ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂದೇಶ್‌ಖಾಲಿ ಹಿಂಸಾಚಾರ | ಬಿಜೆಪಿ ಅಧ್ಯಕ್ಷ ಸುಕಾಂತ ಮಜುಂದಾರ್‌ ಪೊಲೀಸ್ ವಶಕ್ಕೆ

Published : 14 ಫೆಬ್ರುವರಿ 2024, 2:00 IST
Last Updated : 14 ಫೆಬ್ರುವರಿ 2024, 2:00 IST
ಫಾಲೋ ಮಾಡಿ
Comments

ಕೋಲ್ಕತ್ತ: ಪಶ್ಚಿಮ ಬಂಗಾಳದ ಸಂದೇಶ್‌ಖಾಲಿ ಪ್ರದೇಶದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸುಕಾಂತ ಮಜುಂದಾರ್‌ ಸೇರಿದಂತೆ ಪ್ರತಿಭಟನಾನಿರತ ಪಕ್ಷದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧನಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಸುಕಾಂತ, ‘ಪಶ್ಚಿಮ ಬಂಗಾಳದ ಮಹಿಳೆಯರ ಘನತೆ ಕಾಪಾಡಲು ಲಾಠಿ ಏಟು ತಿನ್ನಲು ಹಾಗೂ ಟಿಎಂಸಿಯವರ ದಾಳಿಯನ್ನು ಎದುರಿಸಲು ನಾವು ಸಿದ್ಧರಿದ್ದೇವೆ. ನಾವು ಶಾಂತಿಯುತವಾಗಿ ಹೋರಾಟ ನಡೆಸುತ್ತೇವೆ. ಕಾರ್ಯಕರ್ತರನ್ನು ಬಿಡುಗಡೆ ಮಾಡುವಂತೆ ಪೊಲೀಸರಿಗೆ ಮನವಿ ಮಾಡುತ್ತೇನೆ’ ಎಂದು ಹೇಳಿದ್ದಾರೆ.

ಸಂದೇಶ್‌ಖಾಲಿ ಪ್ರದೇಶದಲ್ಲಿ ನಡೆಯುತ್ತಿರುವ ಘಟನೆಗಳ ಕುರಿತು ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗವು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದೆ. ಈ ಪ್ರದೇಶದಲ್ಲಿನ ಪರಿಸ್ಥಿತಿ ಸುಧಾರಣೆಗೆ ಕೈಗೊಂಡಿರುವ ಕ್ರಮಗಳ ಕುರಿತು ಮೂರು ದಿನಗಳ ಒಳಗೆ ವರದಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದೆ.

ಟಿಎಂಸಿ ಮುಖಂಡ ಶಹಜಹಾನ್ ಶೇಖ್‌ ಅವರ ಬೆಂಬಲಿಗರು ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದಾರೆ ಎಂಬ ಕಾರಣಕ್ಕಾಗಿ ಸಂದೇಶ್‌ಖಾಲಿ ಕೆಲ ದಿನಗಳಿಂದ ಸುದ್ದಿಯಲ್ಲಿದೆ. ಟಿಎಂಸಿ ಮುಖಂಡನ ಬೆಂಬಲಿಗರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮಹಿಳೆಯರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ, ಪಶ್ಚಿಮ ಬಂಗಾಳ ಮುಖ್ಯ ಕಾರ್ಯದರ್ಶಿ, ಪೊಲೀಸ್‌ ಮಹಾ ನಿರ್ದೇಶಕರು, ಇನ್‌ಸ್ಪೆಕ್ಟರ್‌ ಜನರಲ್‌ ಆಫ್‌ ಪೊಲೀಸ್‌ ಮತ್ತು ಉತ್ತರ 24 ಪರಗಣ ಜಿಲ್ಲೆಯ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಅವರಿಗೆ ಆಯೋಗ ಪತ್ರ ಬರೆದಿದೆ. ಘಟನೆ, ಸಂತ್ರಸ್ತರು, ಆರೋಪಿ, ತೆಗೆದುಕೊಂಡಿರುವ ಕ್ರಮ ಮತ್ತು ಸಂತ್ರಸ್ತರಿಗೆ ನೀಡಲಾಗಿರುವ ಪರಿಹಾರ ಕುರಿತ ವಿವರಗಳನ್ನು ವರದಿಯಲ್ಲಿ ನೀಡಬೇಕು ಎಂದೂ ಆಯೋಗವು ಅವರಿಗೆ ಹೇಳಿದೆ.

ಸಂವಿಧಾನದ ವಿಧಿ 338ರಲ್ಲಿ ದತ್ತವಾಗಿರುವ ಅಧಿಕಾರವನ್ನು ಬಳಸಿ ಈ ಘಟನೆ ಕುರಿತು ತನಿಖೆ ನಡೆಸಲು ಆಯೋಗ ನಿರ್ಧರಿಸಿದೆ.

ಶಹಜಹಾನ್‌ ಮತ್ತು ಆತನ ಬೆಂಬಲಿಗರು ತಮ್ಮ ಭೂಮಿಯನ್ನು ಕಬಳಿಸಿದ್ದಾರೆ ಹಾಗೂ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮಹಿಳೆಯರು ಆರೋಪಿಸಿದ್ದಾರೆ. ರಾಜ್ಯದ ರಾಜ್ಯಪಾಲ ಸಿ.ವಿ. ಆನಂದ್ ಬೋಸ್‌ ಅವರು ಸೋಮವಾರ ಸ್ಥಳಕ್ಕೆ ಧಾವಿಸಿ, ಪ್ರತಿಭಟನೆನಿರತ ಮಹಿಳೆಯರಿಗೆ ಸಾಂತ್ವನ ಹೇಳಿದ್ದಾರೆ.

ಶಹಜಹಾನ್‌ಗೆ ಸೇರಿದ ಸ್ವತ್ತುಗಳ ಮೇಲೆ ಜಾರಿ ನಿರ್ದೇಶನಾಲಯವು ಕಳೆದ ತಿಂಗಳು ದಾಳಿ ನಡೆಸಿತ್ತು. ಆಗಿನಿಂದ ಅವರು ತಲೆಮರೆಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT