ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮಮಂದಿರದತ್ತ ಹರಿದುಬಂದ ಭಕ್ತಸಾಗರ: ಅಯೋಧ್ಯೆಗೆ ಧಾವಿಸಿದ ಸಿಎಂ ಆದಿತ್ಯನಾಥ

ದರ್ಶನಕ್ಕೆ ಸೂಕ್ತ ವ್ಯವಸ್ಥೆಗೆ ಸೂಚನೆ
Published 23 ಜನವರಿ 2024, 15:14 IST
Last Updated 23 ಜನವರಿ 2024, 15:14 IST
ಅಕ್ಷರ ಗಾತ್ರ

ಲಖನೌ: ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ನಡೆದ ಮಾರನೆಯ ದಿನವಾದ ಮಂಗಳವಾರ ರಾಮ ಮಂದಿರವನ್ನು ಸಾರ್ವಜನಿಕರ ಪ್ರವೇಶಕ್ಕೆ ಮುಕ್ತಗೊಳಿಸಿದ್ದು, ಭಕ್ತರು ದೊಡ್ಡ ಸಂಖ್ಯೆಯಲ್ಲಿ ಮಂದಿರದತ್ತ ಹರಿದುಬಂದರು. ಇದರ ಪರಿಣಾಮವಾಗಿ ರಾಮ ಜನ್ಮಭೂಮಿ ಸಂಕೀರ್ಣದ ಒಳಗೆ ಹಾಗೂ ಅದರ ಸುತ್ತಮುತ್ತ ಗೊಂದಲ ಸೃಷ್ಟಿಯಾಗಿತ್ತು.

ಜನಸಂದಣಿಯನ್ನು ತಗ್ಗಿಸಲು ಅಯೋಧ್ಯೆಗೆ ಬಸ್‌ ಸೇವೆಯನ್ನು ಸ್ಥಗಿತಗೊಳಿಸಲಾಯಿತು. ಅಲ್ಲದೆ, ಲಖನೌ–ಅಯೋಧ್ಯೆ ಹೆದ್ದಾರಿಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿತ್ತು. ಭಕ್ತರು ತಾಳ್ಮೆಯಿಂದ ಇರಬೇಕು ಎಂದು ಮನವಿ ಮಾಡಲಾಯಿತು.

ಅಯೋಧ್ಯೆಗೆ ಧಾವಿಸಿ ಬಂದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು, ರಾಮ ಮಂದಿರ ಸಂಕೀರ್ಣದ ವೈಮಾನಿಕ ಸಮೀಕ್ಷೆ ನಡೆಸಿದರು, ಮಂದಿರಕ್ಕೆ ಬರುವ ಭಕ್ತರಿಗೆ ಬಾಲರಾಮನ ದರ್ಶನಕ್ಕೆ ಯಾವುದೇ ಅಡ್ಡಿ ಆಗದಂತೆ ನೋಡಿಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಂದಿರದ ಬಾಗಿಲನ್ನು ಸಂಜೆ ಏಳು ಗಂಟೆಗೆ ಮುಚ್ಚಲಾಯಿತು. ಅಲ್ಲಿಯವರೆಗೆ ಅಂದಾಜು ಐದು ಲಕ್ಷಕ್ಕೂ ಹೆಚ್ಚು ಮಂದಿ ದರ್ಶನ ‍ಮಾಡಿರಬಹುದು ಎಂದು ಮೂಲಗಳು ಹೇಳಿವೆ. ಭಕ್ತರು ಮಂಗಳವಾರ ನಸುಕಿನ 3 ಗಂಟೆಯಿಂದಲೇ ಮಂದಿರದ ಹೊರಗಡೆ ಸೇರಲು ಆರಂಭಿಸಿದ್ದರು. ಬೆಳಿಗ್ಗೆ 6.30ಕ್ಕೆ ಮಂದಿರದ ಬಾಗಿಲನ್ನು ತೆರೆಯುವ ಹೊತ್ತಿನಲ್ಲಿ, ಮಂದಿರದ ಹೊರಗೆ ಭಕ್ತರ ಸಾಗರವೇ ಸೇರಿತ್ತು. ಇದು ಅಧಿಕಾರಿಗಳಿಗೂ ಆಶ್ಚರ್ಯ ತರಿಸಿತು. ಮಂದಿರದ ಒಳಗೆ ಹೋಗಲು ಭಕ್ತರು ನಾಮುಂದು, ತಾಮುಂದು ಎಂದು ಮುನ್ನಡೆದಾಗ ಸ್ಥಳದಲ್ಲಿ ಗೊಂದಲ ನಿರ್ಮಾಣವಾಯಿತು. ಅವರನ್ನು ನಿಯಂತ್ರಿಸಲು ಮಂದಿರದ ಭದ್ರತಾ ಸಿಬ್ಬಂದಿ ಹರಸಾಹಸಪಡಬೇಕಾಯಿತು.

ಪ್ರವಾಹದೋಪಾದಿಯಲ್ಲಿ ಮಂದಿರದ ಕಡೆ ಬರುತ್ತಿದ್ದ ಭಕ್ತರನ್ನು ನಿಯಂತ್ರಿಸಲು ಭದ್ರತಾ ಸಿಬ್ಬಂದಿ ಕಷ್ಟಪಡುತ್ತಿದ್ದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ನೆಲಕ್ಕೆ ಬಿದ್ದ ಕೆಲವು ಭಕ್ತರನ್ನು ಭದ್ರತಾ ಸಿಬ್ಬಂದಿ ಮೇಲಕ್ಕೆತ್ತಿರುವುದು ಕೂಡ ದೃಶ್ಯಗಳಲ್ಲಿ ಇದೆ. ಸೂರ್ಯ ಮೇಲಕ್ಕೇರುತ್ತಿದ್ದಂತೆ ಭಕ್ತರ ಸಂಖ್ಯೆಯೂ ಹೆಚ್ಚತೊಡಗಿತು. ಮಧ್ಯಾಹ್ನ ವೇಳೆಗೆ ಅಯೋಧ್ಯೆಯು ಭಕ್ತರಿಂದ ತುಂಬಿಹೋಗಿತ್ತು.

ಸಹಸ್ರಾರು ಮಂದಿ ಭಕ್ತರು ಎರಡು–ಮೂರು ದಿನಗಳ ಹಿಂದೆಯೇ ಅಯೋಧ್ಯೆಗೆ ಬಂದು, ಬೇರೆ ಬೇರೆ ಕಡೆಗಳಲ್ಲಿ ಉಳಿದುಕೊಂಡಿದ್ದರು. ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕಾಗಿ ಶುಕ್ರವಾರ ರಾತ್ರಿಯಿಂದ ಮಂದಿರದ ಬಾಗಿಲು ಮುಚ್ಚಲಾಗಿತ್ತು. ಹೀಗಾಗಿ ಈ ಭಕ್ತರಿಗೆ ಮಂದಿರಕ್ಕೆ ಬರಲು ಸಾಧ್ಯವಾಗಿರಲಿಲ್ಲ.

ಭಕ್ತರನ್ನು ನಿಯಂತ್ರಿಸಲು ಕೈಗೊಂಡಿರುವ ಕ್ರಮಗಳ ಮೇಲ್ವಿಚಾರಣೆಗೆ ಉತ್ತರ ಪ್ರದೇಶ ಸರ್ಕಾರವು ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರನ್ನು ಅಯೋಧ್ಯೆಗೆ ಕಳುಹಿಸಿತ್ತು.

ಅಯೋಧ್ಯೆಯ ಕಡೆ ಸಾಗುವ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ಪಾಸ್ ಇಲ್ಲದ ಯಾವ ವಾಹನವನ್ನೂ ಅಯೋಧ್ಯೆಯೊಳಕ್ಕೆ ಬಿಡುತ್ತಿರಲಿಲ್ಲ ಎಂದು ಮೂಲಗಳು ಹೇಳಿವೆ. ಮಂದಿರದಲ್ಲಿ ಬಾಲರಾಮನ ದರ್ಶನವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ ಎಂದು ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಸುದ್ದಿಯು ಸುಳ್ಳು ಎಂದು ಅಯೋಧ್ಯೆಯ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ರಾಮಲಲ್ಲಾ ಇನ್ನು ಬಾಲರಾಮ
ರಾಮ ಮಂದಿರದಲ್ಲಿನ ರಾಮ ವಿಗ್ರಹವನ್ನು ಇನ್ನು ಮುಂದೆ ‘ಬಾಲರಾಮ’ ಎಂದು ಕರೆಯಲಾಗುತ್ತದೆ. ಹಿಂದಿಯಲ್ಲಿ ಇದುವರೆಗೆ ‘ರಾಮ ಲಲ್ಲಾ’ ಎಂದು ಕರೆಯಲಾಗುತ್ತಿತ್ತು. ಮಂದಿರದಲ್ಲಿ ಇರುವ ರಾಮಮೂರ್ತಿಯು ಐದು ವರ್ಷ ವಯಸ್ಸಿನ ರಾಮನನ್ನು ಪ್ರತಿನಿಧಿಸುವ ಕಾರಣ, ‘ಬಾಲರಾಮ’ ಎಂಬ ಹೆಸರಿನಲ್ಲಿ ಆತನನ್ನು ಕರೆಯಲಾಗುತ್ತದೆ ಎಂದು ಮಂದಿರದ ಪುರೋಹಿತರೊಬ್ಬರು ತಿಳಿಸಿದ್ದಾರೆ. ಬಾಲರಾಮನ ಅಂಗವಸ್ತ್ರಕ್ಕೆ ಬಂಗಾರದ ಎಳೆಗಳ ಝರಿಯಿಂದ ಅಲಂಕಾರ ಮಾಡಲಾಗಿದೆ. ಬಾಲರಾಮನಿಗೆ ಚಿನ್ನದ ಕಿರೀಟ ತೊಡಿಸಲಾಗಿದೆ. ಅಡಿಯಿಂದ ಮುಡಿಯವರೆಗೆ ಚಿನ್ನದ ಆಭರಣ ಹೊದಿಸಲಾಗಿದೆ.

‘ಬಾಲರಾಮನ ದರ್ಶನ ಪಡೆಯದೆ ಯಾವ ಭಕ್ತನೂ ಅಯೋಧ್ಯೆಯಿಂದ ಮರಳುವಂತೆ ಆಗಬಾರದು ಎಂಬುದು ನಮ್ಮ ಬದ್ಧತೆ... ಬಾಲರಾಮನ ದರ್ಶನ ಪಡೆಯಲು ಭಕ್ತರನ್ನು ಮಂದಿರದೊಳಕ್ಕೆ ಬಿಡಲಾಗುತ್ತಿದೆ’ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ನೆರೆಯ ಬಾರಾಬಂಕಿ ಜಿಲ್ಲೆಯಲ್ಲಿ, ಅಯೋಧ್ಯೆಯ ಮೂಲಕ ಸಾಗುವ ವಾಹನಗಳಿಗೆ ಬೇರೊಂದು ಮಾರ್ಗ ಬಳಸುವಂತೆ ಹೇಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಯೋಧ್ಯೆಗೆ ಸಾಗುವ ವಾಹನಗಳ ಮೇಲೆ ನಿರ್ಬಂಧ ಹೇರಲು, ಜಿಲ್ಲೆಯ ಗಡಿಗಳಲ್ಲಿ ತಡೆಗೋಡೆ ಅಳವಡಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಅಯೋಧ್ಯೆಗೆ ಬಂದಿರುವ ಭಕ್ತರು ಬಾಲರಾಮನ ದರ್ಶನ ಪಡೆದು, ಅಯೋಧ್ಯೆಯಿಂದ ತಮ್ಮ ಊರುಗಳಿಗೆ ಮರಳಲು ಶುರುವಾದ ನಂತರದಲ್ಲಿ, ಇನ್ನು ಒಂದೆರಡು ದಿನಗಳಲ್ಲಿ ಪರಿಸ್ಥಿತಿ ಸುಧಾರಿಸಬಹುದು ಎಂದು ಅಧಿಕಾರಿಗಳು ನಿರೀಕ್ಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT