ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮಮಂದಿರ | ಸೋನಿಯಾ, ಖರ್ಗೆ ಹಾಜರಿ ಸೂಕ್ತ ಸಮಯದಲ್ಲಿ ನಿರ್ಧಾರ: ಕಾಂಗ್ರೆಸ್

Published 29 ಡಿಸೆಂಬರ್ 2023, 15:49 IST
Last Updated 29 ಡಿಸೆಂಬರ್ 2023, 15:49 IST
ಅಕ್ಷರ ಗಾತ್ರ

ನವದೆಹಲಿ: ಜನವರಿ 22ರಂದು ನಡೆಯಲಿರುವ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ನಾಯಕಿ ಸೋನಿಯಾಗಾಂಧಿ ಅವರು ಭಾಗವಹಿಸುವ ಬಗ್ಗೆ ಸೂಕ್ತ ಸಮಯದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕಾಂಗ್ರೆಸ್‌ ಹೇಳಿದೆ.

ವರದಿಗಾರರ ಜತೆ ಮಾತನಾಡಿದ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್‌ ರಮೇಶ್‌ ಅವರು, ಸೋನಿಯಾ ಗಾಂಧಿ, ಖರ್ಗೆ ಮತ್ತು ಲೋಕಸಭೆಯಲ್ಲಿ ಕಾಂಗ್ರೆಸ್‌ ನಾಯಕರಾಗಿರುವ ಅಧೀರ್‌ ರಂಜನ್‌ ಚೌಧರಿ ಅವರಿಗೂ ಆಹ್ವಾನ ನೀಡಲಾಗಿದೆ. ಈ ಬಗ್ಗೆ ಸೂಕ್ತ ಸಮಯದಲ್ಲಿ ತೀರ್ಮಾನಿಸಿ ತಿಳಿಸಲಾಗುವುದು ಎಂದು ಹೇಳಿದರು.

‘ಈ ವಿಷಯದಲ್ಲಿ ಆತುರಾತುರವಾಗಿ ನಿರ್ಧಾರ ಕೈಗೊಳ್ಳುವ ಅಗತ್ಯ ಇಲ್ಲ. ಇಂದೇ ಅದನ್ನು ನಿರ್ಧರಿಸಬೇಕು ಎಂದೇನೂ ಇಲ್ಲ. ಇದು ಸೂಕ್ಷ್ಮ ವಿಚಾರ. ಆಹ್ವಾನಿತರಾಗದವರು ಈಗ ಟೀಕೆಗಳನ್ನು ಮಾಡುತ್ತಿದ್ದಾರೆ’ ಎಂದರು.

ಕಾರ್ಯಕ್ರಮಕ್ಕೆ ಹಾಜರಾಗುವ ಕುರಿತು ನಾಯಕರು ಪರ ಮತ್ತು ವಿರೋಧ ಹೇಳಿಕೆಗಳನ್ನು ನೀಡುತ್ತಿರುವುದು ಪಕ್ಷಕ್ಕೆ ಮುಜುಗರ ಉಂಟು ಮಾಡಿದೆ ಎಂದು ಮೂಲಗಳು ಹೇಳಿವೆ.

ಸ್ಯಾಮ್‌ ಪಿತ್ರೋಡಾ ಅವರು ರಾಮಮಂದಿರ ಪ್ರಮುಖ ವಿಷಯವಲ್ಲ ಎಂದು ಹೇಳಿದ್ದನ್ನು ಕಾಂಗ್ರೆಸ್‌ ಗುರಿಯಾಗಿಸಲು ಬಿಜೆಪಿ ಬಳಸಿಕೊಂಡಿತು ಎಂದು ಹೇಳಿದ ಹಿರಿಯ ನಾಯಕರೊಬ್ಬರು ಪಿತ್ರೋಡಾ ಅಂಥವರು ಪಕ್ಷದ ಪರವಾಗಿ ಮಾತನಾಡುವುದಿಲ್ಲ ಎಂದರು.

‘ಅವರು ಅವರ ಅಭಿಪ್ರಾಯ ಹೇಳಿದ್ದಾರೆ. ಅದು ಕಾಂಗ್ರೆಸ್‌ ಅಭಿಪ್ರಾಯ ಅಲ್ಲ. ಕಾಂಗ್ರೆಸ್‌ ಅಭಿಪ್ರಾಯವನ್ನು ಚರ್ಚಿಸಿ ನಿರ್ಧರಿಸಲಾಗುವುದು’ ಎಂದರು.

ಕಾರ್ಯಕ್ರಮವನ್ನು ಬಿಜೆಪಿ ರಾಜಕೀಯಕರಣಗೊಳಿಸುತ್ತಿದೆ ಎಂದು ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸದಸ್ಯ ಶಶಿ ತರೂರ್‌ ಅವರು ಹೇಳಿರುವ ಬಗ್ಗೆ, ಸದಸ್ಯರು ವಿವಿಧ ವಿಷಯಗಳ ಬಗ್ಗೆ ಮಾತನಾಡುತ್ತಾರೆ. ಅವರೆಲ್ಲ ಪಕ್ಷದ ಅಭಿಪ್ರಾಯ ಬಿಂಬಿಸುತ್ತಾರೆ ಎಂದು ಅರ್ಥವಲ್ಲ ಎಂದು ಹೇಳಿದರು.

ಇದೇ ವೇಳೆ ಅವರು, ರಾಜಕೀಯ ಮತ್ತು ಧರ್ಮವನ್ನು ಬೆರೆಸಬಾರದು ಎಂಬ ತರೂರ್‌ ಅವರ ಅಭಿಪ್ರಾಯವನ್ನು ಒಪ್ಪದಿರಲು ಯಾರಿಗೂ ಸಾಧ್ಯವಿಲ್ಲ. ಧರ್ಮದ ದುರುಪಯೋಗವನ್ನು ಪಕ್ಷವು ಯಾವಾಗಲೂ ವಿರೋಧಿಸುತ್ತದೆ ಎಂದರು.

‘ಇದು ನಂಬಿಕೆಯ ವಿಷಯವೇ ಹೊರತು ಜನರ ವಿಷಯವಲ್ಲ ಅಥವಾ ರಾಜಕೀಯಕ್ಕೆ ಸಂಬಂಧಿಸಿದ್ದಲ್ಲ. ಆದರೆ ಕೆಲವರು (ಬಿಜೆಪಿ) ಇದನ್ನು ರಾಜಕೀಯಗೊಳಿಸುತ್ತಿದ್ದಾರೆ’ ಎಂದು ಹೇಳಿದರು.

ಇಂಡಿಯಾ ಮೈತ್ರಿಕೂಟದ ಪಕ್ಷಗಳಲ್ಲೇ ವಿಭಿನ್ನ ನಿಲುವುಗಳು ಇವೆ. ಕಾರ್ಯಕ್ರಮದಲ್ಲಿ ತಮ್ಮ ನಾಯಕರು ಭಾಗವಹಿಸುವುದಿಲ್ಲ ಎಂದು ಟಿಎಂಸಿ ಮತ್ತು ಸಿಪಿಎಂ ಸ್ಪಷ್ಟಪಡಿಸಿದ್ದರೆ, ಸಮಾಜವಾದಿ ಪಕ್ಷ, ಜೆಎಂಎಂ ಮತ್ತು ಇತರರು ಆಹ್ವಾನ ಬಂದರೆ ಭಾಗವಹಿಸುವುದಾಗಿ ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT