ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜೀವಾವಧಿ ಶಿಕ್ಷೆ ವ್ಯಾಖ್ಯಾನ: ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್‌ ಒಪ್ಪಿಗೆ

Published 9 ಫೆಬ್ರುವರಿ 2024, 15:49 IST
Last Updated 9 ಫೆಬ್ರುವರಿ 2024, 15:49 IST
ಅಕ್ಷರ ಗಾತ್ರ

ನವದೆಹಲಿ: ಜೀವಾವಧಿ ಶಿಕ್ಷೆಯು ಜೀವನಪರ್ಯಂತ ಶಿಕ್ಷೆಯೋ ಅಥವಾ ಅಪರಾಧ ದಂಡ ಪ್ರಕ್ರಿಯೆ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್ 432ರಲ್ಲಿ ದತ್ತವಾಗಿರುವ ಅಧಿಕಾರವನ್ನು ಬಳಸಿ ಶಿಕ್ಷೆಯ ಅವಧಿಯನ್ನು ಕಡಿತ ಅಥವಾ ಅವಧಿ ಪೂರ್ವ ಬಿಡುಗಡೆ ಮಾಡಬಹುದೇ ಎಂಬ ಬಗ್ಗೆ ಸ್ಪಷ್ಟನೆ ಕೋರಿರುವ ಅರ್ಜಿ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ ಶುಕ್ರವಾರ ಒಪ್ಪಿಗೆ ನೀಡಿದೆ.

ಸೆಕ್ಷನ್ 432ರಡಿಯಲ್ಲಿ ಶಿಕ್ಷೆಯನ್ನು ರದ್ದು ಮಾಡಬಹುದು ಅಥವಾ ಅವಧಿ ಪೂರ್ವ ಬಿಡುಗಡೆ ಮಾಡಬಹುದು.

ಚಂದ್ರಕಾಂತ್ ಝಾ ಅವರು ಸಲ್ಲಿಸಿರುವ ಅರ್ಜಿಗೆ ಪ್ರತಿಕ್ರಿಯೆ ನೀಡುವಂತೆ ದೆಹಲಿ ಸರ್ಕಾರಕ್ಕೆ ಋಷಿಕೇಶ್‌ ರಾಯ್ ಮತ್ತು ಪ್ರಶಾಂತ್‌ ಕುಮಾರ್‌ ಮಿಶ್ರಾ ಅವರನ್ನು ಒಳಗೊಂಡ ನ್ಯಾಯಪೀಠ ನೋಟಿಸ್‌ ರವಾನಿಸಿದೆ.

ಮೂರು ಕೊಲೆ ಪ್ರಕರಣದಲ್ಲಿ ಝಾ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

‘ದೆಹಲಿ ಹೈಕೋರ್ಟ್‌, ವಿಚಾರಣಾ ನ್ಯಾಯಾಲಯವು ನೀಡಿದ್ದ ಮರಣ ದಂಡನೆ ಶಿಕ್ಷೆಯನ್ನು ಕಡಿತಗೊಳಿಸಿ ಜೀವಾವಧಿ ಶಿಕ್ಷೆ ವಿಧಿಸಿದೆ. ಇದರ ಅರ್ಥ ಜೀವನ ಪರ್ಯಂತ ಶಿಕ್ಷೆಯೇ’ ಎಂದು ಅರ್ಜಿಯಲ್ಲಿ ಕೇಳಿದ್ದಾರೆ.

‘ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 302ರಲ್ಲಿ ‘ಮರಣ ದಂಡನೆ ಮತ್ತು ಜೀವಾವಧಿ ಶಿಕ್ಷೆ’ ಎಂಬ ಎರಡು ರೀತಿಯ ಶಿಕ್ಷೆಗಳನ್ನು ಮಾತ್ರ ಉಲ್ಲೇಖಿಸಲಾಗಿದೆ. ಇವುಗಳ ಹೊರತಾಗಿರುವ ಶಿಕ್ಷೆಯನ್ನು ಉಲ್ಲೇಖಿಸಿಲ್ಲ’ ಎಂದು ಹೇಳಿದ್ದಾರೆ.

‘ಜೀವಾವಧಿ ಶಿಕ್ಷೆಯನ್ನು ವ್ಯಕ್ತಿಯ ಜೀವಿತಾವಧಿಯವರೆಗೆ ನೀಡುವ ಶಿಕ್ಷೆ ಎಂದು ಅರ್ಥೈಸಿದಲ್ಲಿ ಅಪರಾಧಿಯ ಮೂಲಭೂತ ಹಕ್ಕನ್ನು ಉಲ್ಲಂಘಿಸಿದಂತಾಗುತ್ತದೆ.  ಕೊಲೆ ಅಪರಾಧಕ್ಕೆ ಈ ಶಿಕ್ಷೆ ನೀಡುವುದು ಅಸಾಂವಿಧಾನಿಕ ಸಹ. ಏಕೆಂದರೆ ತನ್ನನ್ನು ತಾನು ಬದಲಾವಣೆ ಮಾಡಿಕೊಳ್ಳುವ ಅವಕಾಶವನ್ನು ಅಪರಾಧಿಯಿಂದ ಕಸಿದುಕೊಂಡಂತಾಗುತ್ತದೆ ’ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT