ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

BJP ಆಡಳಿತದಲ್ಲಿ ಜನರ ಮೂಲಭೂತ ಹಕ್ಕುಗಳು ನಾಶವಾಗುತ್ತಿವೆ: ಮಲ್ಲಿಕಾರ್ಜುನ ಖರ್ಗೆ

Published 26 ಜನವರಿ 2024, 11:18 IST
Last Updated 26 ಜನವರಿ 2024, 11:18 IST
ಅಕ್ಷರ ಗಾತ್ರ

ನವದೆಹಲಿ: ಪ್ರತಿಯೊಬ್ಬ ಭಾರತೀಯರಿಗೂ ಸಂವಿಧಾನವು ಖಾತ್ರಿಪಡಿಸಿರುವ ಮೂಲಭೂತ ಹಕ್ಕುಗಳು ಬಿಜೆಪಿ ಆಡಳಿತದಲ್ಲಿ ನಿಧಾನವಾಗಿ ನಾಶಗೊಳಿಸಲ್ಪಡುತ್ತಿವೆ. ಸರ್ಕಾರವು ನಾಗರಿಕರ ಗಮನವನ್ನು ಬೇರೆಡೆಗೆ ಸೆಳೆಯಲು ಮತ್ತು ಸತ್ಯವನ್ನು ಮರೆಮಾಚಲು ಭಾವನಾತ್ಮಕ ವಿಷಯಗಳನ್ನು ಬಳಸಿಕೊಳ್ಳುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.

ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ದೇಶದ ಜನರಿಗೆ 75ನೇ ಗಣರಾಜ್ಯೋತ್ಸವದ ಶುಭಾಶಯ ಕೋರಿರುವ ಖರ್ಗೆ, ಸಂವಿಧಾನ, ಪ್ರಜಾಪ್ರಭುತ್ವ ಮತ್ತು ನ್ಯಾಯದ ರಕ್ಷಣೆಗಾಗಿ ಕಾಂಗ್ರೆಸ್‌ ಹೋರಾಡಲು ಸಂಕಲ್ಪ ಮಾಡಿದೆ ಎಂದು ತಿಳಿಸಿದ್ದಾರೆ.

ಸಂವಿಧಾನವು ಭಾರತೀಯ ನಾಗರಿಕತೆಯ ಮೌಲ್ಯಗಳಾದ ನ್ಯಾಯ, ಘನತೆ, ಸಮಾನತೆ ಮತ್ತು ಎಲ್ಲರಿಗೂ ಸಮಾನವಾದ ಗೌರವವನ್ನು ಆಧರಿಸಿದೆ. ಇದು ನಮ್ಮ ದೇಶದ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಪರಿವರ್ತನೆಗೆ ಅಡಿಪಾಯವಾಗಿದೆ ಎಂದು ಅವರು ಹೇಳಿದ್ದಾರೆ.

‘ಸಂವಿಧಾನವು ಪ್ರತಿಯೊಬ್ಬ ನಾಗರಿಕರಿಗೂ ಮೂಲಭೂತ ಹಕ್ಕುಗಳು, ಸಾಮಾಜಿಕ ನ್ಯಾಯ ಮತ್ತು ರಾಜಕೀಯ ಹಕ್ಕುಗಳನ್ನು ಖಾತ್ರಿಪಡಿಸಿದೆ. ನ್ಯಾಯ, ಸಮಾನತೆ, ಭ್ರಾತೃತ್ವ, ಸ್ವಾತಂತ್ರ್ಯ, ಜಾತ್ಯತೀತತೆ ಮತ್ತು ಸಮಾಜವಾದವು ಭಾರತದ ಆಧಾರ ಸ್ತಂಭಗಳಾಗಿವೆ. ಆದರೆ, ಇಂದು ಈ ಸ್ತಂಭಗಳ ಮೇಲೆ ಸರ್ಕಾರದಿಂದಲೇ ದಾಳಿ ನಡೆಯುತ್ತಿದೆ’ ಎಂದು ಖರ್ಗೆ ಆರೋಪಿಸಿದ್ದಾರೆ.

‘ಇಂದು, ಪ್ರತಿಯೊಬ್ಬ ಭಾರತೀಯರಿಗೂ ಸಂವಿಧಾನ ಖಾತರಿಪಡಿಸಿರುವ ಮೂಲಭೂತ ಹಕ್ಕುಗಳು ನಿಧಾನವಾಗಿ ಅತಿಕ್ರಮಣಗೊಳ್ಳುತ್ತಿವೆ ಮತ್ತು ನಾಶವಾಗುತ್ತಿವೆ. ಭಾವನಾತ್ಮಕ ವಿಷಯಗಳನ್ನು ಬಳಸಿಕೊಂಡು ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಮತ್ತು ನಾಗರಿಕರಿಂದ ಸತ್ಯವನ್ನು ಮರೆಮಾಚಲು ಸರ್ಕಾರ ಪ್ರಯತ್ನಿಸುತ್ತಿದೆ. ಸಂವಿಧಾನದ ಮೇಲಿನ ದಾಳಿಯು ಯೋಜಿತ ಪಿತೂರಿಯ ಭಾಗವಾಗಿದೆ. ಇಂದು ನಮ್ಮ ಸಂವಿಧಾನದಲ್ಲಿ ನಂಬಿಕೆಯಿಲ್ಲದ ಜನರು ಸರ್ಕಾರವನ್ನು ನಡೆಸುತ್ತಿದ್ದಾರೆ’ ಎಂದು ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಮ್ಮ ಸಂವಿಧಾನದ ಸಂಸ್ಥಾಪನಾ ಸದಸ್ಯರಾದ ಪಂಡಿತ್‌ ಜವಾಹರ್‌ಲಾಲ್ ನೆಹರೂ, ಬಾಬಾ ಸಾಹೇಬ್‌ ಅಂಬೇಡ್ಕರ್‌, ಸರ್ದಾರ್‌ ವಲ್ಲಭ ಬಾಯಿ ಪಟೇಲ್‌, ಬಾಬು ರಾಜೇಂದ್ರ ಪ್ರಸಾದ್‌, ಮೌಲಾನಾ ಆಜಾದ್‌ ಮತ್ತು ಸಂವಿಧಾನ ರಚನಾ ಸಭೆಯ ಇತರ ದಿಗ್ಗಜರು ಸಂವಿಧಾನವು ಇಂತಹ ಸವಾಲುಗಳನ್ನು ಎದುರಿಸುತ್ತದೆ ಎಂದು ಊಹಿಸಿರಲಿಲ್ಲ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT