ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರತ್ಯೇಕ ರಾಷ್ಟ್ರ’: ಸಂಸದ ಡಿ.ಕೆ ಸುರೇಶ್ ಹೇಳಿಕೆ ಸಂಸತ್‌ನಲ್ಲಿ ಪ್ರತಿಧ್ವನಿ

ಸುರೇಶ್ ವಿರುದ್ಧ ಹಕ್ಕುಬಾಧ್ಯತಾ ಸಮಿತಿಯಿಂದ ತನಿಖೆಗೆ ಬಿಜೆಪಿ ಒತ್ತಾಯ
Published 2 ಫೆಬ್ರುವರಿ 2024, 23:30 IST
Last Updated 2 ಫೆಬ್ರುವರಿ 2024, 23:30 IST
ಅಕ್ಷರ ಗಾತ್ರ

ನವದೆಹಲಿ: ‘ಅನುದಾನ ತಾರತಮ್ಯ ನಿಲ್ಲಿಸದಿದ್ದರೆ ದಕ್ಷಿಣ ಭಾರತದ ರಾಜ್ಯಗಳು ಪ್ರತ್ಯೇಕ ರಾಷ್ಟ್ರದ ಬೇಡಿಕೆ ಮುಂದಿಡಬೇಕಾಗುತ್ತದೆ’ ಎಂದು ಕಾಂಗ್ರೆಸ್‌ ಸಂಸದ ಡಿ.ಕೆ. ಸುರೇಶ್‌ ನೀಡಿರುವ ಹೇಳಿಕೆ, ಸಂಸತ್‌ನ ಉಭಯ ಸದನಗಳಲ್ಲಿ ಶುಕ್ರವಾರ ಪ್ರತಿಧ್ವನಿಸಿತು. 

ದೇಶ ವಿಭಜನೆಯ ಕೂಗೆಬ್ಬಿಸಿರುವ ಸುರೇಶ್ ವಿರುದ್ಧ ಹಕ್ಕುಬಾಧ್ಯತಾ ಸಮಿತಿಯಿಂದ ತನಿಖೆ ನಡೆಸಬೇಕು ಎಂದು ಆಗ್ರಹಿಸಿರುವ ಆಡಳಿತಾರೂಢ ಬಿಜೆಪಿ, ‘ಈ ಬಗ್ಗೆ ಕಾಂಗ್ರೆಸ್‌ ಪಕ್ಷವು ದೇಶದ ಕ್ಷಮೆಯಾಚಿಸಬೇಕು’ ಎಂದು ಆಗ್ರಹಿಸಿತು. ಆದರೆ, ತನ್ನ ಸಂಸದನ ಹೇಳಿಕೆಯಿಂದ ಕಾಂಗ್ರೆಸ್‌ ಅಂತರ ಕಾಯ್ದುಕೊಂಡಿದೆ. 

ಸುರೇಶ್‌ ಹೇಳಿಕೆಯನ್ನು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕಾಂಗ್ರೆಸ್‌ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಖಂಡಿಸಬೇಕು ಮತ್ತು ದೇಶದ ಜನರ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಆಗ್ರಹಿಸಿತು. ಕಾಂಗ್ರೆಸ್‌ ಪಕ್ಷ, ತನ್ನ ಸಂಸದನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದೂ ಒತ್ತಾಯಿಸಿತು. 

ಲೋಕಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ, ‘ದೇಶ ವಿಭಜನೆ ಹೇಳಿಕೆ ನೀಡುವ ಮೂಲಕ ಸುರೇಶ್ ಅವರು ಭಾರತೀಯ ಸಂವಿಧಾನಕ್ಕೆ ಹಾಗೂ ಡಾ.ಬಿ.ಆರ್‌. ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ್ದಾರೆ. ರಾಷ್ಟ್ರದ ಅಖಂಡತೆಗೆ ಧಕ್ಕೆ ತಂದಿದ್ದಾರೆ. ಹಾಗಾಗಿ ಅವರ ವಿರುದ್ಧ ಕಾನೂನಾತ್ಮಕ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದರು. 

‘ದೇಶವನ್ನು ದಕ್ಷಿಣ ಭಾರತ- ಉತ್ತರ ಭಾರತ ಎಂದು ಹೇಳುವುದೇ ತಪ್ಪು. ನಾನೂ ಒಬ್ಬ ದಕ್ಷಿಣ ಭಾಗದ ಸಂಸದ. ದೇಶದ ಅಖಂಡತೆಯನ್ನು ಎತ್ತಿ ಹಿಡಿಯುತ್ತೇನೆ. ದೇಶ ವಿಭಜಿಸುವ ಹೇಳಿಕೆ ನೀಡಿದವರಿಗೆ ತಕ್ಕ ಶಾಸ್ತಿ ಆಗಬೇಕು’ ಎಂದು ಅವರು ಹೇಳಿದರು. ಸುರೇಶ್‌ ಹೇಳಿಕೆಗೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಸಹ ಆಕ್ಷೇಪ ವ್ಯಕ್ತಪಡಿಸಿದರು. 

ರಾಜ್ಯಸಭೆಯಲ್ಲಿ ಸದನದ ನಾಯಕ ಪೀಯೂಷ್‌ ಗೋಯಲ್‌, ‘ಕಾಂಗ್ರೆಸ್‌ ಸಂಸದ ದುರದೃಷ್ಟಕರ ಹೇಳಿಕೆ ನೀಡಿದ್ದಾರೆ. ಅವರು ಸಾಮಾನ್ಯ ಕಾರ್ಯಕರ್ತರಲ್ಲ. ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಹೋದರ. ಕಾಂಗ್ರೆಸ್‌ನಲ್ಲಿ ವಿಭಜಕ ಶಕ್ತಿಗಳು ಇನ್ನೂ ಜೀವಂತವಾಗಿವೆ ಎಂಬುದಕ್ಕೆ ಇದೊಂದು ನಿದರ್ಶನ’ ಎಂದು ಹೇಳಿದರು. 

‘ದೇಶದ ಸಂವಿಧಾನದ ಅಡಿಯಲ್ಲಿ ಚುನಾಯಿತರಾದ ಸಂಸದರು ದೇಶದ ಸಾರ್ವಭೌಮತೆಯನ್ನು ರಕ್ಷಿಸುತ್ತೇನೆ ಎಂದು ಪ್ರಮಾಣವಚನ ಸ್ವೀಕರಿಸುತ್ತಾರೆ. ಇಂತಹ ಹೇಳಿಕೆಗಳನ್ನು ನಿರ್ಲಕ್ಷ್ಯ ಮಾಡಲು ಸಾಧ್ಯವೇ ಇಲ್ಲ. ಇದು ಸಂವಿಧಾನದ ಮೇಲಿನ ನೇರ ದಾಳಿ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. 

ವಿರೋಧಪಕ್ಷದ ನಾಯಕ ಖರ್ಗೆ, ‘ಸುರೇಶ್ ಅವರು ಲೋಕಸಭೆಯ ಸದಸ್ಯರು. ಹಾಗಾಗಿ, ಮೇಲ್ಮನೆಯಲ್ಲಿ ಈ ವಿಷಯ ಚರ್ಚಿಸುವುದು ಸರಿಯಲ್ಲ. ಈ ವಿಷಯದ ಬಗ್ಗೆ ಚರ್ಚಿಸಲು ನಿಯಮಗಳು ಅನುಮತಿಸುವುದಿಲ್ಲ’ ಎಂದರು. ಆಗ ಸಭಾಪತಿ ಜಗದೀಪ್‌ ಧನಕರ್ ಅವರು ತಾವು ನೀಡಿರುವ ರೂಲಿಂಗ್ ಅನ್ನು ನೆನಪಿಸಿದರು. ‘ಇಂತಹ ವಿಷಯಗಳ ಬಗ್ಗೆ ಚರ್ಚಿಸಬಹುದು’ ಎಂದು ಸ್ಪಷ್ಟಪಡಿಸಿದರು. 

ಖರ್ಗೆ ಮಾತನಾಡಿ, ‘ಯಾರಾದರೂ ದೇಶವನ್ನು ವಿಭಜಿಸುವ ಬಗ್ಗೆ ಮಾತನಾಡಿದರೆ ನಾವು ಅದನ್ನು ಯಾವತ್ತೂ ಸಹಿಸುವುದಿಲ್ಲ. ದೇಶದ ಏಕತೆ ಕಾಪಾಡಲು ಇಂದಿರಾ ಗಾಂಧಿ ಹಾಗೂ ರಾಜೀವ್‌ ಗಾಂಧಿ ತಮ್ಮ ಜೀವವನ್ನೇ ಕೊಟ್ಟಿದ್ದಾರೆ’ ಎಂದರು. ‘ಒಂದು ವೇಳೆ ಸುರೇಶ್ ಅವರು ಅಂತಹ ಹೇಳಿಕೆ ನೀಡಿದ್ದರೆ, ಲೋಕಸಭೆಯ ಹಕ್ಕುಬಾಧ್ಯತಾ ಸಮಿತಿ ಅದನ್ನು ಪರಿಶೀಲಿಸಲಿ’ ಎಂದೂ ಖರ್ಗೆ ಹೇಳಿದರು. 

ಹೇಳಿಕೆಗೆ ದೇವೇಗೌಡ ಆಕ್ಷೇಪ

ಡಿ.ಕೆ. ಸುರೇಶ್ ಹೇಳಿಕೆಗೆ ಜೆಡಿಎಸ್‌ನ ರಾಜ್ಯಸಭಾ ಸದಸ್ಯ ಎಚ್‌.ಡಿ.ದೇವೇಗೌಡ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 

‘ಸುರೇಶ್ ಅವರು ಯಾವ ಉದ್ದೇಶದಿಂದ ಮಾತನಾಡಿದ್ದಾರೆ ಎಂಬುದು ಗೊತ್ತಿಲ್ಲ. ಅವರು ವ್ಯಕ್ತಿಗತವಾಗಿ ಹೇಳಿರಬಹುದು, ಅದು ಪಕ್ಷದ ನಿರ್ಣಯ ಅಲ್ಲ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪಕ್ಷ ಕಾಂಗ್ರೆಸ್‌. ಕೇಂದ್ರದಲ್ಲಿ ದಶಕಗಳ ಕಾಲ ಆಡಳಿತ ನಡೆಸಿದ ಪಕ್ಷವದು. ಅನುದಾನ ಹಂಚಿಕೆಯಲ್ಲಿ ಅನ್ಯಾಯವಾಗಿದ್ದರೆ ಬಜೆಟ್‌ ಮೇಲಿನ ಚರ್ಚೆ ವೇಳೆ ಮಾತನಾಡಬೇಕು’ ಎಂದು ಸಲಹೆ ನೀಡಿದರು. 

ಬಂಡೆ ಒಡೆದಷ್ಟು ಸುಲಭ ಅಲ್ಲ: ಯತ್ನಾಳ

‘ರಾಹುಲ್‌ ಗಾಂಧಿಗೆ ಹುಚ್ಚ ಅನ್ನಬೇಕೋ ಅರೇ ಹುಚ್ಚ ಅನ್ನಬೇಕೋ? ಆತ ಭಾರತ್ ಜೋಡೊ ಯಾತ್ರೆ ಮಾಡುತ್ತಿದ್ದಾನೆ. ದೇಶವನ್ನು ಒಡೆಯುವುದು ಕನಕಪುರದ ಬಂಡೆ ಒಡೆದಷ್ಟು ಸುಲಭ ಅಲ್ಲ ಎಂಬುದು ಸುರೇಶ್‌ಗೆ ನೆನಪಿರಲಿ’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ವ್ಯಂಗ್ಯವಾಡಿದರು. 

‘ಈಗಾಗಲೇ ಕಾಂಗ್ರೆಸ್‌ ಪಕ್ಷ ನಾಲ್ಕು ಭಾಗವಾಗಿ ಒಡೆದಿದೆ. ಒಂದು ಭಾಗ ಪಾಕಿಸ್ತಾನದಲ್ಲಿ, ಮತ್ತೊಂದು ಬಾಂಗ್ಲಾದೇಶದಲ್ಲಿ ಹಾಗೂ ಇನ್ನೊಂದು ಚೀನಾದಲ್ಲಿದೆ. ಈಗ ದಕ್ಷಿಣ ಭಾರತ ಹಾಗೂ ಉತ್ತರ ಭಾರತ ಎಂದು ಒಡೆಯಲು ನಿಂತಿದ್ದಾರೆ. ಇದಕ್ಕೆ ರಾಹುಲ್‌ ಉತ್ತರ ನೀಡಬೇಕು’ ಎಂದು ಆಗ್ರಹಿಸಿದರು. 

ನ್ಯಾಯಾಲಯಕ್ಕೆ ದೂರು

ಮಂಗಳೂರು: ದಕ್ಷಿಣ ಭಾರತದ ರಾಜ್ಯಗಳಿಗೆ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡುತ್ತಿಲ್ಲ. ಆದ್ದರಿಂದ, ಪ್ರತ್ಯೇಕ ರಾಷ್ಟ್ರದ ಬೇಡಿಕೆ ಮುಂದಿಡಬೇಕಾಗುತ್ತದೆ ಎಂದು ಹೇಳಿಕೆ ನೀಡಿರುವ ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ವಿರುದ್ಧ ಬಿಜೆಪಿ ಮುಖಂಡ ಬಂಟ್ವಾಳ ತಾಲ್ಲೂಕಿನ ವಿಕಾಸ್ ಪುತ್ತೂರು ಇಲ್ಲಿನ 2ನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಶುಕ್ರವಾರ ದೂರು ನೀಡಿದ್ದಾರೆ.

ನನ್ನ ಪಕ್ಷ ಅಥವಾ ಅವರ ಪಕ್ಷ ಅಥವಾ ಯಾವುದೇ ಪಕ್ಷದ ಯಾವುದೇ ನಾಯಕರು ದೇಶ ವಿಭಜನೆಯ ಹೇಳಿಕೆ ನೀಡಿದರೆ ಒಪ್ಪಲು ಸಾಧ್ಯವಿಲ್ಲ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ ಒಂದೇ. ನಾವು ಒಂದೇ ದೇಶವಾಗಿ ಉಳಿಯುತ್ತೇವೆ.
–ಮಲ್ಲಿಕಾರ್ಜುನ ಖರ್ಗೆ, ರಾಜ್ಯಸಭೆ ವಿರೋಧಪಕ್ಷದ ನಾಯಕ
ಸಂವಿಧಾನಕ್ಕೂ ಅಂಬೇಡ್ಕರ್ ಅವರಿಗೂ ಘೋರ ಅವಮಾನ ಮಾಡಿರುವ ಸುರೇಶ್‌ ವಿರುದ್ಧ ಕ್ರಮ ಕೈಗೊಳ್ಳಬೇಕು. ಕ್ರಮ ಕೈಗೊಳ್ಳದೇ ಹೋದಲ್ಲಿ ದೇಶವನ್ನು ಛಿದ್ರಗೊಳಿಸುವ ಹೇಳಿಕೆಗೆ ಕಾಂಗ್ರೆಸ್‌ ಬೆಂಬಲವೂ ಇದೆ ಎಂದು ಭಾವಿಸಬೇಕಾಗುತ್ತದೆ.
–ಪ್ರಲ್ಹಾದ ಜೋಶಿ, ಸಂಸದೀಯ ವ್ಯವಹಾರಗಳ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT