ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಪಯಣ | ರಾಜಸ್ಥಾನ: ಗೆಹಲೋತ್‌, ರಾಜೇ ಸುತ್ತ ರಾಜಕಾರಣ ಗಿರಕಿ

Published 24 ನವೆಂಬರ್ 2023, 0:20 IST
Last Updated 24 ನವೆಂಬರ್ 2023, 0:20 IST
ಅಕ್ಷರ ಗಾತ್ರ

ರಾಜಸ್ಥಾನದ ಚುನಾವಣಾ ಕಣದಲ್ಲಿ ಪ್ರಬಲ ಪೈಪೋಟಿ ಇರುವುದು ಕಾಂಗ್ರೆಸ್‌ ಮತ್ತು ಬಿಜೆಪಿ ಮಧ್ಯೆ ಮಾತ್ರ. ಎರಡೂ ಪಕ್ಷಗಳು ಮುಖ್ಯಮಂತ್ರಿ ಅಭ್ಯರ್ಥಿಗಳನ್ನು ಘೋಷಿಸಿಲ್ಲ. ಹೊರರಾಜ್ಯಗಳಲ್ಲಿ ನಿಂತು ಸುದ್ದಿ ಮಾಧ್ಯಮಗಳ ಮೂಲಕ ನೋಡಿದಾಗ ಈ ಎರಡೂ ಪಕ್ಷಗಳಲ್ಲಿ ಇರುವ ಬಣ ರಾಜಕಾರಣ, ಒಡಕು ಢಾಳಾಗಿ ಕಾಣುತ್ತದೆ. ಆದರೆ, ರಾಜಸ್ಥಾನದಲ್ಲಿ ನಿಂತು ನೋಡಿದಾಗ ಪರಿಸ್ಥಿತಿ ತೀರಾ ಭಿನ್ನವಾಗಿರುವುದು ಅನುಭವಕ್ಕೆ ಬರುತ್ತದೆ. ಎರಡೂ ಪಕ್ಷಗಳಿಗೆ ಮತಹಾಕುವವರು ಇಂಥವರೇ ಮುಖ್ಯಮಂತ್ರಿಯಾಗಬೇಕು ಎಂಬುದರಲ್ಲಿ ಅಚಲವಾಗಿದ್ದಾರೆ

ಜೈಪುರ/ಜಾಲಾವಾಡ್‌/ಟೋಂಕ್‌/ಜೋಧಪುರ: ‘ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಎದುರಿಸುತ್ತಿರುವ ಅತ್ಯಂತ ದೊಡ್ಡ ಸವಾಲುಗಳಲ್ಲಿ ಒಳಜಗಳ ಮೊದಲನೆಯದು. ಕಾಂಗ್ರೆಸ್‌ ಸರ್ಕಾರ ಚೆನ್ನಾಗೇ ಕೆಲಸ ಮಾಡಿದೆ. ಆದರೆ ಐದೂ ವರ್ಷ ಅಧಿಕಾರಕ್ಕಾಗಿ ಅಶೋಕ್‌ ಗೆಹಲೋತ್ ಮತ್ತು ಸಚಿನ್ ಪೈಲಟ್‌ ಕಿತ್ತಾಡುತ್ತಲೇ ಇದ್ದರು. ನಿಮ್ಮಲ್ಲೂ (ಕರ್ನಾಟಕದಲ್ಲಿ) ಸಿದ್ದರಾಮಯ್ಯ, ಶಿವಕುಮಾರ್ ಅಧಿಕಾರಕ್ಕಾಗಿ ಕಿತ್ತಾಡುತ್ತಲೇ ಇದ್ದಾರಲ್ಲ ಹಾಗೆ. ಇಲ್ಲದಿದ್ದರೆ ಇನ್ನೂ ಹೆಚ್ಚು ಕೆಲಸ ಮಾಡಬಹುದಿತ್ತು’ ಎಂದು ರಾಜಸ್ಥಾನ ಕಾಂಗ್ರೆಸ್‌ನ ಒಳಜಗಳದ ಬಗ್ಗೆ ಟಾಕೂಟೀಕಾಗಿ ಇಂಗ್ಲಿಷ್‌ನಲ್ಲಿ ಮಾತನಾಡಿದ್ದು ಜೈಪುರದ ಟ್ರಾವೆಲ್‌ ಏಜೆಂಟ್‌ ಸೂರ್ಯಕಾಂತ್ ಶರ್ಮಾ. ‘ಆದರೆ ಈಗ ಬಿಜೆಪಿಯಲ್ಲೂ ಮುಖ್ಯಮಂತ್ರಿ ಅಭ್ಯರ್ಥಿಗಾಗಿ ಪೈಪೋಟಿ ಆರಂಭವಾಗಿದೆ. ಐದೂ ವರ್ಷ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಒಂದು ಮಾತನ್ನೂ ಆಡದ ವಸುಂಧರಾ ರಾಜೇ ಅವರು ಮಾತ್ರ ಮುಖ್ಯಮಂತ್ರಿ ಆಗಬಾರದು’ ಎಂಬ ಮಾತನ್ನೂ ಸೇರಿಸಿದ ಅವರು, ತಮ್ಮೆದುರು ಇದ್ದ ಹತ್ತಾರು ಇಂಗ್ಲಿಷ್‌ ಪತ್ರಿಕೆಗಳನ್ನು ಒಂದೆಡೆ ಅಚ್ಚುಕಟ್ಟಾಗಿ ಜೋಡಿಸಿಟ್ಟರು.

ಜೈಪುರದ ಆಚೆಗೆ ಮತ್ತೆ ಇಂತಹ ಮಾತು ಕೇಳಲಿಲ್ಲ. ಜೈಪುರಕ್ಕೆ ಅಂಟಿಕೊಂಡೇ ಟೋಂಕ್‌ ಜಿಲ್ಲೆ ಮತ್ತು ವಿಧಾನಸಭಾ ಕ್ಷೇತ್ರವಿದೆ. ಮುಖ್ಯಮಂತ್ರಿ ಅಶೋಕ್‌ ಗೆಹಲೋತ್ ಜತೆಗೆ ಅಧಿಕಾರಕ್ಕಾಗಿ ಗುದ್ದಾಟ ನಡೆಸಿದ್ದ ಸಚಿನ್‌ ಪೈಲಟ್‌ ಅವರ ಕ್ಷೇತ್ರವಿದು. ‘ಇದು ಪೈಲಟ್‌ ಬಯ್ಯಾ ಅವರ ಮನೆ. ಅವರೇ ಗೆಲ್ಲುವುದು’ ಎಂದು ಟೋಂಕ್‌ನ ಶೋಯಬ್‌ ಅಖ್ತರ್ ಹೇಳಿದರು. ಆದರೆ ಸಚಿನ್‌ ಪೈಲಟ್‌ ಮುಖ್ಯಮಂತ್ರಿಯಾಗಬೇಕು ಎಂದು ಟೋಂಕ್‌ನ ಕಾಂಗ್ರೆಸ್‌ ಕಚೇರಿ ಎದುರು ಮೊಬೈಲ್‌ ರಿಪೇರಿ ಅಂಗಡಿ ನಡೆಸುವ ಈ ಅಖ್ತರ್ ಯೋಚಿಸಿಯೂ ಇಲ್ಲ. ಅವರ ಗೆಳೆಯರಾದ ಕಟ್ಟಾರಾಮ್‌ ಮತ್ತು ಬಿಲಾಲ್‌ ಇದೇನೋ ಅಸಹಜ ಮಾತು ಎಂಬಂತೆ ನೋಡುತ್ತಿದ್ದರು.

ಭ್ರಷ್ಟಾಚಾರವನ್ನು ಖಂಡಿಸಿ ತಮ್ಮದೇ ಸರ್ಕಾರದ ವಿರುದ್ಧ ಸಚಿನ್ ಪೈಲಟ್‌ ಅವರು ನಡೆಸಿದ ದೀರ್ಘ ಪ್ರತಿಭಟನೆಯನ್ನು ಜನರು ನೆನಪಿಸಿಕೊಳ್ಳುವುದೂ ಇಲ್ಲ. ಆ ಬಗ್ಗೆ ಪ್ರಸ್ತಾಪಿಸಿದರೂ ಜನರಿಗೆ ಅದು ನೆನಪಾಗುವುದಿಲ್ಲ. 

ಟೋಂಕ್‌ ಜಿಲ್ಲೆಯ ಬೇರೆ ವಿಧಾನಸಭಾ ಕ್ಷೇತ್ರಗಳಲ್ಲೂ ಜನ ಸಚಿನ್ ಪೈಲಟ್‌ ಅವರ ಹೆಸರು ಹೇಳುವುದಿಲ್ಲ. ರಾಜಸ್ಥಾನ ಚುನಾವಣೆಯ 2,200 ಕಿ.ಮೀ. ಪಯಣದಲ್ಲಿ ಸಚಿನ್‌ ಪೈಲಟ್ ಅವರ ಹೆಸರು ಮತ್ತೆ ಕೇಳಲೇ ಇಲ್ಲ. ಬದಲಿಗೆ ಕೂಲಿ ಕಾರ್ಮಿಕರಿಂದ ಹಿಡಿದು ದೊಡ್ಡ ವ್ಯಾಪಾರಿಗಳವರೆಗೆ ಎಲ್ಲರೂ ಮಾತನಾಡಿದ್ದು ಅಶೋಕ್‌ ಗೆಹಲೋತ್‌ ಬಗ್ಗೆ. ಜನರು ಕಾಂಗ್ರೆಸ್‌ ಸರ್ಕಾರ ಎಂದೂ ಹೇಳುವುದಿಲ್ಲ. ಜನ ಮಾತು ಶುರುಮಾಡುವುದೇ ‘ಅಶೋಕ್‌ ಜೀ ಕಾ ಸರ್ಕಾರ್‌’ (ಅಶೋಕ್‌ ಅವರ ಸರ್ಕಾರ) ಎಂದು. ಈ ಪಯಣದಲ್ಲಿ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿಯ ಹೆಸರನ್ನು ಒಬ್ಬರೂ ಉಲ್ಲೇಖಿಸಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು ಕೇಳಿದ್ದು ಚಿತ್ತೋರಗಡದಲ್ಲಿ ಒಂದು ಬಾರಿ ಮಾತ್ರ. ಉಳಿದೆಲ್ಲಾ ಕಡೆ ಜನರು ಮಾತನಾಡುವುದು ಅಶೋಕ್‌ ಗೆಹಲೋತ್ ಮತ್ತು ವಸುಂಧರಾ ರಾಜೇ ಅವರ ಬಗ್ಗೆ ಮಾತ್ರ.

‘ನೀವು ಪತ್ರಕರ್ತರಾ... ಅಶೋಕ್‌ ಜೀ ಹೆಣ್ಣುಮಕ್ಕಳಿಗೆ ಮೊಬೈಲ್‌ ಕೊಟ್ಟಿದ್ದಾರೆ. ನನ್ನ ತಂಗಿಗೂ ಬಂದಿದೆ. ಹೆಣ್ಣುಮಕ್ಕಳಿಗೆ ತುಂಬಾ ಅನುಕೂಲ ಮಾಡಿದ್ದಾರೆ’ ಎಂದು ಪಾಲಿ ಜಿಲ್ಲೆಯ ಬನ್ನಾದೇವಿ ದೇವಾಲಯದ ಹೊರಗೆ ಹೂಕಟ್ಟುವ ಯುವಕ ಬನ್ನಾರಾಮ್‌ ಅತ್ಯುತ್ಸಾಹದಿಂದ ವಿವರಿಸಿದ. ಉಚಿತ ಪಡಿತರ, ಇಂದಿರಾ ರಸೋಯಿ (ಇಂದಿರಾ ಕ್ಯಾಂಟೀನ್‌ನಂತಹ ಯೋಜನೆ), ಉಚಿತ ವಿದ್ಯುತ್ ಯೋಜನೆ ಬಗ್ಗೆ ದೊಡ್ಡ ಪಟ್ಟಿ ನೀಡಿದ. ಮತ ಯಾರಿಗೆ ಹಾಕುತ್ತೀಯ ಎಂದು ಪ್ರಶ್ನಿಸಿದಾಗ, ಅದನ್ನು ಹೇಳುವುದಿಲ್ಲ ಎಂದು ಹೂಬುಟ್ಟಿಯ ಹಿಂದೆ ಮುಖ ಅಡಗಿಸಿದ. ರಾಜಸ್ಥಾನದ ಎಲ್ಲಾ ಪ್ರಾಂತಗಳಲ್ಲೂ ಜನ ಹೀಗೆಯೇ ಮಾತನಾಡುತ್ತಾರೆ. ಹೀಗೆ ವಿವಿಧ ಯೋಜನೆಗಳ ಮೂಲಕ ಗೆಹಲೋತ್ ಅವರು, ‘ಅಶೋಕ್‌ ಜೀ ಕಾ ಸರ್ಕಾರ್’ ಎಂಬ ಬ್ರ್ಯಾಂಡ್‌ ನಿರ್ಮಿಸಿದ್ದಾರೆ.

ಗೆಹಲೋತ್ ಅವರ ಈ ‌ಬ್ರ್ಯಾಂಡ್‌ಗೆ ಇನ್ನೊಂದು ಆಯಾಮವೂ ಇದೆ. ‘ಅಶೋಕ್‌ ಜೀ ಒಳ್ಳೆಯ ಯೋಜನೆಗಳನ್ನೇನೋ ಕೊಟ್ಟಿದ್ದಾರೆ. ಆದರೆ ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಅನುದಾನವನ್ನೇ ಕೊಟ್ಟಿಲ್ಲ. ಅನುದಾನ ಬಿಡುಗಡೆಯಲ್ಲಿ ತಾರತಮ್ಯ ಮಾಡಿದ್ದಾರೆ. ವಸುಂಧರಾ ಅವರ ಸರ್ಕಾರ ಇದ್ದಿದ್ದರೆ, ಬಿಜೆಪಿ ಶಾಸಕರ ಕ್ಷೇತ್ರಗಳಿಗೂ ಅನುದಾನ ಕೊಡುತ್ತಿದ್ದರು. ಇದು ಸರಿಯಲ್ಲ’ ಎನ್ನುವುದು ಜಾಲಾವಾಡದ ಕುಶ್ವೀಂದರ್ ಸಿಂಗ್ ರಾಜಪುರೋಹಿತ್ ಅವರ ವಿಶ್ಲೇಷಣೆ. ‘ವಸುಂಧರಾ ಅವರು ಎಷ್ಟು ಕೆಲಸ ಮಾಡಿದ್ದಾರೆ. ಅವರು ಇಲ್ಲದೇ ಇದ್ದಿದ್ದರೆ, ಜಾಲಾವಾಡಕ್ಕೆ (ವಸುಂಧರಾ ಅವರ ಕ್ಷೇತ್ರ) ಏನಾದರೂ ಹೆಸರು ಬರುತ್ತಿತ್ತೇ? ಅವರೇ ಮುಖ್ಯಮಂತ್ರಿಯಾಗಬೇಕು’ ಎಂಬುದು ಕುಶ್ವೀಂದರ್ ಅವರ ದೃಢವಾದ
ಮಾತು. 

ಜಾಲಾವಾಡದಿಂದ 390 ಕಿ.ಮೀ. ದೂರದಲ್ಲಿ, ಅರಾವಳಿ ಪರ್ವತ ಪ್ರದೇಶದ ಕಣಿವೆಯಾಳದಲ್ಲಿ ಇರುವ ಸಣ್ಣ ಊರು ದೇವ್ಲಾ. ಅಲ್ಲಿನ ಬಸ್‌ ನಿಲ್ದಾಣದಲ್ಲಿ ಕೂತು ಹರಟೆಹೊಡೆಯುತ್ತಿದ್ದ ದಿಲೀಪ್‌, ದಿವ್ಯೇಂದ್ರು ಮತ್ತವರ ಗೆಳೆಯರ ಪಟಾಲಂ, ‘ವಸುಂಧರಾ ಅವರೇ ಮುಖ್ಯಮಂತ್ರಿ ಆಗಬೇಕು’ ಎಂದರು. ದಿಯಾಕುಮಾರಿ, ಬಾಲಕನಾಥ್ ಅವರೂ ಬಿಜೆಪಿಯಿಂದ ಮುಖ್ಯಮಂತ್ರಿಯಾಗಬಹುದು ಎಂದಾಗ ಅವರೆಲ್ಲರೂ ಸಿಟ್ಟಾದರು. ‘ಅದು ಹೇಗೆ ಹಾಗೆ ಮಾಡುತ್ತಾರೆ’ ಎಂದು ಜೋರು ಮಾಡಿದರು. ಪಶ್ಚಿಮದ ಬಿಕಾನೇರ್‌, ಪೂರ್ವದ ಸಾರಿಸ್ಕಾದ ಜನರಿಗೂ ವಸುಂಧರಾ ಅವರೇ ಬಿಜೆಪಿಯ ನಾಯಕಿ, ಮತ್ಯಾರೂ ಅಲ್ಲ. 

ವಸುಂಧರಾ ಅವರಿಗೆ ಪರ್ಯಾಯ ನಾಯಕಿಯನ್ನಾಗಿ ಬೆಳೆಸಲು ಜೈಪುರ ರಾಜಮನೆತನದ ದಿಯಾಕುಮಾರಿ ಅವರನ್ನು ಜೈಪುರದಿಂದ ಬಿಜೆಪಿ ಕಣಕ್ಕೆ ಇಳಿಸಿದೆ. ಆದರೆ ಅವರು ಪರ್ಯಾಯವಾಗಬಲ್ಲರು ಎಂಬುದನ್ನು ಬಿಜೆಪಿಯ ಮತದಾರರೇ ಒಪ್ಪುವುದಿಲ್ಲ.

‘ನಾವೆಲ್ಲಾ ಕರಕುಶಲ ವಸ್ತುಗಳನ್ನು ಮಾಡಿ, ಮಾರಾಟ ಮಾಡಿ ಬದುಕುವವರು. ನಾವು ಮಾಡುವಂಥದ್ದೇ ಕಲಾಕೃತಿಗಳನ್ನು ಈ ರಾಜಕುಮಾರಿ ದೊಡ್ಡ ದೊಡ್ಡ ಫ್ಯಾಕ್ಟರಿಗಳಲ್ಲಿ ಮಾಡಿಸುತ್ತಾರೆ. ನಮ್ಮ ಹೊಟ್ಟೆಯ ಮೇಲೆ ಹೊಡೆದಿದ್ದಾರೆ. ಸಾಮಾನ್ಯ ಜನರ ಹೊಟ್ಟೆಯ ಮೇಲೆ ಹೊಡೆಯುವವರು ಮುಖ್ಯಮಂತ್ರಿಯಾಗಲು ಯೋಗ್ಯವೇ? ಬಿಜೆಪಿಯಿಂದ ಬೇರೆ ಯಾರು ನಿಂತಿದ್ದರೂ ಬಿಜೆಪಿಗೇ ಮತ ಹಾಕುತ್ತೇನೆ. ಈ ಬಾರಿ ಮತ ಹಾಕುವುದೇ ಇಲ್ಲ’ ಎಂದವರು ಜೈಪುರದ ಬಾಪೂ ಬಜಾರ್‌ನಲ್ಲಿ ಕರಕುಶಲ ವಸ್ತುಗಳ ಅಂಗಡಿ ನಡೆಸುವ ಸಿವಾನ್‌ ಸಿಂಧಿ. ‘ನೋಡಿ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದರೆ, ವಸುಂಧರಾ ಅವರೇ ಮುಖ್ಯಮಂತ್ರಿಯಾಗಬೇಕು. ಯಾರೋ ಬಾಲಕನಾಥ್, ದಿಯಾಕುಮಾರಿ ಎಲ್ಲಾ ಆಗುವುದಲ್ಲ’ ಎಂದು ಸಿವಾನ್‌ ಮಾತಿಗೆ ದನಿಗೂಡಿಸಿದರು ಶಿವರಾಜ್‌
ಸಿಂಗ್‌ ಯಾದವ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT