಿಕೊಳ್ಳದ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ನಾಯಕರು ಪ್ರಚೋದನಕಾರಿ ಭಾಷಣ ಮಾಡುವುದರಲ್ಲಿ ಮುಳುಗಿದ್ದಾರೆ ಎಂದು ಟೀಕಿಸಿದ್ದಾರೆ.

ಭಾರತದ ಯಾವ ಧರ್ಮವೂ ದ್ವೇಷವನ್ನು ಬೋಧಿಸುವುದಿಲ್ಲ. ಸಮಾಜದ ಸಾಮರಸ್ಯ ಹಾಳು ಮಾಡುವುದು ಭಾರತೀಯ ಸಂಸ್ಕೃತಿ ಅಲ್ಲ. ಅದು ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಸಂಸ್ಕೃತಿ ಎಂದು ನೇರ ವಾಗ್ದಾಳಿ ನಡೆಸಿದ್ದರು.

‘ಮತಬ್ಯಾಂಕ್‌ ರಾಜಕೀಯ’
1984ರಲ್ಲಿ ನಡೆದ ಸಿಖ್‌ ನರಮೇಧದ ಕಳಂಕ ಹೊತ್ತಿರುವ ಕಾಂಗ್ರೆಸ್, ಸಿಖ್‌ ಧರ್ಮಗುರು ಗುರು ನಾನಕ್‌ ಅವರ ಹೆಸರು ಪ್ರಸ್ತಾಪಿಸಿರುವುದು ಹಾಸ್ಯಾಸ್ಪದ ಎಂದು ಬಿಜೆಪಿ ತಿರುಗೇಟು ನೀಡಿದೆ.

ಅಮೃತಸರದ ಸ್ವರ್ಣಮಂದಿರದಲ್ಲಿ ನಡೆದ ಅಮಾನುಷ ಕೃತ್ಯಕ್ಕಾಗಿ ಕಾಂಗ್ರೆಸ್ ಮೊದಲು ಕ್ಷಮೆ ಯಾಚಿಸಲಿ ಎಂದು ಬಿಜೆಪಿ ಕಾರ್ಯದರ್ಶಿ ಆರ್‌.ಪಿ. ಸಿಂಗ್‌ ಹೇಳಿದ್ದಾರೆ.

ರಾಹುಲ್‌ ಗಾಂಧಿ ಮತಬ್ಯಾಂಕ್‌ ರಾಜಕೀಯಕ್ಕಾಗಿ ಸಿಖ್‌ ಜನಾಂಗ ಮತ್ತು ಗುರು ನಾನಕ್‌ ಅವರನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

* ಜಾಗತಿಕ ಮಟ್ಟದಲ್ಲಿ ಭಾರತದ ಬಗ್ಗೆ ಇರುವ ಕಲ್ಪನೆ ಮತ್ತು ಗೌರವವನ್ನು ಆರ್‌ಎಸ್‌ಎಸ್‌ ಬದಲಾಯಿಸಲು ಹೊರಟಿದೆ
-ರಾಹುಲ್‌ ಗಾಂಧಿ, ಕಾಂಗ್ರೆಸ್‌ ಅಧ್ಯಕ್ಷ

* ಭಾರತ ಎಂಬ ಚಿಂತನೆಯನ್ನು ಕೊಲ್ಲುವುದಕ್ಕೆ ಹೊರಟಿರುವ ಸುಪಾರಿ ಹಂತಕರೇ ನೀವು (ರಾಹುಲ್‌)?
-ಸಂಬಿತ್‌ ಪಾತ್ರಾ, ಬಿಜೆಪಿ ವಕ್ತಾರ

ಮುಖ್ಯಾಂಶಗಳು
* ಜರ್ಮನಿ ಮತ್ತು ಬ್ರಿಟನ್‌ಗೆ ಐದು ದಿನಗಳ ಪ್ರವಾಸ ಕೈಗೊಂಡಿರುವ ರಾಹುಲ್‌
* ತಾಂತ್ರಿಕ ಕಾರಣಗಳಿಂದ ಆನ್‌ಲೈನ್‌ನಲ್ಲಿ ನೇರ ಪ್ರಸಾರವಾಗದ ಭಾಷಣ
* ಆರೋಪಗಳಿಂದ ಕೆರಳಿದ ಬಿಜೆಪಿಯಿಂದ ಸಾಲು, ಸಾಲು ಸುದ್ದಿಗೋಷ್ಠಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT