ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುದೀರ್ಘ ಕಥನ: ಆಗಸ–ಸಾಗರ ರಕ್ಷಣೆಗೆ ರಷ್ಯಾ ಸಹಯೋಗ

Last Updated 5 ಅಕ್ಟೋಬರ್ 2018, 11:33 IST
ಅಕ್ಷರ ಗಾತ್ರ

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಡನೆ ಎಸ್‌–400 ವಾಯುಪ್ರದೇಶ ರಕ್ಷಣಾ ಕ್ಷಿಪಣಿಗಳ ಖರೀದಿಗೆ ಪ್ರಧಾನಿ ನರೇಂದ್ರ ಮೋದಿ ಸಹಿ ಹಾಕಿದ್ದಾರೆ. ಸುಮಾರು ₹40 ಸಾವಿರ ಕೋಟಿ ಮೊತ್ತದ ಈ ಒಪ್ಪಂದ ಭಾರತದ ರಕ್ಷಣಾ ವ್ಯವಸ್ಥೆಯನ್ನು ಗಮನಾರ್ಹ ಪ್ರಮಾಣದಲ್ಲಿ ಸುಧಾರಿಸುವ ನಿರೀಕ್ಷೆ ಹುಟ್ಟುಹಾಕಿದೆ. ಎಸ್‌–400 ಎಂದರೇನು? ಭಾರತಕ್ಕೆ ಇದು ಏಕೆ ಅತ್ಯಗತ್ಯವಾಗಿತ್ತು? ಈ ಡೀಲ್ ಬಗ್ಗೆ ಅಮೆರಿಕ ಕೆಂಗಣ್ಣು ಬೀರಿದ್ದೇಕೆ? ಜಗತ್ತಿನ ಗಮನ ಸೆಳೆದ ‘ಎಸ್‌–400 ರಷ್ಯಾ–ಭಾರತ ಒಪ್ಪಂದ’ದ ಬಗ್ಗೆ ನೀವು ತಿಳಿಯಲು ಇಚ್ಛಿಸುವ ಮುಖ್ಯ ಅಂಶಗಳು ಇಲ್ಲಿವೆ ನೋಡಿ.

1) ಕ್ಷಿಪಣಿ ನಿರೋಧಕ ವ್ಯವಸ್ಥೆ ಎಂದರೇನು?

ದೇಶದತ್ತ ನುಗ್ಗಿಬರುವ ಖಂಡಾಂತರ ಕ್ಷಿಪಣಿ ಮತ್ತು ವಾಯುಮಾರ್ಗದ ಯಾವುದೇ ಬೆದರಿಕೆಗಳಿಂದ ರಕ್ಷಣೆ ಒದಗಿಸುವುದು ಕ್ಷಿಪಣಿ ನಿರೋಧಕ ವ್ಯವಸ್ಥೆಯ ಮುಖ್ಯಕಾರ್ಯ. ಇದರಲ್ಲಿ 400 ಕಿ.ಮೀ, 150 ಕಿ.ಮೀ ಮತ್ತು 50 ಕಿ.ಮೀ. ಅಂತರ ಕ್ರಮಿಸಬಲ್ಲ ಕ್ಷಿಪಣಿಗಳಿರುತ್ತವೆ. ಇವು ಶತ್ರುದೇಶಗಳು ಹಾರಿಬಿಟ್ಟ ಕ್ಷಿಪಣಿ ಅಥವಾ ವಿಮಾನಗಳನ್ನು ಹೊಡೆದುರುಳಿಸುತ್ತವೆ.

2) ಏನಿದು ಎಸ್‌–400 ಟ್ರಯಂಫ್?

ರಷ್ಯನ್ ನಿರ್ಮಿತ ಎಸ್–400 ಟ್ರಯಂಫ್ ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ನ್ಯಾಟೊ ‘ಎಸ್‌ಎ021 ಗ್ರಾವಲರ್’ ಎಂದು ಕರೆಯುತ್ತವೆ. ಇದು ನಮ್ಮ ತಲೆಮಾರಿನಲ್ಲಿ ವಿನ್ಯಾಸಗೊಂಡಿರುವ ಭೂಮಿಯಿಂದ ಆಕಾಶಕ್ಕೆ ಚಿಮ್ಮುವ ವಿಶ್ವದ ಅತ್ಯಂತ ಅಪಾಯಕಾರಿ ದೂರಗಾಮಿ ಕ್ಷಿಪಣಿ ನಿರೋಧಕ ವ್ಯವಸ್ಥೆ. ಅಮೆರಿಕ ಸಿದ್ಧಪಡಿಸಿರುವ ಥಾಡ್ (Terminal High Altitude Area Defence system– THAAD) ಕ್ಷಿಣಣಿ ನಿರೋಧಕ ವ್ಯವಸ್ಥೆಗಿಂತ ಸಾಕಷ್ಟು ಸುಧಾರಿತ ತಂತ್ರಜ್ಞಾನ ಒಳಗೊಂಡಿದೆ.

ಎಸ್‌–400 ಟ್ರಯಂಫ್ (
ಎಸ್‌–400 ಟ್ರಯಂಫ್ (

3) ‘ಎಸ್‌–400’ ವೈಶಿಷ್ಟ್ಯವೇನು?

ಎಸ್‌–400 ವ್ಯವಸ್ಥೆಯನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸುಲಭವಾಗಿ ಸ್ಥಳಾಂತರಿಸಬಹುದು. ಈ ಕ್ಷಿಪಣಿ ನಿರೋಧಕ ವ್ಯವಸ್ಥೆಯಲ್ಲಿ ಬಹುಮುಖಿ ರಾಡಾರ್‌ಗಳು, ಅಪಾಯಗಳನ್ನು ಸ್ವತಂತ್ರವಾಗಿ ಗುರುತಿಸುವ ಮತ್ತು ಗುರಿ ನಿರ್ಧರಿಸುವ ವ್ಯವಸ್ಥೆಗಳು, ವಿಮಾನ ನಿರೋಧಕ ಕ್ಷಿಪಣಿ ವ್ಯವಸ್ಥೆಗಳು, ಗುರಿಯನ್ನು ನಿಖರವಾಗಿ ನಿರ್ಧರಿಸಿ ಕ್ಷಿಪಣಿ ಹಾರಿಸುವ ವ್ಯವಸ್ಥೆ ಮತ್ತು ನಿಯಂತ್ರಣ ವ್ಯವಸ್ಥೆ ಇದೆ. (ಒಂದೇ ಉದ್ದೇಶಕ್ಕೆ ಒಂದಕ್ಕಿಂತ ಹೆಚ್ಚು ಉಪಕರಣ ಮತ್ತು ತಂತ್ರಜ್ಞಾನ ಬಳಸುವ ಪ್ರಕ್ರಿಯೆಯನ್ನು ಸೂಚಿಸಲು ‘ವ್ಯವಸ್ಥೆ’ (ಸಿಸ್ಟಂ) ಪದ ಬಳಸಲಾಗಿದೆ).

4) ಇದು ನಿಜಕ್ಕೂ ಪರಿಣಾಮಕಾರಿಯೇ?

ಯಾವುದೇ ಸ್ಥಳಕ್ಕೆ ‘ಎಸ್‌–400’ ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ಕೇವಲ ಐದು ನಿಮಿಷಗಳಲ್ಲಿ ನಿಯೋಜಿಸಬಹುದು. ಕ್ಷಿಪ್ರ ಸ್ಥಳಾಂತರ ಸಾಮರ್ಥ್ಯ ಇದರ ದೊಡ್ಡಶಕ್ತಿ. ದೇಶದತ್ತ ಹಾರಿಬರುತ್ತಿರುವ ಖಂಡಾಂತರ ಕ್ಷಿಪಣಿಯತ್ತ ಏಕಕಾಲಕ್ಕೆ ಮೂರು ನಿರೋಧಕ ಕ್ಷಿಪಣಿಗಳನ್ನು ಹಾರಿಬಿಡುವ ಮೂಲಕ ಬಹುಪದರದ ರಕ್ಷಣೆಯನ್ನು ಒದಗಿಸಬಲ್ಲದು. ನೆಲದಿಂದ 30 ಕಿ.ಮೀ. ಎತ್ತರದಲ್ಲಿರುವ ವಿಮಾನಗಳು, ಮಾವನ ರಹಿತ ಹಾರುವ ಯಂತ್ರಗಳು, ಖಂಡಾಂತರ ಮತ್ತು ಕ್ರೂಸ್‌ ಕ್ಷಿಪಣಿಗಳನ್ನು ಇದು ನಿರೋಧಿಸಬಲ್ಲದು. ಅಮೆರಿಕ ನಿರ್ಮಿತ ಸೂಪರ್‌ಫ್ಲೈಟ್ ಎನಿಸಿದ ‘ಎಫ್‌–35’ ಸೇರಿದಂತೆ ವಾಯುಮಾರ್ಗದಲ್ಲಿರುವ 100 ಗುರಿಗಳನ್ನು ಏಕಕಾಲಕ್ಕೆ ಹಿಂಬಾಲಿಸುವ, 6 ಗುರಿಗಳನ್ನು ಏಕಕಾಲಕ್ಕೆ ನಿರೋಧಿಸುವ ಸಾಮರ್ಥ್ಯ ‘ಎಸ್‌–400’ಕ್ಕೆ ಇದೆ.

5) ಪ್ರಸ್ತುತ ಎಲ್ಲೆಲ್ಲಿ ಕಾರ್ಯಾಚರಣೆಯಲ್ಲಿದೆ?

ರಷ್ಯಾ ಮಿಲಿಟರಿಯಲ್ಲಿ ‘ಎಸ್–400 ಟ್ರಯಂಫ್’ 2007ರಿಂದ ಕಾರ್ಯಾಚರಣೆಯಲ್ಲಿದೆ. ಸಿರಿಯಾದಲ್ಲಿರುವ ರಷ್ಯಾ ಮತ್ತು ಸಿರಿಯಾ ದೇಶಗಳ ನೌಕಾನೆಲೆ ಮತ್ತು ವಾಯುನೆಲೆಗಳ ಭದ್ರತೆಗಾಗಿ 2015ರಿಂದ ಎಸ್‌–400 ಟ್ರಯಂಫ್ ವ್ಯವಸ್ಥೆಯನ್ನು ಸಿರಿಯಾದಲ್ಲಿ ನೆಲೆಗೊಳಿಸಲಾಗಿದೆ. ಉಕ್ರೇನ್ ಗಡಿಯ ಕ್ರೀಮಿಯನ್ ಪರ್ಯಾಯ ದ್ವೀಪದಲ್ಲಿಯೂ ’ಎಸ್‌–400’ ನೆಲೆಗೊಂಡಿದೆ.

6) ಭಾರತಕ್ಕೆ ಇದು ಏಕೆ ಬೇಕು?

ಖರೀದಿ ಒಪ್ಪಂದಕ್ಕೆ ಭಾರತ ಮನಸ್ಸು ಮಾಡಲು ಇರುವ ಮುಖ್ಯ ಕಾರಣ ಪಾಕಿಸ್ತಾನ ಮತ್ತು ಚೀನಾಗಳಿಂದ ಇರುವ ಆತಂಕ. ಈ ಎರಡೂ ದೇಶಗಳು ಮುಂದೆ ಎಂದಾದರೂ ಕೈಕೈ ಮಿಲಾಯಿಸಿ ಭಾರತದ ಮೇಲೆ ಮುಗಿಬಿದ್ದು ಕ್ಷಿಪಣಿ ದಾಳಿ ನಡೆಸಿದರೆ ಅದನ್ನು ಎದುರಿಸಲು ಸನ್ನದ್ಧವಾಗಿರಬೇಕು ಎಂಬುದು ರಕ್ಷಣಾ ಪಂಡಿತರ ಅಭಿಪ್ರಾಯ. ಅದಕ್ಕಾಗಿ ಎಸ್‌–400 ಮಾದರಿಯಕ್ಷಿಪಣಿ ನಿರೋಧಕ ವ್ಯವಸ್ಥೆ ನಮ್ಮಲ್ಲಿ ಇರಬೇಕು ಎಂದು ಹಲವು ಚಿಂತಕರು ಅಭಿಪ್ರಾಯಪಟ್ಟಿದ್ದರು.

ಆರು ‘ಎಸ್‌–400’ ಘಟಕಗಳ ಖರೀದಿಗಾಗಿ ಚೀನಾ 2015ರಲ್ಲಿಯೇ ರಷ್ಯಾ ಜೊತೆಗೆ ಒಪ್ಪಂದ ಮಾಡಿಕೊಂಡಿತ್ತು. ಕಳೆದ ಜನವರಿಯಲ್ಲಿ ಪೂರೈಕೆ ಆರಂಭವಾಗಿತ್ತು.ದಕ್ಷಿಣ ಏಷ್ಯಾದಲ್ಲಿ ಚೀನಾದ ಈ ನಡೆ ಮಹತ್ವವಾದುದು ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಈ ಕ್ಷಿಪಣಿ ನಿರೋಧಕ ವ್ಯವಸ್ಥೆ ಸೀಮಿತ ಅಂತರದಲ್ಲಿ ಮಾತ್ರವೇ ಕಾರ್ಯನಿರ್ವಹಿಸುವ ಕಾರಣ ಭಾರತ ಈ ಮೊದಲು ‘ಎಸ್‌–400’ ಖರೀದಿಗೆ ಅಂಥ ಒಲವು ತೋರಿರಲಿಲ್ಲ. ಆದರೆ ಏಕಕಾಲಕ್ಕೆ ಎರಡು ಯುದ್ಧಭೂಮಿ ಎದುರಿಸಬೇಕಾದ ಆತಂಕ ಹೆಚ್ಚಾದಂತೆ ‘ಎಸ್‌–400’ ಕಡೆಗೆ ಭಾರತದ ಒಲವು ಹೆಚ್ಚಾಯಿತು. ಅಕ್ಟೋಬರ್ 2015ರಲ್ಲಿ ‘ಎಸ್‌–400’ ವ್ಯವಸ್ಥೆಯ 12 ಘಟಕಗಳನ್ನು ಖರೀದಿಸಲು ರಕ್ಷಣಾ ಸ್ವಾಧೀನ ಮಂಡಳಿ (ಡಿಫೆನ್ಸ್ ಅಕ್ವಿಸಿಷನ್ ಕೌನ್ಸಿಲ್) ಆಲೋಚಿಸಿತ್ತು. ಆದರೆ ನಂತರದ ದಿನಗಳಲ್ಲಿ ಭಾರತದ ಅಗತ್ಯಗಳನ್ನು ಪೂರೈಸಲು ಐದು ಘಟಕಗಳು ಸಾಕು ಎಂದು ಕೆಲವರು ವಾದಿಸಿದ್ದರು. ಈಗ ಐದು ಘಟಕಗಳ ಖರೀದಿಗೆ ಒಪ್ಪಂದ ಆಗಿದೆ ಎಂದು ಹೇಳಲಾಗುತ್ತಿದೆ.

7) ಭಾರತ–ರಷ್ಯಾ ನಡುವಿನ ವ್ಯವಹಾರದಲ್ಲಿ ಅಮೆರಿಕ ತಲೆಹಾಕಿದ್ದೇಕೆ?

ರಷ್ಯಾ, ಇರಾನ್‌ ಮತ್ತು ಉತ್ತರ ಕೊರಿಯಾ ದೇಶಗಳನ್ನೇ ಗುರಿಯಾಸಿಕೊಂಡು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆಗಸ್ಟ್‌ 2017ರಲ್ಲಿ ನಿರ್ಬಂಧಗಳನ್ನು ಹೇರುವ ಮೂಲಕ ಅಮೆರಿಕದ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುವ ಮಸೂದೆಯೊಂದಕ್ಕೆ ಸಹಿ ಹಾಕಿದರು.ರಷ್ಯಾ ಉಕ್ರೇನ್‌ ಮೇಲೆ ಅತಿಕ್ರಮಣ ಮಾಡಿದ್ದಕ್ಕೆ ಹಾಗೂ 2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆ ವೇಳೆ ರಷ್ಯಾ ಹಸ್ತಕ್ಷೇಪ ಮಾಡಿದ್ದಕ್ಕೆ ಪ್ರತಿಯಾಗಿ ಅದನ್ನು ಶಿಕ್ಷಿಸಲು ಅಮೆರಿಕ ಈ ಕಾಯ್ದೆಯನ್ನು ಜಾರಿಗೆ ತಂದಿತು. ಈ ಕಾಯ್ದೆಯನ್ವಯ ರಷ್ಯಾದ ತೈಲ, ಇಂಧನ, ರಕ್ಷಣಾ ಉದ್ಯಮ ಮತ್ತು ಹಣಕಾಸು ಸಂಸ್ಥೆಗಳ ಜೊತೆಗೆ ವಹಿವಾಟು ನಡೆಸುದ ದೇಶಗಳ ಮೇಲೆ ಅಮೆರಿಕ ವಾಣಿಜ್ಯ ನಿರ್ಬಂಧಗಳನ್ನು ಹೇರುತ್ತದೆ.ಕಾಟ್ಸಾ ಎನ್ನುವ (CAATSA– Countering America’s Adversaries Through Sanctions) ಈ ಮಸೂದೆಯನ್ನು ಟ್ರಂಪ್ ಭಾರತದ ವಿರುದ್ಧ ಪ್ರಯೋಗಿಸಬಹುದು ಎಂಬ ಆತಂಕ ವ್ಯಕ್ತವಾಗಿತ್ತು. ರಕ್ಷಣಾ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಅಭಿವೃದ್ಧಿಶೀಲ ರಾಷ್ಟ್ರಗಳು ರಷ್ಯಾದ ಜತೆಗೆ ಶಸ್ತ್ರಾಸ್ತ್ರ ಖರೀದಿ ಒಪ್ಪಂದ ಮಾಡಿಕೊಂಡರೆ ಅಮೆರಿಕದ ನಿರ್ಬಂಧಗಳಿಗೆ ಗುರಿಯಾಗಬೇಕಾಗುತ್ತದೆ. ರಷ್ಯಾದ ಎಲ್ಲ ಪ್ರಮುಖ 39 ರಕ್ಷಣಾ ಸಾಮಗ್ರಿ ತಯಾರಿಕ ಕಂಪನಿಗಳು ಈ ಪಟ್ಟಿಯಲ್ಲಿದ್ದವು.

ಚಿತ್ರ:
ಚಿತ್ರ:

8) ಭಾರತ ‘ಕಾಟ್ಸಾ’ ಸಂಕೋಲೆಯಿಂದ ಹೇಗೆ ತಪ್ಪಿಸಿಕೊಂಡಿತು?

ಏಷ್ಯಾ ಪೆಸಿಫಿಕ್ ವಲಯದಲ್ಲಿ ಅಮೆರಿಕದ ಪಾಲಿಗೆ ಭಾರತ ಪ್ರಮುಖ ಮಿತ್ರರಾಷ್ಟ್ರ.ಈ ಕಾಯ್ದೆಯ ಅನುಷ್ಠಾನಕ್ಕೆ ತಾನು ಬದ್ಧ ಎಂದು ಅಮೆರಿಕ ಘೋಸಿಷಿದ್ದರೆ ಭಾರತ–ರಷ್ಯಾ ರಕ್ಷಣಾ ಒಪ್ಪಂದವೇ ಸಾಧ್ಯವಾಗುತ್ತಿರಲಿಲ್ಲ. ಜೊತೆಗೆ ಅಮೆರಿಕ– ಭಾರತದೊಂದಿಗೆ ಮಾಡಿಕೊಂಡ ಒಪ್ಪಂದಗಳ ಮೇಲೂ ಪರಿಣಾಮ ಬೀರುತ್ತಿತ್ತು. ಇತ್ತೀಚೆಗಷ್ಟೇ ಅಮೆರಿಕ ತನ್ನ ಇಂಡೋ-ಪೆಸಿಫಿಕ್‌ ಕಾರ್ಯತಂತ್ರದಲ್ಲಿ ಭಾರತವನ್ನು ಪಾಲುದಾರ ದೇಶವೆಂದು ಸಾರಿತ್ತು. ಇದರಿಂದ ಅದಕ್ಕೂ ಚ್ಯುತಿ ಬರುತ್ತಿತ್ತು.ಅದಕ್ಕಾಗಿಯೇ ಅಮೆರಿಕ ರಕ್ಷಣಾ ಕಾರ್ಯದರ್ಶಿ ಜೇಮ್ಸ್‌ ಎನ್‌. ಮ್ಯಾಟೀಸ್‌,ಸೆನೆಟ್‌ ಸದಸ್ಯರಿಗೆ ಪತ್ರ ಬರೆದು ‘ಕಾಟ್ಸಾ’ ಕಾಯ್ದೆಯಿಂದ ಭಾರತದಂತಹ ಕೆಲವು ದೇಶಗಳಿಗೆ ವಿನಾಯಿತಿ ನೀಡಬೇಕು ಎಂದು ಹೇಳಿದ್ದರು.

ಇದೇ ಜುಲೈನಲ್ಲಿ ರಷ್ಯಾದಿಂದ ಶಸ್ತ್ರಾಸ್ತ್ರಗಳನ್ನು ಖರೀದಿಸುವುದಕ್ಕೆ ಭಾರತಕ್ಕಿದ್ದ ನಿರ್ಬಂಧಗಳನ್ನು ತೆಗೆದುಹಾಕಲು ಅಮೆರಿಕ ಸೆನೆಟ್‌ ಒಪ್ಪಿಗೆ ನೀಡಿತ್ತು. ಏಷ್ಯಾ ಪೆಸಿಫಿಕ್ ವಲಯದಲ್ಲಿ ಅಮೆರಿಕ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳಲು ಭಾರತದ ಅನಿವಾರ್ಯತೆ ಇರುವುದರಿಂದಲೇ ‘ಎಸ್‌–400’ ಖರೀದಿ ವ್ಯವಹಾರವನ್ನು ಅಮೆರಿಕ ಪ್ರಬಲವಾಗಿ ವಿರೋಧಿಸಲಿಲ್ಲ. ಅಲ್ಲದೆ, ಅಮೆರಿಕ ಪೆಸಿಫಿಕ್‌ ಕಮಾಂಡ್‌ನ ಮುಖ್ಯಸ್ಥ ಅಡ್ಮಿರಲ್ ಹ್ಯಾರಿ ಹ್ಯಾರಿಸ್, ಭಾರತದೊಂದಿಗೆ ಶಸ್ತ್ರಾಸ್ತ್ರ ಒಪ್ಪಂದಕ್ಕೆ ಸಿದ್ಧ ಎಂದಿದ್ದರು.ಸಿ–17 ಗ್ಲೋಬಲ್‌ ಮಾಸ್ಟರ್‌ ಮತ್ತು ಸಿ–130ಜೆ ಸರಕು ವಿಮಾನ, ಪಿ–8(ಐ) ನೌಕಾಪಡೆಯ ಯುದ್ಧ ವಿಮಾನ, ಎಂ777 ಫಿರಂಗಿಗಳ ಖರೀದಿ ಸೇರಿಕಳೆದ ದಶಕದಿಂದೀಚೆಗೆ ಭಾರತ ಹಾಗೂ ಅಮೆರಿಕ ನಡುವಿನ ರಕ್ಷಣಾ ವ್ಯಾಪಾರದ ವಹಿವಾಟಿನ ಗಾತ್ರ ₹97 ಸಾವಿರ ಕೋಟಿ ತಲುಪಿದೆ. ಮುಂಬರುವ ವರ್ಷಗಳಲ್ಲಿ ಮತ್ತಷ್ಟು ಯುದ್ಧ ವಿಮಾನಗಳು ಮತ್ತು ಇತರ ಸೇನಾ ಸಂಬಂಧಿ ವಿಮಾನಗಳ ಭಾರತ ಖರೀದಿ ಒಪ್ಪಂದವನ್ನು ಅಮೆರಿಕ ಒಪ್ಪುವ ಸಾಧ್ಯತೆ ಇದೆ.

9) ಈಗ ಹೇಗಿದೆ ಭಾರತ ಮತ್ತು ರಷ್ಯಾ ನಡುವಿನ ರಕ್ಷಣಾ ಸಂಬಂಧ?

ಕಾಟ್ಸಾ ಮಸೂದೆಯನ್ನು ಅಮೆರಿಕ ಬಿಗಿಯಾಗಿ ಜಾರಿ ಮಾಡಿದ್ದರೆ ‘ಎಸ್–400 ಟ್ರಯಂಫ್’ ಮಾತ್ರವೇ ಅಲ್ಲ, ರಷ್ಯಾದೊಂದಿಗೆ ಈ ಹಿಂದೆ ಒಪ್ಪಂದ ಮಾಡಿಕೊಂಡಿದ್ದನಾಲ್ಕು ಯುದ್ಧನೌಕೆ ಖರೀದಿ,ಕೆಎ–226ಟಿ ಹೆಲಿಕಾಪ್ಟರ್ ಜಂಟಿ ಉತ್ಪಾದನೆಗೆ ಭಾರತದಲ್ಲಿ ಕಾರ್ಖಾನೆ ಸ್ಥಾಪನೆ, ಇಂಡೊ–ರಷ್ಯಾ ವಿಮಾನಯಾನ ಸಂಸ್ಥೆ ಸ್ಥಾಪನೆ ಮತ್ತು ಬ್ರಹ್ಮೋಸ್‌ ಏರೋಸ್ಪೇಸ್‌... ಹೀಗೆ ಸಾಕಷ್ಟು ವ್ಯವಹಾರಗಳಿಗೆ ತೊಡಕಾಗುತ್ತಿತ್ತು.

ಜಲಾಂತರ್ಗಾಮಿ ಐಎನ್‌ಎಸ್ ಚಕ್ರ,ಬ್ರಹ್ಮೋಸ್ ಸುಧಾರಿತ ಕ್ಷಿಪಣಿ, ಮಿಗ್‌ ಮತ್ತು ಸುಖೋಯ್‌ ಯುದ್ಧ ವಿಮಾನಗಳು, ಐಎಲ್‌ ಸರಕುಸಾಗಣೆ ವಿಮಾನ, ಟಿ–72 ಮತ್ತು ಟಿ–90 ಯುದ್ಧ ಟ್ಯಾಂಕರ್‌ಗಳು ಹಾಗೂವಿಕ್ರಮಾದಿತ್ಯ ಯುದ್ಧನೌಕೆ ಸೇರಿದಂತೆ ಭಾರತದ ರಕ್ಷಣಾ ಪಡೆಗಳು ಬಳಸುತ್ತಿರುವ ಹಲವು ಯುದ್ಧೋಪಕರಣಗಳು ರಷ್ಯಾದಲ್ಲಿ ನಿರ್ಮಾಣವಾದವೇ ಆಗಿವೆ.

ಇತ್ತೀಚೆಗೆ ಭಾರತ ಮತ್ತು ರಷ್ಯಾ ನಡುವಿನ ಸಂಬಂಧ ಬಹಳ ಚೆನ್ನಾಗಿಯೇ ಇದೆ.ಎರಡೂ ದೇಶಗಳ ವ್ಯಾಪಾರ–ವಹಿವಾಟು ₹74 ಸಾವಿರ ಕೋಟಿಯಷ್ಟಿದೆ. ಆದರೆ, ಅಮೆರಿಕ ಮತ್ತು ಭಾರತದ ವ್ಯವಹಾರ ಇದರ ಹತ್ತು ಪಟ್ಟು ಹೆಚ್ಚಿದೆ. ನಮ್ಮ ದೇಶದಲ್ಲಿ ರಷ್ಯಾದ ರಕ್ಷಣಾ ಸಾಮಗ್ರಿಗಳು ಸಾಕಷ್ಟಿವೆ. ಹೀಗಾಗಿ ಅವುಗಳ ಬಿಡಿಭಾಗಗಳು ಬೇಕೆಂದರೆ ರಷ್ಯಾದೊಂದಿಗೆ ಉತ್ತಮ ಬಾಂಧ್ಯವ ಹೊಂದುವುದು ಭಾರತಕ್ಕೆ ಅಗತ್ಯವಿದೆ.ಅಲ್ಲದೆ, ಅಮೆರಿಕ ಇಂದಿಗೂ ನಮಗೆ ಕೆಲ ತಂತ್ರಜ್ಞಾನ ನೀಡಲು ಹಿಂದೇಟು ಹಾಕುತ್ತಿದೆ. ಪರಮಾಣು ಜಲಾಂತರ್ಗಾಮಿ ತಂತ್ರಜ್ಞಾನ ಅದರಲ್ಲಿ ಒಂದು.ಇಂಥ ಹಲವು ತಂತ್ರಜ್ಞಾನಗಳನ್ನು ಭಾರತದೊಡನೆ ಹಂಚಿಕೊಳ್ಳಲು ರಷ್ಯಾ ಸಮ್ಮತಿಸಿದೆ. ನಿಗೂಢ ಅಮೆರಿಕ ಆಡಳಿತ ಮತ್ತು ಯಾವುದಕ್ಕೂ ಜಗ್ಗದ ಚೀನಾದ ನಡುವೆ ಸಮನ್ವಯ ಕಾಯ್ದುಕೊಳ್ಳಲು ಭಾರತ ಪ್ರಯತ್ನಿಸುತ್ತಿದೆ.

10) ಭದ್ರತೆಗೆ ಸಂಬಂಧಿಸಿದ ಮತ್ತೇನಾದರೂ ವಿಷಯವಿದೆಯೇ?

ಪುಟಿನ್ ಭಾರತ ಭೇಟಿ ವೇಳೆ ಭಾರತವು ರಷ್ಯಾದಿಂದ ₹20 ಸಾವಿರ ಕೋಟಿ ಮೊತ್ತದ ದಾಳಿ ಯುದ್ಧನೌಕೆಗಳನ್ನು ಖರೀದಿಸುವ ಒಪ್ಪಂದಕ್ಕೂ ಸಹಿಹಾಕುವ ಸಾಧ್ಯತೆ ಇದೆ. ಈ ಪೈಕಿ ಎರಡು ಯುದ್ಧನೌಕೆಗಳು ಉಕ್ರೇನ್ ಪೂರೈಸಲಿರುವ ಗ್ಯಾಸ್‌ ಟರ್ಬೈನ್‌ ಎಂಜಿನ್ ಹೊಂದಿರಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT