ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಕ್ತ ಬಹುಮಾನ ಸಿಕ್ಕಿಲ್ಲ | ಚೆಕ್‌ ವಾಪಸ್ ಕೊಡ್ತೀವಿ: ರ್‍ಯಾಟ್–ಹೋಲ್ ಮೈನರ್ಸ್

Published 23 ಡಿಸೆಂಬರ್ 2023, 23:30 IST
Last Updated 23 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

ಡೆಹ್ರಾಡೂನ್‌: ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರನ್ನು ಹೊರ ತರುವಲ್ಲಿ ಪ್ರಧಾನ ಪಾತ್ರ ನಿರ್ವಹಿಸಿದ್ದಕ್ಕೆ ಪ್ರತಿಯಾಗಿ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ಅವರು ನೀಡಿದ್ದ ತಲಾ ₹50 ಸಾವಿರದ ಚೆಕ್‌ ಅನ್ನು ನಗದೀಕರಿಸಿಕೊಳ್ಳಲು ರ್‍ಯಾಟ್–ಹೋಲ್ ಮೈನರ್‌ಗಳು ನಿರಾಕರಿಸಿದ್ದಾರೆ.  

ಸರ್ಕಾರದಿಂದ ಗೌರವಕ್ಕೆ ಪಾತ್ರವಾಗಿದ್ದ 12 ಮಂದಿ ರ್‍ಯಾಟ್– ಹೋಲ್ ಮೈನರ್‌ಗಳೂ ಚೆಕ್‌ ಅನ್ನು ಹಿಂದಿರುಗಿಸಲು ನಿರ್ಧರಿಸಿದ್ದಾರೆ.   

‘ನಾವು ನಿರ್ವಹಿಸಿದ ಕೆಲಸಕ್ಕೆ ತಕ್ಕ ಬಹುಮಾನ ಮುಖ್ಯಮಂತ್ರಿಗಳಿಂದ ಸಿಕ್ಕಿಲ್ಲ’ ಎಂದು ಅವರು ದೂರಿದ್ದಾರೆ. 

‘ಅತ್ಯಂತ ಕಠಿಣ ಸ್ಥಿತಿಯಲ್ಲಿ ನಾವು ಕೆಲಸ ಮಾಡಿದ್ದೇವೆ. ಯಂತ್ರಗಳ ಸಹಾಯದಿಂದ ರಕ್ಷಣಾ ಕಾರ್ಯ ನಡೆಸಿದರೂ ಕಾರ್ಮಿಕರ ಬಳಿಗೆ ಹೋಗಲು ಸಾಧ್ಯವಾಗದ ಸಂದರ್ಭದಲ್ಲಿ ನಾವು ಕೈಯಲ್ಲಿ ಈ ಕೆಲಸ ಮಾಡಿ ಸಾಧಿಸಿದ್ದೆವು. ನಮ್ಮ ಪ್ರಾಣವನ್ನು ಪಣವಾಗಿಟ್ಟು, ಪ್ರತಿಫಲಾಪೇಕ್ಷೆ ಇಲ್ಲದೇ ಸುರಂಗ ಕೊರೆದೆವು. ನಮ್ಮ ಈ ಕೆಲಸಕ್ಕೆ ಬಹುಮಾನ ನೀಡಿದ ಮುಖ್ಯಮಂತ್ರಿಯವರ ನಡೆಯನ್ನು ಗೌರವಿಸುತ್ತೇವೆ. ಆದರೆ, ಅವರು ಘೋಷಿಸಿದ ಬಹುಮಾನದ ಮೊತ್ತ ನಮಗೆ ತೃಪ್ತಿ ನೀಡಿಲ್ಲ’ ಎಂದು ರ್‍ಯಾಟ್–ಹೋಲ್ ಮೈನರ್‌ಗಳ ತಂಡವನ್ನು ಮುನ್ನಡೆಸಿದ್ದ ವಕೀಲ್‌ ಹಸನ್‌ ತಿಳಿಸಿದ್ದಾರೆ. 

‘ನಮಗೆ ಚೆಕ್‌ ಕೊಟ್ಟ ದಿನವೇ ನಾವು ನಮ್ಮ ಅತೃಪ್ತಿಯನ್ನು ಸಿ.ಎಂಗೆ ತಿಳಿಸಿದ್ದೆವು. ಕೆಲವೇ ದಿನಗಳಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಅಧಿಕಾರಿಗಳು ಹೇಳಿದ್ದರು. ಆದರೆ ನಮಗೆ ನೀಡಲಾದ ವಾಗ್ದಾನ ಈವರೆಗೆ ಈಡೇರಿಲ್ಲ. ಹೀಗಾಗಿ ಚೆಕ್‌ಗಳನ್ನು ಮರಳಿಸುತ್ತಿದ್ದೇವೆ’ ಎಂದು ಹಸನ್‌ ತಿಳಿಸಿದ್ದಾರೆ. 

‘ನಾವು ನಿರ್ವಹಿಸಿದ ಕಾರ್ಯಕ್ಕೆ ಪ್ರತಿಯಾಗಿ ನಮಗೆ ನೌಕರಿ ಅಥವಾ ಸ್ವಂತ ಮನೆ ಒದಗಿಸಿಕೊಡಬೇಕು’ ಎಂದು ಅವರು ಒತ್ತಾಯಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT