ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಣ್ಣ’ವರು ಲೆಕ್ಕಕ್ಕಷ್ಟೇ ಆಟಕ್ಕಿಲ್ಲ

Last Updated 2 ಡಿಸೆಂಬರ್ 2018, 20:15 IST
ಅಕ್ಷರ ಗಾತ್ರ

ಅಲ್ವರ್‌: ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ವಿರೋಧ ಪಕ್ಷ ಕಾಂಗ್ರೆಸ್‌ ನಡುವೆ ಭಾರಿ ಹಣಾಹಣಿ ಇದೆ. ಆದರೆ, ಇದರ ನಡುವೆಯೇ ಹಲವಾರು ಸಣ್ಣ ಪಕ್ಷಗಳು ಅದೃಷ್ಟ ಪರೀಕ್ಷೆಗೆ ಇಳಿದಿವೆ. ಕೆಲವು ಪಕ್ಷಗಳು ಒಬ್ಬ ಅಭ್ಯರ್ಥಿಯನ್ನು ಮಾತ್ರ ಕಣಕ್ಕೆ ಇಳಿಸಿವೆ.

ಕಡಿಮೆ ಸಂಪನ್ಮೂಲ ಹೊಂದಿರುವ ಈ ಸಣ್ಣ ಪಕ್ಷಗಳು ಹೋರಾಟವೇ ಮುಖ್ಯ ಎಂಬ ಧ್ಯೇಯವನ್ನು ಇಟ್ಟುಕೊಂಡು ಕಣದಲ್ಲಿವೆ. ಕೆಲವರು ಪರ್ಯಾಯ ಸಿದ್ಧಾಂತವನ್ನು ಜನರ ಮುಂದೆ ಇಟ್ಟಿದ್ದಾರೆ. ಯಾವುದಾದರೂ ಒಂದು ರಾಷ್ಟ್ರೀಯ ಪಕ್ಷದ ಅಭ್ಯರ್ಥಿಗಳನ್ನು ಮಾತ್ರ ಆಯ್ಕೆ ಮಾಡುವ ಪರಂಪರೆ ಈ ಬಾರಿ ಬದಲಾಗಬಹುದು ಎಂಬುದು ಈ ಅಭ್ಯರ್ಥಿಗಳ ಆಶಾವಾದ.

ಒಬ್ಬನೇ ಅಭ್ಯರ್ಥಿ ಕಣದಲ್ಲಿರುವ ಪಕ್ಷಗಳ ಸಂಖ್ಯೆ 20. 15 ಪಕ್ಷಗಳು ತಲಾ ಇಬ್ಬರನ್ನು ಕಣಕ್ಕೆ ಇಳಿಸಿವೆ. ಮೂರರಿಂದ 20 ಅಭ್ಯರ್ಥಿಗಳನ್ನು ನಿಲ್ಲಿಸಿರುವ ಪಕ್ಷಗಳ ಸಂಖ್ಯೆ 34.

ಉತ್ತರ ರಾಜಸ್ಥಾನದ ಅಲ್ವರ್‌ ಜಿಲ್ಲೆಯಲ್ಲಿ ಒಟ್ಟು 11 ಕ್ಷೇತ್ರಗಳಿವೆ. ಇಲ್ಲಿ 145 ಅಭ್ಯರ್ಥಿಗಳಿದ್ದಾರೆ.

‘ಚುನಾವಣೆಯಲ್ಲಿ ಸ್ಪರ್ಧಿಸುವುದು ಬಹಳ ಮುಖ್ಯ. ಇಲ್ಲದಿದ್ದರೆ ನಮ್ಮ ಪಕ್ಷದ ಸಿದ್ಧಾಂತವನ್ನು ಜನರಿಗೆ ತಲುಪಿಸುವುದಾದರೂ ಹೇಗೆ? ಬಿಜೆಪಿ ಅಥವಾ ಕಾಂಗ್ರೆಸ್‌ ಪಕ್ಷಕ್ಕಿಂತ ಉತ್ತಮವಾದ ನೀತಿಗಳು ಮತ್ತು ಸಿದ್ಧಾಂತಗಳಿರುವ ಪಕ್ಷಗಳು ಇವೆ ಎಂದು ಜನರಿಗೆ ತಿಳಿಯುವುದು ಹೇಗೆ’ ಎಂದು ಸಿಪಿಐ ಅಭ್ಯರ್ಥಿ ತೇಜ್‌ಪಾಲ್‌ ಸೈನಿ ಪ್ರಶ್ನಿಸುತ್ತಾರೆ.

ರಾಜಸ್ಥಾನದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷವನ್ನು ಬಿಟ್ಟು ಬೇರೆ ಪಕ್ಷ ಅಧಿಕಾರಕ್ಕೆ ಬರುವುದಕ್ಕೆ ಸಾಧ್ಯ ಇದೆ ಎಂಬುದು ಎಎಪಿಯ ಅಭಿಮತ.

‘ನೀರು, ರಸ್ತೆ ಮತ್ತು ವಿದ್ಯುತ್‌ ಜನರಿಗೆ ನೇರವಾಗಿ ಸಂಬಂಧಿಸಿದ ವಿಚಾರ. ಬದಲಾವಣೆ ಸಹಜ ಪ್ರಕ್ರಿಯೆ. ಹಿಂದೆ ಜನಸಂಘ ಇತ್ತು. ಬಿಜೆಪಿ ಮಹತ್ವ ಪಡೆದುಕೊಂಡದ್ದು 1981ರಲ್ಲಿ. ಎಎಪಿಗೆ ಎಂಟು ವರ್ಷಗಳಷ್ಟೇ ಆಗಿವೆ. ಹಾಗಿದ್ದರೂ ದೇಶದಾದ್ಯಂತ ಇಷ್ಟೊಂದು ಜನಪ್ರಿಯತೆ ಪಡೆದುಕೊಂಡಿದೆ. ಪಕ್ಷವು ದೆಹಲಿಯಲ್ಲಿ ಮಾತ್ರ ಅಧಿಕಾರದಲ್ಲಿದೆ. ಆದರೆ, ನಮ್ಮ ಸರ್ಕಾರದ ಕೆಲಸ ಮತ್ತು ನೀತಿಗಳ ಬಗ್ಗೆ ದೇಶದ ಹಳ್ಳಿ ಹಳ್ಳಿಗಳಲ್ಲಿಯೂ ಜನರು ಮಾತನಾಡಿಕೊಳ್ಳುತ್ತಿದ್ದಾರೆ’ ಎಂದು ಎಎಪಿ ಅಭ್ಯರ್ಥಿ ಅಜಯ ಕುಮಾರ್‌ ಪೂನಿಯಾ ಹೇಳುತ್ತಾರೆ.

ನ್ಯಾಷನಲಿಸ್ಟ್‌ ಯೂನಿಯನಿಸ್ಟ್‌ ಜಮೀನ್ದಾರಿ ಪಾರ್ಟಿಯ (ಎನ್‌ಯುಝಡ್‌ಪಿ) ಎಂಟು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಅಸ್ತಿತ್ವ ಉಳಿಸಿಕೊಳ್ಳುವುದೇ ಈ ಸ್ಪರ್ಧೆಯ ಉದ್ದೇಶ ಎಂದು ಪಕ್ಷದ ಮುಖಂಡ ರಾಜೇಶ್ ಸಿಂಘಾಲ್‌ ಹೇಳುತ್ತಾರೆ.

ಮತಯಂತ್ರದಲ್ಲಿ ಹೆಸರು ಬರಲಿ ಎಂಬುದೇ ಬಹುತೇಕ ಸಣ್ಣ ಪಕ್ಷಗಳ ಉದ್ದೇಶ ಎಂಬುದು ಬಿಜೆಪಿಯ ಅಭಿಪ್ರಾಯ.

‘ಕೆಲವು ರಾಜ್ಯಗಳು ಅಥವಾ ಪ್ರದೇಶಗಳಲ್ಲಿ ಸಣ್ಣ ಪಕ್ಷಗಳು ಪ್ರಭಾವ ಹೊಂದಿವೆ. ಆದರೆ,
ರಾಜಸ್ಥಾನದಲ್ಲಿ ಸಣ್ಣ ಪಕ್ಷಗಳು ಅಥವಾ ತೃತೀಯ ರಂಗಕ್ಕೆ ಮಹತ್ವವೇ ಇಲ್ಲ. ಇಲ್ಲಿನ ಜನರಿಗೆ ರಾಷ್ಟ್ರೀಯ ಪಕ್ಷಗಳೇ ಬೇಕು’ ಎಂದು ಬಿಜೆಪಿ ಅಲ್ವರ್‌ ಘಟಕದ ಅಧ್ಯಕ್ಷ ಸಂಜಯ್‌ ಸಿಂಗ್‌ ನರೂಕಾ ಹೇಳಿದ್ದಾರೆ.

ತನ್ನ ಸ್ಪರ್ಧೆ ಇರುವುದು ಬಿಜೆಪಿ ವಿರುದ್ಧ ಎಂದು ಕಾಂಗ್ರೆಸ್‌ ಪಕ್ಷ ಕೂಡ ಹೇಳುತ್ತಿದೆ.

‘ಪಕ್ಷೇತರರು ಅಥವಾ ಸಣ್ಣ ಪಕ್ಷಗಳ ಅಭ್ಯರ್ಥಿಗಳಿಗೆ ವರ್ಚಸ್ಸೇ ಇಲ್ಲ. ಈ ಅಭ್ಯರ್ಥಿಗಳು ರಾಷ್ಟ್ರೀಯ ಪಕ್ಷಗಳ ಸ್ವಲ್ಪ ಮತವನ್ನು ಕಸಿಯಬಹುದು. ಇದು ಕೆಲವು ಪಕ್ಷಗಳ ಸಾಮಾನ್ಯ ಕಾರ್ಯತಂತ್ರ. ಬಿಜೆಪಿ ಈ ಕಾರ್ಯತಂತ್ರವನ್ನು ಬಳಸಿಕೊಳ್ಳುತ್ತಿದೆ. ಸಣ್ಣ ಪಕ್ಷಗಳ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿ ಕಾಂಗ್ರೆಸ್‌ನ ಮತ ಕಸಿಯುವುದು ಬಿಜೆಪಿಯ ಉದ್ದೇಶ’ ಎಂದು ಅಲ್ವರ್‌ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಟಿಕಾ ರಾಮ್‌ ಜಲ್ಲಿ ಆರೋಪಿಸುತ್ತಾರೆ.

ಕಾಂಗ್ರೆಸ್‌ ಮುಖಂಡರ ಜತೆಗೆ ಆತ್ಮೀಯತೆ

ಮಧ್ಯ ಪ್ರದೇಶ ವಿಧಾನಸಭೆಗೆ ಮತದಾನ ನಡೆದು ಕೆಲವು ದಿನಗಳಾಗಿವೆ. ಭೋಪಾಲ್‌ ಮತ್ತು ಇತರೆಡೆಗಳಲ್ಲಿ ಕೆಲವು ಹಿರಿಯ ಅಧಿಕಾರಿಗಳು ಕಾಂಗ್ರೆಸ್‌ ಮುಖಂಡರ ಜತೆಗೆ ಆತ್ಮೀಯತೆ ಬೆಳೆಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

ಕೆಲವರು ಗೋಪ್ಯವಾಗಿ ಇಂತಹ ಪ್ರಯತ್ನ ನಡೆಸುತ್ತಿದ್ದರೆ, ಮತ್ತೆ ಕೆಲವರ ಪ್ರಯತ್ನ ಅಷ್ಟೊಂದು ಗೋಪ್ಯವಾಗಿಯೇನೂ ಇಲ್ಲ. ಮಧ್ಯ ಪ್ರದೇಶ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಕಮಲನಾಥ್‌, ಮುಖಂಡರಾದ ದಿಗ್ವಿಜಯ್‌ ಸಿಂಗ್‌ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಭೇಟಿಯಾಗುತ್ತಿರುವ ಕೆಲವು ಅಧಿಕಾರಿಗಳು ತಮ್ಮ ಕಾಂಗ್ರೆಸ್‌ ನಿಷ್ಠೆಯನ್ನು ನವೀಕರಿಸಿಕೊಳ್ಳುತ್ತಿದ್ದಾರೆ.

ಶಿವರಾಜ್‌ ಸಿಂಗ್‌ ಚೌಹಾಣ್‌ ನೇತೃತ್ವದ ಬಿಜೆಪಿ ಸರ್ಕಾರದ ದಿನಗಳು ಮುಗಿದವು ಎಂಬ ಭಾವನೆ ಸಾಕಷ್ಟು ಅಧಿಕಾರಿಗಳಲ್ಲಿ ಇದೆ. ಇಂದೋರ್‌ ಮತ್ತಿತರೆಡೆಗಳಲ್ಲಿನ ಬೆಟ್ಟಿಂಗ್‌ ಮತ್ತು ಹಲವು ಜನಮತ ಸಮೀಕ್ಷೆಗಳು ಕಾಂಗ್ರೆಸ್‌ ಪರವಾಗಿರುವುದು ಅಧಿಕಾರಿಗಳ ಈ ವರ್ತನೆಗೆ ಕಾರಣ.

ಹಾಗಿದ್ದರೂ, ಫಲಿತಾಂಶ ಯಾವ ರೀತಿ ಇರಬಹುದು ಎಂಬ ಬಗ್ಗೆಮತದಾನದ ಬಳಿಕ ಅಧಿಕಾರಿಗಳಲ್ಲಿ ಗೊಂದಲ ಮೂಡಿದೆ. ದಾಖಲೆಯ ಶೇ 75ರಷ್ಟು ಮತದಾನ ಆಗಿರುವುದು ಈ ಗೊಂದಲಕ್ಕೆ ಕಾರಣ. ಕಾಂಗ್ರೆಸ್‌ ಮುಖಂಡರ ಜತೆಗೆ ಕಾಣಿಸಿಕೊಳ್ಳುವುದು ಬುದ್ಧಿವಂತಿಕೆಯೇ ಎಂಬುದು ಅಧಿಕಾರಿಗಳಿಗೆ ಗೊತ್ತಾಗುತ್ತಿಲ್ಲ. 2013ರ ಚುನಾವಣೆಗಿಂತ ಶೇ 4ರಷ್ಟು ಹೆಚ್ಚು ಮತದಾನ ಆಗಿದೆ. ಮತದಾನ ಪ್ರಮಾಣ ಹೆಚ್ಚಾಗಿರುವುದು ಯಾವ ಪಕ್ಷಕ್ಕೆ ಬೇಕಾದರೂ ಲಾಭ ತರಬಹುದು. ಆದ್ದರಿಂದ ಫಲಿತಾಂಶದವರೆಗೆ ಕಾಯುವುದಷ್ಟೇ ಈಗ ಅಧಿಕಾರಿಗಳ ಮುಂದಿರುವ ಆಯ್ಕೆ.

ಓವೈಸಿಯನ್ನು ಓಡಿಸಲು ಬಿಜೆಪಿಗೆ ಮತ ಹಾಕಿ: ಆದಿತ್ಯನಾಥ

ಹೈದರಾಬಾದ್‌:‘ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಒವೈಸಿ ಹೈದರಾಬಾದ್‌ ಬಿಟ್ಟು ಓಡಬೇಕು’ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದರು.

ತಾಂಡೂರಿನಲ್ಲಿ ಭಾನುವಾರ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಒವೈಸಿ ಅಂಥವರನ್ನು ಹೊರಹಾಕಲು ಬಿಜೆಪಿಗೆ ಅಧಿಕಾರ ನೀಡುವ ಅಗತ್ಯವಿದೆ. ಜೊತೆಗೆ ರಾಷ್ಟ್ರದ ಗಡಿ ರಕ್ಷಣೆ ಹಾಗೂ ಆಂತರಿಕ ಭದ್ರತೆ ಒದಗಿಸಲು ಬಿಜೆಪಿಯಿಂದ ಮಾತ್ರ ಸಾಧ್ಯ. ಪಾಕಿಸ್ತಾನದ ಉಗ್ರರಿಗೆ ಅವರ ಭಾಷೆಯಲ್ಲಿಯೇ ಗುಂಡುಗಳಿಂದ ಉತ್ತರ ನೀಡಿದ್ದೇವೆ’ ಎಂದರು.

ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌) ಮುಖ್ಯಸ್ಥ ಕೆ.ಚಂದ್ರಶೇಖರ ರಾವ್‌ ವಿರುದ್ಧ ವಾಗ್ದಾಳಿ ನಡೆಸಿದ ಯೋಗಿ, ಕಾಂಗ್ರೆಸ್‌ ಹಾಗೂ ಟಿಆರ್‌ಎಸ್‌ ಕುಟುಂಬ ರಾಜಕಾರಣ ನಡೆಸುತ್ತಿವೆ ಎಂದು ಆರೋಪಿಸಿದರು.

‘ಅವಿಭಜಿತ ಆಂಧ್ರ ಪ್ರದೇಶದಲ್ಲಿ ಕಾಂಗ್ರೆಸ್‌ ಹಾಗೂ ತೆಲುಗು ದೇಶಂ ಪಾರ್ಟಿ (ಟಿಡಿಪಿ) ಬಹಳ ವರ್ಷಗಳವರೆಗೆ ಆಡಳಿತ ನಡೆಸಿವೆ. ಆದರೆ, ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ತರಲು ಎರಡೂ ಪಕ್ಷಗಳು ವಿಫಲವಾಗಿವೆ. ನಾಲ್ಕೂವರೆ ವರ್ಷಗಳಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮಾಡಿರುವ ಕೆಲಸಗಳನ್ನು ತುಲನೆ ಮಾಡಿ ನೋಡಬೇಕು’ ಎಂದು ಜನರಿಗೆ ಸಲಹೆ ನೀಡಿದರು.

ಮುಖ್ಯಾಂಶಗಳು

* 2,294 ಕಣದಲ್ಲಿರುವ ಒಟ್ಟು ಅಭ್ಯರ್ಥಿಗಳು

* 88 ಕಣದಲ್ಲಿರುವ ರಾಜಕೀಯ ಪಕ್ಷಗಳು

* 4.74 ಕೋಟಿ ಮತದಾರರ ಸಂಖ್ಯೆ

* 200 ಒಟ್ಟು ಸ್ಥಾನಗಳು

* 199 ಮತದಾನ ನಡೆಯಲಿರುವ ಕ್ಷೇತ್ರಗಳು (ಅಭ್ಯರ್ಥಿ ಸಾವಿನಿಂದಾಗಿ ಒಂದು ಕ್ಷೇತ್ರದ ಮತದಾನ ಮುಂದೂಡಿಕೆಯಾಗಿದೆ)

* 200 ಬಿಜೆಪಿ ಅಭ್ಯರ್ಥಿಗಳ ಸಂಖ್ಯೆ

* 195 ಕಾಂಗ್ರೆಸ್ ಅಭ್ಯರ್ಥಿಗಳು

* 190 ಬಿಎಸ್‌ಪಿ ಅಭ್ಯರ್ಥಿಗಳು

* 142 ಎಎಪಿ ಅಭ್ಯರ್ಥಿಗಳು

* 840 ಪಕ್ಷೇತರ ಅಭ್ಯರ್ಥಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT