ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಯುದ್ಧ ಸಾಧನ ಆತ್ಮನಿರ್ಭರ; 101 ಸೇನಾ ಸಲಕರಣೆಗಳ ಆಮದು ನಿಷೇಧ

Published : 9 ಆಗಸ್ಟ್ 2020, 4:56 IST
ಫಾಲೋ ಮಾಡಿ
Comments

ನವದೆಹಲಿ: ಆಮದು ನಿಷೇಧಿಸಲಾಗಿರುವ 101 ಸೇನಾ ಸಲಕರಣೆಗಳ ಪಟ್ಟಿಯನ್ನು ರಕ್ಷಣಾ ಸಚಿವಾಲಯವು ಭಾನುವಾರ ಬಿಡುಗಡೆ ಮಾಡಿದೆ. ಕೇಂದ್ರ ಸರ್ಕಾರವು ಮೂರು ತಿಂಗಳ ಹಿಂದೆ ಘೋಷಿಸಿದ ‘ಆತ್ಮನಿರ್ಭರ ಭಾರತ’‍ (ಸ್ವಾವಲಂಬಿ ಭಾರತ) ಯೋಜನೆಯ ಭಾಗವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಆಮದು ನಿಷೇಧದಿಂದಾಗಿ ಸೇನಾ ಸಲಕರಣೆಗಳ ತಯಾರಿಕೆಯಲ್ಲಿ ದೇಶೀಯ ಕಂಪನಿಗಳಿಗೆ ಭಾರಿ ಅನುಕೂಲ ಆಗಲಿದೆ.

ಆಮದು ನಿಷೇಧಿಸಲಾದ ಉಪಕರಣಗಳ ತಯಾರಿಕೆಯಲ್ಲಿ ಖಾಸಗಿ ಕ್ಷೇತ್ರವು ಹೇಗೆ ಭಾಗಿಯಾಗುತ್ತದೆ ಎಂಬುದು ಈ ಯೋಜನೆಯ ಯಶಸ್ಸನ್ನು ನಿರ್ಧರಿಸುತ್ತದೆ. ಈಗಿನ ಪಟ್ಟಿಯಲ್ಲಿ ಇರುವ ಸಲಕರಣೆಗಳನ್ನು ಸಾರ್ವಜನಿಕ ರಂಗದ ರಕ್ಷಣಾ ಸಾಮಗ್ರಿ ತಯಾರಿಕೆ ಕಂಪನಿಗಳೇ ಅಭಿವೃದ್ಧಿಪಡಿಸಿವೆ ಮತ್ತು ಅವು ಸರ್ಕಾರದ ಆಯುಧ ಕಾರ್ಖಾನೆಗಳಲ್ಲಿಯೇ ತಯಾರಾಗುತ್ತಿವೆ.

ಕೋವಿಡ್‌–19 ಪಿಡುಗಿನಿಂದಾಗಿ ಉಂಟಾದ ಆರ್ಥಿಕ ಬಿಕ್ಕಟ್ಟು ನಿವಾರಣೆಗಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮೇ ತಿಂಗಳಲ್ಲಿ ಪ್ರಕಟಿಸಿದ ಯೋಜನೆಗಳಲ್ಲಿ ರಕ್ಷಣಾ ಸಲಕರಣೆ ತಯಾರಿಕೆಯಲ್ಲಿ ಸ್ವಾವಲಂಬನೆಯೂ ಸೇರಿತ್ತು.

2015ರ ಏಪ್ರಿಲ್‌ನಿಂದ 2020ರ ಆಗಸ್ಟ್‌ ಅವಧಿಯಲ್ಲಿ ಭಾರತದ ರಕ್ಷಣಾ ಪಡೆಗಳು ₹3.5 ಲಕ್ಷ ಕೋಟಿ ಮೌಲ್ಯದ ಸೇನಾ ಉಪಕರಣಗಳನ್ನು ಆಮದು ಮಾಡಿಕೊಂಡಿವೆ. ಈಗ, 101 ಸಾಧನಗಳ ಆಮದಿನ ಮೇಲೆ ನಿಷೇಧ ಹೇರಿರುವುದರಿಂದ ಇವುಗಳ ತಯಾರಿಕೆ ಮತ್ತು ಪೂರೈಕೆಯ ಅವಕಾಶ ದೇಶೀಯ ಕಂಪನಿಗಳಿಗೆ ದೊರೆಯುತ್ತದೆ. ಮುಂದಿನ ಐದರಿಂದ ಏಳು ವರ್ಷದಲ್ಲಿ ದೇಶೀಯ ಕಂಪನಿಗಳಿಗೆ ₹4 ಲಕ್ಷ ಕೋಟಿ ಮೌಲ್ಯದ ಸಲಕರಣೆಗಳ ಪೂರೈಕೆ ಅವಕಾಶ ದೊರೆಯಲಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.

2020–21ರ ರಕ್ಷಣಾ ಸಾಮಗ್ರಿ ಖರೀದಿಯ ಬಜೆಟ್‌ ಅನ್ನು ರಕ್ಷಣಾ ಸಚಿವಾಲಯವು ದೇಶೀಯವಾಗಿ ಖರೀದಿ ಮತ್ತು ಆಮದು ಎಂದು ವಿಂಗಡಿಸಿದೆ. ದೇಶೀಯವಾಗಿ ಖರೀದಿ ಮಾಡಲು ಸುಮಾರು ₹52 ಸಾವಿರ ಕೋಟಿ ಮೀಸಲು ಇರಿಸಲಾಗಿದೆ. ಈ ವರ್ಷ ರಕ್ಷಣಾ ಖರೀದಿಗೆ ಮೀಸಲಿರಿಸಿದ ಮೊತ್ತವು ₹1.13 ಲಕ್ಷ ಕೋಟಿ.

ಉಪಗ್ರಹ ಆಮದು ಇಲ್ಲ
ನಿಷೇಧದ ಪಟ್ಟಿಯಲ್ಲಿ ಈಗ ಆಮದಾಗುತ್ತಿರುವ ಎಷ್ಟು ಸಲಕರಣೆಗಳಿವೆ ಎಂಬುದನ್ನು ಸಚಿವಾಲಯ ಹೇಳಿಲ್ಲ. ಜಿಸ್ಯಾಟ್‌–7ಸಿ ಮತ್ತು ಜಿಸ್ಯಾಟ್‌–7ಆರ್‌ ಉಪಗ್ರಹಗಳನ್ನು 2023ರ ಬಳಿಕ ಆಮದು ಮಾಡಿಕೊಳ್ಳಲಾಗುವುದಿಲ್ಲ ಎಂದು ಸಚಿವಾಲಯ ಹೇಳಿದೆ. ಆದರೆ, ಉಪಗ್ರಹಗಳನ್ನು ದೇಶೀಯವಾಗಿಯೇ ತಯಾರಿಸಲಾಗುತ್ತಿದೆ. ಹಾಗಾಗಿ ಅವುಗಳನ್ನು ಆಮದು ಮಾಡಿಕೊಳ್ಳುವ ಪ್ರಶ್ನೆಯೇ ಉದ್ಬವಿಸುವುದಿಲ್ಲ.

ಸಾರ್ವಜನಿಕ ರಂಗದ ರಕ್ಷಣಾ ಸಾಧನ ತಯಾರಿಕೆ ಕಂಪನಿಗಳು ಮತ್ತು ದೇಶೀಯ ಖಾಸಗಿ ಕ್ಷೇತ್ರದ ಕಂಪನಿಗಳು ತಯಾರಿಸುತ್ತಿರುವ ಹಲವು ಸಲಕರಣೆಗಳು ಆಮದು ನಿಷೇಧ ಪಟ್ಟಿಯಲ್ಲಿ ಸೇರಿವೆ.

ಎಚ್‌ಎಎಲ್‌ ತಯಾರಿಸುತ್ತಿರುವ ಲಘು ಯುದ್ಧ ವಿಮಾನ ತೇಜಸ್‌, ಡೀಸೆಲ್‌ ಚಾಲಿತ ಜಲಾಂತರ್ಗಾಮಿಗಳು (ಇದು ಭಾರತದಲ್ಲಿ ತಯಾರಿಸಿ ಯೋಜನೆಯ ಭಾಗ), ಬಿಇಎಲ್‌ ತಯಾರಿಸುತ್ತಿರುವ ಹಲವು ರೇಡಾರ್‌ಗಳು ಕೂಡ ಆಮದು ನಿಷೇಧ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

ಹೊಸ ರೂಪುರೇಷೆ: ಆ.15ರಂದು ಪ್ರಕಟ
ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾವಲಂಬಿ ಭಾರತದ ಹೊಸ ರೂಪುರೇಷೆಯನ್ನು ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಪ್ರಕಟಿಸಲಿದ್ದಾರೆ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ.

ಸ್ವಾವಲಂಬಿ ಭಾರತದ ಬಗೆಗಿನ ಪ್ರಧಾನಿಯ ಯೋಜನೆಯನ್ನು ಜಾರಿಗೆ ತರುವುದಕ್ಕಾಗಿ ವಿವಿಧ ಇಲಾಖೆಗಳು ಮತ್ತು ಸಚಿವಾಲಯಗಳು ಗಂಭೀರವಾಗಿ ಕೆಲಸ ಮಾಡುತ್ತಿವೆ. ಮಹಾತ್ಮಗಾಂಧಿಯ ‘ಸ್ವದೇಶಿ’ ಪರಿಕಲ್ಪನೆಗೆ ಇದು ಹೊಸ ಆಯಾಮ ನೀಡಲಿದೆ ಎಂದು ಅವರು ವಿವರಿಸಿದ್ದಾರೆ.ಭಾರತದ ಆತ್ಮಗೌರವ ಮತ್ತು ಸಾರ್ವಭೌಮತೆಗೆ ಎದುರಾಗುವ ಧಕ್ಕೆಯನ್ನು ಯಾವುದೇ ಬೆಲೆ ತೆತ್ತಾದರೂ ಸರ್ಕಾರ ತಡೆಯಲಿದೆ ಎಂದಿದ್ದಾರೆ.

ಕಾಂಗ್ರೆಸ್‌ ಟೀಕೆ
‘ಭಾನುವಾರ ಬೆಳಗ್ಗೆ ಸ್ಫೋಟಕ ಸುದ್ದಿ ಕೊಡುವುದಾಗಿ ರಕ್ಷಣಾ ಸಚಿವಾಲಯ ಹೇಳಿತ್ತು. ಆದರೆ, ಬಂದಿದ್ದು ಮಾತ್ರ ಕುಂಯ್‌ಗುಡುವ ಸದ್ದು. ರಕ್ಷಣಾ ಸಲಕರಣೆಗಳನ್ನು ಆಮದು ಮಾಡಿಕೊಳ್ಳುತ್ತಿರುವುದು ರಕ್ಷಣಾ ಸಚಿವಾಲಯ ಮಾತ್ರ. ಹಾಗಾಗಿ, ಯಾವುದೇ ಆಮದು ನಿಷೇಧವು ತನ್ನ ಮೇಲೆಯೇ ಹೇರಿಕೊಳ್ಳುವ ನಿರ್ಬಂಧ. ರಕ್ಷಣಾ ಸಚಿವರ ಘೋಷಣೆಯು, ಸಚಿವರಿಂದ ಕಾರ್ಯದರ್ಶಿಗಳಿಗೆ ಕಳುಹಿಸಲಾದ ಆದೇಶವಲ್ಲದೆ ಬೇರೇನೂ ಅಲ್ಲ’ ಎಂದು ಸರ್ಕಾರದ ಘೋಷಣೆಯನ್ನು ಕಾಂಗ್ರೆಸ್‌ನ ಮುಖಂಡ ಪಿ.ಚಿದಂಬರಂ ಟೀಕಿಸಿದ್ದಾರೆ.

impo

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT