ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಆಯುಕ್ತರ ನೇಮಕಕ್ಕೆ ತಡೆಯಾಜ್ಞೆ ನೀಡಲು ಸುಪ್ರೀಂ ಕೋರ್ಟ್ ನಕಾರ

Published 15 ಮಾರ್ಚ್ 2024, 15:57 IST
Last Updated 15 ಮಾರ್ಚ್ 2024, 15:57 IST
ಅಕ್ಷರ ಗಾತ್ರ

ನವದೆಹಲಿ: 2023ರ ಹೊಸ ಕಾನೂನಿ‌ನ ಪ್ರಕಾರ ಚುನಾವಣಾ ಆಯುಕ್ತರನ್ನು ನೇಮಕ ಮಾಡಿರುವುದಕ್ಕೆ ತಡೆಯಾಜ್ಞೆ ನೀಡಲು ಸುಪ್ರೀಂ ಕೋರ್ಟ್‌ ಶುಕ್ರವಾರ ನಿರಾಕರಿಸಿದೆ.

ಚುನಾವಣಾ ಆಯುಕ್ತರನ್ನು ನೇಮಕ ಮಾಡುವ ಸಮಿತಿಯಿಂದ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯನ್ನು (ಸಿಜೆಐ) ಹೊರಗಿಟ್ಟಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಂಜೀವ್‌ ಖನ್ನಾ, ದೀಪಾಂಕರ್‌ ದತ್ತಾ ಮತ್ತು ಆಗಸ್ಟಿನ್‌ ಜಾರ್ಜ್‌ ಮಸಿಹ್‌ ಅವರನ್ನೊಳಗೊಂಡ ನ್ಯಾಯಪೀಠವು, ‘ಸಾಮಾನ್ಯವಾಗಿ ‌ನಾವು ಮಧ್ಯಂತರ ಆದೇಶ ನೀಡುವ ಮೂಲಕ ಕಾನೂನಿಗೆ ತಡೆಯಾಜ್ಞೆ ನೀಡಲಾರೆವು’ ಎಂದು ತಿಳಿಸಿದೆ.

ಚುನಾವಣಾ ಆಯುಕ್ತರ ನೇಮಕವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆಯನ್ನು ನ್ಯಾಯಪೀಠವು ಇದೇ 21ಕ್ಕೆ ಮುಂದೂಡಿದೆ.

ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರನ್ನು ನೇಮಕ ಮಾಡುವ ಸಮಿತಿಯಿಂದ ಸಿಜೆಐ ಅವರನ್ನು ಹೊರಗಿಟ್ಟಿರುವ 2023ರ ತಿದ್ದುಪಡಿ ಕಾಯ್ದೆಯ ಮೂಲಕ ನ್ಯಾಯಾಲಯದ ತೀರ್ಪನ್ನು ಉಲ್ಲಂಘಿಸಲಾಗಿದೆ ಎಂದು ಅರ್ಜಿದಾರರಾದ ಜಯಾ ಠಾಕೂರ್‌ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದ ಹಿರಿಯ ವಕೀಲ ವಿಕಾಸ್‌ ಸಿಂಗ್‌ ನ್ಯಾಯಾಲಯಕ್ಕೆ ತಿಳಿಸಿದರು.

ಚುನಾವಣಾ ಪ್ರಕ್ರಿಯೆಯು ನ್ಯಾಯಬದ್ಧವಾಗಿ ನಡೆಯಲು ಪ್ರಧಾನಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಸಿಜೆಐ ಅವರನ್ನೊಳಗೊಂಡ ಸಮಿತಿಯ ಶಿಫಾರಸಿನಂತೆ ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರನ್ನು ರಾಷ್ಟ್ರಪತಿ ನೇಮಕ ಮಾಡಬೇಕು ಎಂದು 2023 ಮಾರ್ಚ್‌ 2ರಂದು ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಸಿಂಗ್‌ ಅವರು ನ್ಯಾಯಪೀಠದ ಮುಂದೆ ಓದಿದರು.

ತೀರ್ಪಿನಲ್ಲಿ ನೀಡಿರುವ ನಿರ್ದೇಶನಗಳನ್ನೂ ಓದುವಂತೆ ಸಿಂಗ್‌ ಅವರಿಗೆ ಸೂಚಿಸಿದ ನ್ಯಾಯಮೂರ್ತಿ ಖನ್ನಾ ಅವರು, ಸಂಸತ್‌ ಅಂಗೀಕರಿಸಿರುವ ಕಾಯ್ದೆಯ ಪ್ರಕಾರ ಮೂರು ಮಂದಿ ಸದಸ್ಯರ ಆಯ್ಕೆ ಸಮಿತಿಯು ಕಾರ್ಯ ನಿರ್ವಹಿಸಿದೆ ಎಂದರು.

ತೀರ್ಪನ್ನು ಉಲ್ಲಂಘಿಸಿರುವ ಕಾರಣ ಈ ಹಿಂದೆ ಸುಗ್ರೀವಾಜ್ಞೆಗಳಿಗೆ ನ್ಯಾಯಾಲಯವು ತಡೆಯಾಜ್ಞೆ ನೀಡಿರುವುದನ್ನು ಸಿಂಗ್‌ ಅವರು ನ್ಯಾಯಾಲಯದ ಗಮನಕ್ಕೆ ತಂದರು.

ಚುನಾವಣಾ ಆಯುಕ್ತರ ಆಯ್ಕೆ ಕುರಿತು ಮತ್ತೊಮ್ಮೆ ಅರ್ಜಿ ಸಲ್ಲಿಸಿ ಎಂದು ಸಿಂಗ್‌ ಅವರಿಗೆ ಸೂಚಿಸಿದ ನ್ಯಾಯಪೀಠವು, ಈ ಕುರಿತು  ಸಲ್ಲಿಕೆಯಾಗಿರುವ  ಇತರ ಅರ್ಜಿಗಳ ಜೊತೆಗೆ ಇದೇ 21ರಂದು ಅದನ್ನೂ ವಿಚಾರಣೆಗೆ ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿತು.

ಆಯುಕ್ತರನ್ನು ನೇಮಕ ಮಾಡುವ ಸಭೆಯನ್ನು ಮುಂಚಿತವಾಗಿ ನಡೆಸಲಾಗಿದೆ ಎಂದು ಅರ್ಜಿದಾರರು ತಿಳಿಸಿದ್ದಕ್ಕೆ, ಈ ವಿಚಾರವಾಗಿ ಪ್ರತ್ಯೇಕ ಅರ್ಜಿ ಸಲ್ಲಿಸುವಂತೆ ನ್ಯಾಯಪೀಠವು ಸೂಚಿಸಿದೆ.

ಅಸೋಸಿಯೇಷನ್ ಫಾರ್‌ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್‌) ಸಂಸ್ಥೆಯ ಪರವಾಗಿ ವಕೀಲರಾದ ಪ್ರಶಾಂತ್‌ ಭೂಷಣ್‌ ಅವರು ನ್ಯಾಯಾಲಯಕ್ಕೆ ಹಾಜರಾಗಿದ್ದರು. ಆಯ್ಕೆ ಸಮಿತಿಯಿಂದ ಸಿಜೆಐ ಅವರನ್ನು ಹೊರಗಿಟ್ಟಿರುವುದನ್ನು ಪ್ರಶ್ನಿಸಿ ಎಡಿಆರ್‌ ಸಂಸ್ಥೆ ಕೂಡ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಉನ್ನತಾಧಿಕಾರ ಆಯ್ಕೆ ಸಮಿತಿಯು ಮಾಜಿ ಐಎಎಸ್‌ ಅಧಿಕಾರಿಗಳಾದ ಜ್ಞಾನೇಶ್‌ ಕುಮಾರ್‌ ಮತ್ತು ಸುಖಬೀರ್‌ ಸಂಧು ಅವರ‌ನ್ನು ಚುನಾವಣಾ ಆಯುಕ್ತರಾಗಿ ಗುರುವಾರ ನೇಮಕ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT