ಕೋಲ್ಕತ್ತ: ಆರ್.ಜಿ ಕರ್ ಆಸ್ಪತ್ರೆಯಲ್ಲಿ ನಡೆದ ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್(ಟಿಎಂಸಿ) ಶಾಸಕ ನಿರ್ಮಲ್ ಘೋಷ್ ಅವರು ಸೋಮವಾರ ಸಿಬಿಐ ಅಧಿಕಾರಿಗಳ ಮುಂದೆ ಹಾಜರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಾನಿಹಟಿ ಶಾಸಕ ಘೋಷ್ ಅವರು ಬೆಳಗ್ಗೆ 10.30ರ ಸುಮಾರಿಗೆ ಸಾಲ್ಟ್ ಲೇಕ್‌ನಲ್ಲಿರುವ ಸಿಬಿಐನ ಸಿಜಿಒ ಕಾಂಪ್ಲೆಕ್ಸ್ ಕಚೇರಿಗೆ ತೆರಳಿದ್ದರು. 'ಆರ್.ಜಿ ಕರ್ ಆಸ್ಪತ್ರೆಯ ಘಟನೆಯ ಕುರಿತು ಅವರನ್ನು (ನಿರ್ಮಲ್ ಘೋಷ್) ವಿಚಾರಣೆಗೆ ಕರೆದಿದ್ದೇವೆ' ಎಂದು ಸಿಬಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತರಾತುರಿಯಲ್ಲಿ ಮೃತ ವೈದ್ಯ ವಿದ್ಯಾರ್ಥಿನಿಯ ಅಂತ್ಯಕ್ರಿಯೆ ನೆರವೇರಿಸುವಲ್ಲಿ ಘೋಷ್ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಆಗಸ್ಟ್ 9ರಂದು ವೈದ್ಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿ, ಹತ್ಯೆ ಮಾಡಲಾಗಿತ್ತು. ಘಟನೆ ಖಂಡಿಸಿ ಪಶ್ಚಿಮ ಬಂಗಾಳದಲ್ಲಿ ಆಕ್ರೋಶ ಭುಗಿಲೆದ್ದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ.