ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಯಿಬಾಬಾ ಬಿಡುಗಡೆಗೆ ಆದೇಶ

ನಕ್ಸಲರ ನಂಟು: ಜೀವಾವಧಿ ಶಿಕ್ಷೆಯಿಂದ ಖುಲಾಸೆಗೊಳಿಸಿದ ಹೈಕೋರ್ಟ್‌
Last Updated 14 ಅಕ್ಟೋಬರ್ 2022, 17:14 IST
ಅಕ್ಷರ ಗಾತ್ರ

ಮುಂಬೈ: ದೆಹಲಿ ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕ, ಗಾಲಿಕುರ್ಚಿಯಲ್ಲಿರುವ ಜಿ.ಎನ್‌. ಸಾಯಿಬಾಬಾ ಅವರನ್ನು ಖುಲಾಸೆಗೊಳಿಸಲಾಗಿದ್ದು ತಕ್ಷಣ ಬಿಡುಗಡೆ ಮಾಡುವಂತೆ ಬಾಂಬೆ ಹೈಕೋರ್ಟ್‌ನ ನಾಗಪುರ ಪೀಠವು ಶುಕ್ರವಾರ ಆದೇಶಿಸಿದೆ. ನಕ್ಸಲರ ಜತೆಗೆ ನಂಟು ಇದೆ ಎಂಬ ಕಾರಣಕ್ಕೆ ಎಂಟು ವರ್ಷಗಳ ಹಿಂದೆ ಅವರನ್ನು ಬಂಧಿಸಲಾಗಿತ್ತು.

ದೆಹಲಿ ವಿಶ್ವವಿದ್ಯಾಲಯದ ರಾಮ್‌ ಲಾಲ್‌ ಆನಂದ್‌ ಕಾಲೇಜ್‌ನಲ್ಲಿ ಇಂಗ್ಲಿಷ್‌ ಪ್ರಾಧ್ಯಾಪಕರಾಗಿದ್ದ ಸಾಯಿಬಾಬಾ (55) ಅವರು ಈಗ ನಾಗಪುರ ಕೇಂದ್ರ ಕಾರಾಗೃಹದಲ್ಲಿ ಇದ್ದಾರೆ. ಭಾರತೀಯ ದಂಡ ಸಂಹಿತೆ ಮತ್ತು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ ಅಡಿಯಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.

ಈ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಇತರ ಐವರನ್ನೂ ಖುಲಾಸೆ ಮಾಡಲಾಗಿದೆ.

ಮಾನವ ಹಕ್ಕುಗಳು ಮತ್ತು ನಾಗರಿಕ ಹಕ್ಕುಗಳ ಹೋರಾಟಗಾರ ಸಾಯಿಬಾಬಾ ಅವರನ್ನು 2014ರ ಮೇ 9ರಂದು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದರು.

ಸಾಯಿಬಾಬಾ ಮತ್ತು ಪ್ರಕರಣದಲ್ಲಿ ಬಂಧನಕ್ಕೆ ಒಳಗಾದ ಮಹೇಶ್‌ ಟಿರ್ಕಿ, ಪಾಂಡು ನರೋಟೆ, ಹೇಮ್‌ ಮಿಶ್ರಾ, ಪ್ರಶಾಂತ್‌ ರಾಹಿ ಮತ್ತು ವಿಜಯ ಟಿರ್ಕಿ ಅವರಿಗೆ 2017ರ ಮಾರ್ಚ್‌ 7ರಂದು ಗಡ್‌ಚಿರೋಲಿ ಜಿಲ್ಲಾ ಸೆಷನ್ಸ್ ನ್ಯಾಯಾಲಯವು ಶಿಕ್ಷೆ ವಿಧಿಸಿತ್ತು. ನರೋಟೆ ಅವರು ಕೆಲ ಸಮಯದ ಹಿಂದೆ ಸೆರೆಮನೆಯಲ್ಲಿಯೇ ಮೃತಪಟ್ಟಿದ್ದಾರೆ.

ಪ್ರಕರಣದ ತನಿಖೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯೂ ಭಾಗಿಯಾಗಿತ್ತು.

ನಿಷೇಧಿತ ಸಂಘಟನೆ ಕಮ್ಯುನಿಸ್ಟ್‌ ಪಾರ್ಟಿ ಆಫ್‌ ಇಂಡಿಯಾದ (ಮಾವೋವಾದಿ) ರೆವಲ್ಯೂಷನರಿ ಡೆಮಾಕ್ರಟಿಕ್‌ ಫ್ರಂಟ್‌ನ (ಆರ್‌ಡಿಎಫ್‌) ಕಾರ್ಯದರ್ಶಿಯಾಗಿ ಸಾಯಿಬಾಬಾ ಅವರು ಕೆಲಸ ಮಾಡಿದ್ದಾರೆ ಎಂದು ಆರೋಪಪಟ್ಟಿಯಲ್ಲಿ
ಹೇಳಲಾಗಿತ್ತು.

ರಾಮ್‌ ಲಾಲ್‌ ಆನಂದ್‌ ಕಾಲೇಜಿನ ಇಂಗ್ಲಿಷ್‌ ಪ್ರಾಧ್ಯಾಪಕ ಹುದ್ದೆಯಿಂದ ಅವರನ್ನು 2021ರ ಏಪ್ರಿಲ್‌ನಲ್ಲಿ ವಜಾ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT