ಗುರುವಾರ, 21 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದುವೆ ಮೊದಲು ಜನಿಸಿದವರಿಗೆ ಪಿತ್ರಾರ್ಜಿತ ಆಸ್ತಿ: ತೀರ್ಪು ಕಾಯ್ದಿರಿಸಿದ ಸುಪ್ರೀಂ

ವಿವಾಹಪೂರ್ವ ಜೋಡಿಗೆ ಜನಿಸಿದ ಮಕ್ಕಳ ಹಕ್ಕು ಪ್ರಶ್ನಿಸಿದ ಅರ್ಜಿ
Published 18 ಆಗಸ್ಟ್ 2023, 14:01 IST
Last Updated 18 ಆಗಸ್ಟ್ 2023, 14:01 IST
ಅಕ್ಷರ ಗಾತ್ರ

ನವದೆಹಲಿ: ಮದುವೆಗೂ ಮುನ್ನ ಜೋಡಿಗೆ ಜನಿಸಿದ ಮಕ್ಕಳಿಗೆ ಹಿಂದೂ ಉತ್ತರಾಧಿಕಾರ ಕಾಯ್ದೆಯಡಿ ಪಿತ್ರಾರ್ಜಿತ ಆಸ್ತಿ ಹಕ್ಕು ಕುರಿತ ಅರ್ಜಿಗೆ ಸಂಬಂಧಿಸಿದ ತೀರ್ಪನ್ನು ಸುಪ್ರೀಂಕೋರ್ಟ್‌ ಶುಕ್ರವಾರ ಕಾಯ್ದಿರಿಸಿತು.

ಅರ್ಜಿಗೆ ಸಂಬಂಧಿಸಿ ಹಲವು ವಕೀಲರು ಮಂಡಿಸಿದ ವಾದಗಳನ್ನು ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದೀವಾಲಾ ಹಾಗೂ ಮನೋಜ್‌ ಮಿಶ್ರಾ ಅವರಿದ್ದ ನ್ಯಾಯಪೀಠ ಆಲಿಸಿತು.

‘ವಿವಾಹವಾಗುವುದಕ್ಕೂ ಮುನ್ನ ಜೋಡಿಗೆ ಜನಿಸಿದ ಮಕ್ಕಳು ಹಿಂದೂ ವಿವಾಹ ಕಾಯ್ದೆ ಸೆಕ್ಷನ್ 16(3)ರಡಿ ಪಾಲಕರ ಸ್ವಯಾರ್ಜಿತ ಆಸ್ತಿ ಮೇಲಷ್ಟೆ ಹಕ್ಕು ಹೊಂದಿದ್ದಾರೆಯೇ ಎಂಬ ಬಗ್ಗೆಯೂ ನ್ಯಾಯಪೀಠ ನಿರ್ಧಾರ ಪ್ರಕಟಿಸಲಿದೆ.

ಈ ವಿಷಯ ಕುರಿತ ಅರ್ಜಿ 2011ರಿಂದ ಬಾಕಿ ಉಳಿದಿದೆ. ವಿಚಾರಣೆ ನಡೆಸಿದ್ದ ಇಬ್ಬರು ನ್ಯಾಯಮೂರ್ತಿಗಳಿದ್ದ ನ್ಯಾಯಪೀಠ, ಅರ್ಜಿಯನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಿ 2011ರ ಮಾರ್ಚ್‌ 31ರಂದು ಆದೇಶಿಸಿತ್ತು.

‘ಕಾನೂನುಸಮ್ಮತ ವಿವಾಹಸಂಬಂಧದಲ್ಲಿ ಜನಿಸದ ಮಕ್ಕಳಿಗೆ ಪೂರ್ವಿಕರ ಆಸ್ತಿಯಲ್ಲಿ ಪಾಲು ಪಡೆಯಲು ಹಕ್ಕಿದೆಯೇ ಅಥವಾ ಹಿಂದೂ ವಿವಾಹ ಕಾಯ್ದೆ ಸೆಕ್ಷನ್ 16(3) ಅಡಿ ತಮ್ಮ ಪಾಲಕರ ಸ್ವಯಾರ್ಜಿತ ಆಸ್ತಿ ಮೇಲಷ್ಟೆ ಹಕ್ಕಿದೆಯೇ ಎಂಬುದೇ ಈ ಪ್ರಕರಣದ ಮುಖ್ಯ ಪ್ರಶ್ನೆಯಾಗಿದೆ’ ಎಂದು ಇಬ್ಬರು ನ್ಯಾಯಮೂರ್ತಿಗಳಿದ್ದ ಪೀಠ ಹೇಳಿತ್ತು.

‘ರದ್ದುಗೊಳಿಸಲಾದ ಅಥವಾ ರದ್ದುಗೊಳಿಸಬಹುದಾದ ವಿವಾಹಸಂಬಂಧದಲ್ಲಿ ಜನಿಸಿದ ಮಕ್ಕಳಿಗೆ ಮಾತ್ರ ತಮ್ಮ ಪಾಲಕರ ಆಸ್ತಿ ಮೇಲೆ ಹಕ್ಕಿದೆ ಎಂದು ಕಾಯ್ದೆಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ’ ಎಂದೂ ಪೀಠ ಹೇಳಿತ್ತು.

‘ಪ್ರತಿ ಸಮಾಜದಲ್ಲಿ ಅಸಹಜ ಸಂಪ್ರದಾಯಗಳು ಬದಲಾಗುತ್ತವೆ. ಇದಕ್ಕೆ ನಮ್ಮ ಸಮಾಜವೂ ಹೊರತಲ್ಲ. ಹಿಂದೆ ಯಾವುದು ನ್ಯಾಯಸಮ್ಮತವಲ್ಲ ಎಂದು ಪರಿಗಣಿಸಲಾಗುತ್ತಿತ್ತೊ ಅದು ಈಗಿನ ದಿನಮಾನದಲ್ಲಿ ನ್ಯಾಯಸಮ್ಮತವಾಗಬಹುದು. ಹೀಗಾಗಿ, ಸಾಮಾಜಿಕ ಅನುಮೋದನೆಯಿಂದಲೇ ನ್ಯಾಯಸಮ್ಮತ ಎಂಬ ಪರಿಕಲ್ಪನೆ ಹೊರಹೊಮ್ಮುತ್ತದೆ’ ಎಂದು ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT