ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶ್ರೀಮಂತ ದೇಶಗಳು ಹವಾಮಾನ ಧನಸಹಾಯ ಒದಗಿಸಲಿ: ಭೂಪೇಂದ್ರ ಯಾದವ್

Published 28 ಜೂನ್ 2024, 15:18 IST
Last Updated 28 ಜೂನ್ 2024, 15:18 IST
ಅಕ್ಷರ ಗಾತ್ರ

ನವದೆಹಲಿ: ಇಂಗಾಲದ ಗರಿಷ್ಠ ಹೊರಸೂಸುವಿಕೆಗೆ ಚಾರಿತ್ರಿಕವಾಗಿ ಜವಾಬ್ದಾರಿಯಾದಂಥ ಮುಂದುವರಿದ ದೇಶಗಳು, ಹವಾಮಾನ ಬಿಕ್ಕಟ್ಟನ್ನು ಎದುರಿಸಲು ಅಭಿವೃದ್ಧಿಶೀಲ ದೇಶಗಳಿಗೆ ಹಣಕಾಸು ನೆರವು ನೀಡುವ ಜವಾಬ್ದಾರಿ ಹೊರಲು ಮುಂದೆ ಬರಬೇಕು ಎಂದು ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಶುಕ್ರವಾರ ಹೇಳಿದರು.

ಅಜರ್‌ಬೈಜಾನ್‌ನ ಬಾಕು ನಗರದಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಹವಾಮಾನ ಸಮ್ಮೇಳನದಲ್ಲಿ ಹವಾಮಾನ ಧನಸಹಾಯ ಎನ್ನುವುದು ಪ್ರಮುಖ ವಿಷಯವಾಗಿದೆ. ಸಮ್ಮೇಳನದಲ್ಲಿ ‘ನ್ಯೂ ಕಲೆಕ್ಟೀವ್ ಕ್ವಾಂಟಿಫೈಡ್ ಗೋಲ್’ (ಎನ್‌ಸಿಕ್ಯುಜಿ) ಬಗ್ಗೆ ಒಪ್ಪಿಗೆ ಸೂಚಿಸಬೇಕಿದ್ದು, ಅದರಂತೆ 2025ರಿಂದ ಆರಂಭಿಸಿ ಪ್ರತಿ ವರ್ಷ ಮುಂದುವರಿದ ದೇಶಗಳು ಅಭಿವೃದ್ಧಿಶೀಲ ದೇಶಗಳಿಗಾಗಿ ಹಣ ಸಂಗ್ರಹ ಮಾಡಬೇಕಿದೆ.

‘ಟೈಮ್ಸ್ ನೆಟ್‌ವರ್ಕ್’ ಆಯೋಜಿಸಿದ್ದ ಹವಾಮಾನ ಶೃಂಗಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಯಾದವ್, ‘ತಾಪಮಾನ ಏರಿಕೆ ಎನ್ನುವುದು ಜಾಗತಿಕ ವಿದ್ಯಮಾನ. ಇಂಗಾಲದ ಹೊರಸೂಸುವಿಕೆಯ ಹೆಚ್ಚಳದಿಂದ ಜಾಗತಿಕವಾಗಿ ತಾಪಮಾನ ಏರಿಕೆ ಆಗುತ್ತಿದೆ ಎಂದು ಐಪಿಸಿಸಿ ವರದಿಗಳು ಹೇಳುತ್ತಿವೆ. ಹವಾಮಾನ ಬದಲಾವಣೆ ಕಡಿಮೆ ಮಾಡುವ ದಿಸೆಯಲ್ಲಿ ಈಗಾಗಲೇ ಹಲವು ದೇಶಗಳು ಸಿದ್ಧತೆ ಆರಂಭಿಸಿವೆ. ನವೀಕರಿಸಬಹುದಾದ ಇಂಧನ ವಲಯದಲ್ಲಾಗಲಿ ಅಥವಾ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವುದರಲ್ಲಾಗಲಿ ಭಾರತವು ತನ್ನ ಹವಾಮಾನ ಗುರಿಯನ್ನು ಸಾಧಿಸಿದೆ’ ಎಂದು ತಿಳಿಸಿದರು.

‘ಜಗತ್ತಿನಲ್ಲಿ ಸಮಾನ ಬೆಳವಣಿಗೆ ಸಾಧಿಸಬೇಕೆಂದರೆ, ಮುಂದುವರಿದ ದೇಶಗಳು ಅಭಿವೃದ್ಧಿಶೀಲ ದೇಶಗಳಿಗೆ ಹಣಕಾಸಿನ ಮತ್ತು ತಾಂತ್ರಿಕ ನೆರವನ್ನು ಒದಗಿಸಬೇಕು. ದುರದೃಷ್ಟವಶಾತ್ ಹಾಗಾಗುತ್ತಿಲ್ಲ’ ಎಂದು ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT