ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರಿನ 25 ವರ್ಷದ ಮಹಿಳೆಯನ್ನು ಬಂಧ ಮುಕ್ತಗೊಳಿಸಲು ಸುಪ್ರೀಂ ಕೋರ್ಟ್ ಆದೇಶ

ಬೆಂಗಳೂರು ಮೂಲದ ಮಹಿಳೆಯ ಪಾಲಕರಿಗೆ ನಿರ್ದೇಶನ
Published 17 ಜನವರಿ 2024, 21:19 IST
Last Updated 17 ಜನವರಿ 2024, 21:19 IST
ಅಕ್ಷರ ಗಾತ್ರ

ನವದೆಹಲಿ: ಬೆಂಗಳೂರಿನಲ್ಲಿ 25 ವರ್ಷದ ಮಹಿಳೆಯನ್ನು ಆಕೆಯ ಸೋದರ ಸಂಬಂಧಿ ಮನೆಯಲ್ಲಿ ಕೂಡಿ ಹಾಕಿರುವುದು ಕಾನೂನುಬಾಹಿರ ಎಂದು ಹೇಳಿರುವ ಸುಪ್ರೀಂ ಕೋರ್ಟ್‌, ಮಹಿಳೆಯನ್ನು 48 ಗಂಟೆಗಳ ಒಳಗಾಗಿ ‘ಬಂಧ ಮುಕ್ತ’ ಮಾಡುವಂತೆ ಆಕೆಯ ಪಾಲಕರಿಗೆ ಬುಧವಾರ ನಿರ್ದೇಶನ ನೀಡಿದೆ.

ದುಬೈನಲ್ಲಿ ವಾಸಿಸುತ್ತಿರುವ, ಮಹಿಳೆಯ ಸಹಜೀವನ ಸಂಗಾತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ.ಆರ್‌.ಗವಾಯಿ ಮತ್ತು ಸಂದೀಪ್‌ ಮೆಹ್ತಾ ಅವರಿದ್ದ ನ್ಯಾಯಪೀಠ ಈ ನಿರ್ದೇಶನ ನೀಡಿದೆ.

‘ವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಬಂಧಿಸಿ ಪ್ರಶ್ನೆ ಉದ್ಭವಿಸಿದಾಗ, ಒಂದು ದಿನದ ವಿಳಂಬವೂ ಮುಖ್ಯವಾಗುತ್ತದೆ’ ಎಂದು ಹೇಳಿರುವ ನ್ಯಾಯಪೀಠ, ಆಕೆಯ ಸಹಜೀವನ ಸಂಗಾತಿಯ ಪಾಲಕರೊಂದಿಗೆ ಆಕೆ ತೆರಳಲು ಅನುಮತಿ ನೀಡಿದೆ.

ಮಹಿಳೆಯನ್ನು ‘ಬಂಧ ಮುಕ್ತ’ಗೊಳಿಸುವ ಜೊತೆಗೆ, ಆಕೆಯ ಎಲ್ಲ ದಾಖಲೆಗಳು ಮತ್ತು ವೈಯಕ್ತಿಕ ಪರಿಕರಗಳನ್ನು ಹಿಂದಿರುಗಿಸಬೇಕು ಎಂದು ಪಾಲಕರಿಗೆ ನಿರ್ದೇಶನ ನೀಡಿದೆ.

ಮಹಿಳೆಯನ್ನು ಕೂಡಿ ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿ ಕರ್ನಾಟಕ ಹೈಕೋರ್ಟ್‌ ಕಳೆದ ವರ್ಷ ನವೆಂಬರ್ 29ರಂದು ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ, ಆಕೆಯ ಸಂಗಾತಿ ಕೆವಿನ್‌ ಜಾಯ್ ವರ್ಗೀಸ್ ಎಂಬುವವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ದುಬೈನಲ್ಲಿ ಇಬ್ಬರು ಒಟ್ಟಿಗೆ ವ್ಯಾಸಂಗ ಮಾಡುತ್ತಿದ್ದೆವು. 9 ವರ್ಷಗಳಿಂದ ಪರಿಚಯ ಇದ್ದು, 2022ರಿಂದ ಸಹಜೀವನ ನಡೆಸುತ್ತಿದ್ದೇವೆ. ಆಕೆಯನ್ನು ಪಾಲಕರು ದುಬೈನಿಂದ ಬಲವಂತದಿಂದ  ಬೆಂಗಳೂರಿಗೆ ಕರೆದುಕೊಂಡು ಬಂದಿದ್ದು, ಸೋದರ ಸಂಬಂಧಿ ಮನೆಯಲ್ಲಿ ಕೂಡಿ ಹಾಕಿದ್ದಾರೆ ಎಂದು ಕೆವಿನ್‌ ಅವರು ಅರ್ಜಿಯಲ್ಲಿ ತಿಳಿಸಿದ್ದಾರೆ.

‘ಮಹಿಳೆಗೆ 25 ವರ್ಷ ವಯಸ್ಸು ಹಾಗೂ ಉನ್ನತ ಶಿಕ್ಷಣವನ್ನೂ ಪಡೆದಿದ್ದಾಳೆ. ಪ್ರತ್ಯೇಕವಾಗಿ ಮೂರು ಬಾರಿ ಆಕೆಯೊಂದಿಗೆ ಸಂವಾದ ನಡೆಸಿದ್ದೇವೆ. ಆಕೆ ಮತ್ತು ಆಕೆಯ ಸಹಜೀವನ ಸಂಗಾತಿಯ ಪಾಲಕರೊಂದಿಗೂ ಮಾತುಕತೆ ನಡೆಸಿದ್ದೇವೆ. ತನ್ನ ಜೀವನಕ್ಕೆ ಸಂಬಂಧಿಸಿ ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ಅರಿತುಕೊಳ್ಳುವಷ್ಟು ಪ್ರಬುದ್ಧತೆಯನ್ನು ಆಕೆ ಹೊಂದಿರುವುದು ಸ್ಪಷ್ಟವಾಗಿದೆ. ಯಾವುದೇ ಪ್ರಕರಣದಲ್ಲಿ, ಪ್ರೌಢಾವಸ್ಥೆ ತಲುಪಿರುವ ಸ್ತ್ರೀಯನ್ನು ಆಕೆಯ ಇಚ್ಛೆಗೆ ವಿರುದ್ಧವಾದುದನ್ನು ಮಾಡುವಂತೆ ಬಲವಂತ ಮಾಡಲಾಗದು’ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.

‘ಮಗಳ ಇಚ್ಛೆಗೆ ನಮ್ಮ ವಿರೋಧ ಇಲ್ಲ. ಆದರೆ, ಪ್ರಸಕ್ತ ಸಾಮಾಜಿಕ ಪರಿಸ್ಥಿತಿ ಕಾರಣದಿಂದ ನಾವು ಹೀಗೆ ಮಾಡಿದೆವು. ನಮ್ಮ ಮಗಳು ತನ್ನ ಜೀವನದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಮುನ್ನ ಆಕೆ ಆರ್ಥಿಕವಾಗಿ ಸದೃಢವಾಗಬೇಕು ಎಂಬ ಇಚ್ಛೆ ನಮ್ಮದಾಗಿತ್ತು’ ಎಂದು ಮಹಿಳೆಯ ತಂದೆ–ತಾಯಿ ನ್ಯಾಯಪೀಠಕ್ಕೆ ತಿಳಿಸಿದರು.

ಅಸಮಾಧಾನ: ಈ ಪ್ರಕರಣಕ್ಕೆ ಸಂಬಂಧಿಸಿ, ಕರ್ನಾಟಕ ಹೈಕೋರ್ಟ್‌ ಹೊರಡಿಸಿದ್ದ ಆದೇಶದ ಬಗ್ಗೆಯೂ ನ್ಯಾಯಪೀಠ ಅಸಮಾಧಾನ ಹೊರಹಾಕಿದೆ.

‘ಈ ಪ್ರಕರಣಕ್ಕೆ ಸಂಬಂಧಿಸಿದ ಹೇಬಿಯಸ್‌ ಕಾರ್ಪಸ್‌ ಅರ್ಜಿ ವಿಚಾರಣೆ ವೇಳೆ, ಉನ್ನತ ಶಿಕ್ಷಣ ಮುಂದುವರಿಸುವುದಕ್ಕಾಗಿ ದುಬೈಗೆ ಮರಳಲು ಇಚ್ಛಿಸಿದ್ಧಾಗಿ ಮಹಿಳೆಯು ಹೈಕೋರ್ಟ್‌ಗೆ ಸ್ಪಷ್ಟವಾಗಿ ತಿಳಿಸಿದ್ದಳು. ಆಕೆಯನ್ನು ತಕ್ಷಣವೇ ಬಂಧಮುಕ್ತಗೊಳಿಸುವಂತೆ ಸೂಚಿಸಿ ಹೈಕೋರ್ಟ್‌ ಆದೇಶ ಹೊರಡಿಸಬೇಕಿತ್ತು. ಆದರೆ, ಅರ್ಜಿ ವಿಚಾರಣೆಯನ್ನು 14 ಬಾರಿ ಮುಂದೂಡಿದ್ದಲ್ಲದೇ,  ವಿಚಾರಣೆಯನ್ನು 2025ಕ್ಕೆ ನಿಗದಿ ಮಾಡಿದೆ. ಇಂತಹ ವಿಷಯ ಕುರಿತು ಹೈಕೋರ್ಟ್‌ಗೆ ಸಂವೇದನೆ ಇಲ್ಲ ಎಂಬುದನ್ನು ಇದು ತೋರಿಸುತ್ತದೆ’ ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ. 

‘ಹೈಕೋರ್ಟ್‌ನ ಇಂತಹ ಉದಾಸೀನ ಧೋರಣೆಯಿಂದಾಗಿ, ಮಹಿಳೆಯ ಯೋಗಕ್ಷೇಮ ವಿಚಾರಿಸುವುದಕ್ಕಾಗಿ ಅರ್ಜಿದಾರ ಮತ್ತು ಆತನ ಪಾಲಕರು ದುಬೈನಿಂದ ಬೆಂಗಳೂರಿಗೆ ಪದೇಪದೇ ಭೇಟಿ ನೀಡಬೇಕಾಗಿತ್ತು’ ಎಂದೂ ನ್ಯಾಯಪೀಠ ಹೇಳಿದೆ.   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT