ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಾಸಕರು, ಸಂಸದರ ವಿರುದ್ಧದ ಪ್ರಕರಣ: ತ್ವರಿತ ವಿಚಾರಣೆಗೆ ವಿಶೇಷ ಪೀಠ

ಶಾಸಕರು, ಸಂಸದರ ವಿರುದ್ಧ ಕ್ರಿಮಿನಲ್ ಪ್ರಕರಣಗಳು
Published 9 ನವೆಂಬರ್ 2023, 11:28 IST
Last Updated 9 ನವೆಂಬರ್ 2023, 11:28 IST
ಅಕ್ಷರ ಗಾತ್ರ

ನವದೆಹಲಿ: ಶಾಸಕರು ಹಾಗೂ ಸಂಸದರ ವಿರುದ್ಧ ದಾಖಲಾಗಿರುವ ಐದು ಸಾವಿರಕ್ಕೂ ಹೆಚ್ಚಿನ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯು ತ್ವರಿತವಾಗಿ ನಡೆಯುವಂತೆ ನೋಡಿಕೊಳ್ಳಲು ವಿಶೇಷ ಪೀಠ ರಚಿಸಬೇಕು ಎಂದು ಹೈಕೋರ್ಟ್‌ಗಳಿಗೆ ಸುಪ್ರೀಂ ಕೋರ್ಟ್‌ ಗುರುವಾರ ಸೂಚನೆ ನೀಡಿದೆ.

ಇಂತಹ ಪ್ರಕರಣಗಳಲ್ಲಿ ‘ಅಪರೂಪದ ಹಾಗೂ ಬಲವಾದ ಕಾರಣಗಳು ಇಲ್ಲದಿದ್ದರೆ ವಿಶೇಷ ನ್ಯಾಯಾಲಯಗಳು ವಿಚಾರಣೆಯನ್ನು ಮುಂದೂಡಬಾರದು’ ಎಂದು ಕೂಡ ಸುಪ್ರೀಂ ಕೋರ್ಟ್‌ ಸೂಚಿಸಿದೆ.

ಹೈಕೋರ್ಟ್‌ಗಳು, ಜಿಲ್ಲಾ ನ್ಯಾಯಾಧೀಶರು ಹಾಗೂ ಶಾಸಕರು, ಸಂಸದರಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಗೆ ಸ್ಥಾಪಿಸಲಾಗಿರುವ ವಿಶೇಷ ನ್ಯಾಯಾಲಯಗಳಿಗೆ ಹಲವು ಮಾರ್ಗದರ್ಶನಗಳನ್ನು ನೀಡಿರುವ ಸುಪ್ರೀಂ ಕೋರ್ಟ್‌, ಸಂಸದರು ಮತ್ತು ಶಾಸಕರ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳ ವಿಚಾರಣೆಗೆ ಆದ್ಯತೆ ನೀಡಬೇಕು ಎಂದು ಹೇಳಿದೆ.

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರಿದ್ದ ನ್ಯಾಯಪೀಠ ಈ ಸೂಚನೆಗಳನ್ನು ನೀಡಿದೆ. ದೇಶದಾದ್ಯಂತ ಇರುವ ವಿಚಾರಣಾ ನ್ಯಾಯಾಲಯಗಳಿಗೆ ಅನ್ವಯವಾಗುವಂತೆ ಏಕರೂಪಿ ಮಾರ್ಗಸೂಚಿ ಹೊರಡಿಸಲು ಹಲವು ಕಾರಣಗಳಿಂದಾಗಿ ಸಾಧ್ಯವಾಗುತ್ತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ವಿಚಾರಣಾ ನ್ಯಾಯಾಲಯಗಳ ಮೇಲ್ವಿಚಾರಣೆಯ ಹೊಣೆ ಹೈಕೋರ್ಟ್‌
ಗಳಿಗೆ ಇರುವ ಕಾರಣ, ವಿಚಾರಣೆಗಳು ತ್ವರಿತವಾಗಿ ಆಗುವಂತೆ ನೋಡಿಕೊಳ್ಳುವ ಹೊಣೆಯನ್ನು ಸುಪ್ರೀಂ ಕೋರ್ಟ್‌, ಹೈಕೋರ್ಟ್‌ಗಳಿಗೆ ಬಿಟ್ಟಿದೆ. 

ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆ ವಿಧಿಸಬಹುದಾದ ಪ್ರಕರಣಗಳು ಸಂಸದರು ಹಾಗೂ ಶಾಸಕರ ವಿರುದ್ಧ ದಾಖಲಾಗಿದ್ದಲ್ಲಿ ಅಂತಹ ಪ್ರಕರಣಗಳ ವಿಚಾರಣೆಗೆ ಸಂಬಂಧಪಟ್ಟ ನ್ಯಾಯಾಲಯಗಳು ಆದ್ಯತೆ ನೀಡಬೇಕು. ಐದು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ಶಿಕ್ಷೆ ವಿಧಿಸಬಹುದಾದ ಪ್ರಕರಣಗಳು ದಾಖಲಾಗಿದ್ದಲ್ಲಿ, ಅವುಗಳಿಗೆ ಕೂಡ ಆದ್ಯತೆ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.

ಪ್ರಕರಣಗಳ ವಿಚಾರಣೆಗೆ ತಡೆಯಾಜ್ಞೆ ಇದ್ದಲ್ಲಿ, ಅಂತಹ ಪ್ರಕರಣಗಳನ್ನು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯು ವಿಶೇಷ ಪೀಠದ ಎದುರು ತರಬಹುದು. ವಿಶೇಷ ಪೀಠವು ಆ ಪ್ರಕರಣದ ವಿಚಾರಣೆಗೆ ಇರುವ ತಡೆಯಾಜ್ಞೆ ತೆರವು ಮಾಡುವುದು ಸೇರಿದಂತೆ ಯಾವುದೇ ಸೂಕ್ತ ಆದೇಶವನ್ನು ನೀಡಬಹುದು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.

ಹೈಕೋರ್ಟ್‌ಗಳು ತಮ್ಮ ವೆಬ್‌ಸೈಟ್‌ ಮೂಲಕ, ಇಂತಹ ಪ್ರಕರಣಗಳ ಜಿಲ್ಲಾವಾರು ವಿವರ ನೀಡಬೇಕು ಎಂದು ಸೂಚಿಸಲಾಗಿದೆ. 

ರಾಜಕಾರಣಿಗಳ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯನ್ನು ತ್ವರಿತಗೊಳಿಸಬೇಕು ಎಂದು ಕೋರಿ ಅಶ್ವಿನಿ ಉಪಾಧ್ಯಾಯ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿ ಸುಪ್ರೀಂ ಕೋರ್ಟ್‌ ಈ ಸೂಚನೆಗಳನ್ನು ಹೊರಡಿಸಿದೆ. ವಿಚಾರಣೆಗಳನ್ನು ತ್ವರಿತಗೊಳಿಸಬೇಕು ಎಂಬುದಷ್ಟೇ ಅಲ್ಲದೆ, ಕ್ರಿಮಿನಲ್ ಪ್ರಕರಣಗಳಲ್ಲಿ ತಪ್ಪಿತಸ್ಥ ಎಂದು ಕೋರ್ಟ್‌ ಘೋಷಿಸಿದಲ್ಲಿ ಶಾಸಕ ಹಾಗೂ ಸಂಸದರಿಗೆ ಆಜೀವ ನಿಷೇಧ ಹೇರಬೇಕು ಎಂದು ಕೂಡ ಅರ್ಜಿಯಲ್ಲಿ ಕೋರಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT