ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಭಿಚಾರ ಶಿಕ್ಷಾರ್ಹ ಅಪರಾಧ ಅಲ್ಲ: ತೀರ್ಪಿಗೆ ಸಾಮಾಜಿಕ ಕಾರ್ಯಕರ್ತರ ಸ್ವಾಗತ

ಹೆಣ್ಣು ಗಂಡನ ಸೊತ್ತಲ್ಲ ಎಂಬುದಕ್ಕೆ ಬಲ
Last Updated 27 ಸೆಪ್ಟೆಂಬರ್ 2018, 15:26 IST
ಅಕ್ಷರ ಗಾತ್ರ

ನವದೆಹಲಿ: ವ್ಯಭಿಚಾರ ಶಿಕ್ಷಾರ್ಹ ಅಪರಾಧ ಅಲ್ಲ ಎಂಬ ಸುಪ್ರೀಂ ಕೋರ್ಟ್‌ ತೀರ್ಪನ್ನು ಸಾಮಾಜಿಕ ಕಾರ್ಯಕರ್ತರು ಸ್ವಾಗತಿಸಿದ್ದಾರೆ. ಇದು ವಸಾಹತು ಸಂದರ್ಭದ, ಓಬಿರಾಯನ ಕಾಲದ ಕಾನೂನು ಆಗಿತ್ತು. ಈ ಕಾನೂನು ಮಹಿಳೆಯನ್ನು ಗಂಡನ ಸೊತ್ತು ಎಂದೇ ಪರಿಗಣಿಸಿತ್ತು. ಅದನ್ನು ರದ್ದು ಮಾಡಿರುವುದು ಪ್ರಗತಿಪರವಾದ ಕ್ರಮ ಎಂದು ಹಲವರು ಪ್ರತಿಪಾದಿಸಿದ್ದಾರೆ.

‘ಸುಪ್ರೀಂ ಕೋರ್ಟ್‌ನಿಂದ ಇನ್ನೊಂದು ಅತ್ಯುತ್ತಮವಾದ ತೀರ್ಪು ಬಂದಿದೆ. ಬೇರೊಬ್ಬನ ಹೆಂಡತಿಯ ಜತೆಗೆ ಲೈಂಗಿಕ ಸಂಬಂಧ ಹೊಂದುವ ಪುರುಷನ ವ್ಯಭಿಚಾರವನ್ನು ಅಪರಾಧ ಎಂದು ಪರಿಗಣಿಸುತ್ತಿದ್ದ 497ನೇ ಸೆಕ್ಷನ್‌ ಮಹಿಳೆಯನ್ನು ಗಂಡನ ಸೊತ್ತು ಎಂದು ಪರಿಗಣಿಸುತ್ತಿತ್ತು’ ಎಂದು ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಪ್ರಶಾಂತ್ ಭೂಷನ್‌ ಹೇಳಿದ್ದಾರೆ.

ಕಾಂಗ್ರೆಸ್‌ ಸಂಸದೆ ಮತ್ತು ಕಾಂಗ್ರೆಸ್‌ ಮಹಿಳಾ ವಿಭಾಗದ ಅಧ್ಯಕ್ಷೆ ಸುಷ್ಮಿತಾ ದೇವ್‌ ಅವರು ಸುಪ್ರೀಂ ಕೋರ್ಟ್‌ ತೀರ್ಪಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸೆಕ್ಷನ್‌ ಅನ್ನು ಬಹಳ ಹಿಂದೆಯೇ ರದ್ದು ಮಾಡಬೇಕಿತ್ತು ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಹೇಳಿದ್ದಾರೆ.

‘ಅಕ್ರಮ ಸಂಬಂಧಕ್ಕೆ ‘ಸುಪ್ರೀಂ’ ಲೈಸೆನ್ಸ್‌’

ಸುಪ್ರೀಂ ಕೋರ್ಟ್‌ನ ತೀರ್ಪು ಮಹಿಳಾ ವಿರೋಧಿಯಾಗಿದೆ. ಅಕ್ರಮ ಸಂಬಂಧ ಹೊಂದಲು ಜನರಿಗೆ ಲೈಸೆನ್ಸ್‌ ಕೊಟ್ಟಂತಾಗಿದೆ ಎಂದು ಕೆಲವು ಸಾಮಾಜಿಕ ಹೋರಾಟಗಾರರು ಎಚ್ಚರಿಕೆ ಕೊಟ್ಟಿದ್ದಾರೆ.

ವ್ಯಭಿಚಾರವನ್ನು ಅಪರಾಧಮುಕ್ತಗೊಳಿಸಿರುವ ಕ್ರಮವು ಮಹಿಳೆಯರ ನೋವನ್ನು ಇನ್ನಷ್ಟು ಹೆಚ್ಚಿಸಲಿದೆ ಎಂದು ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್‌ ಹೇಳಿದ್ದಾರೆ.

‘ಸುಪ್ರೀಂ ಕೋರ್ಟ್ ತೀರ್ಪನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಇದು ಮಹಿಳಾ ವಿರೋಧಿ ತೀರ್ಪು. ಮದುವೆಯಾಗುವುದರ ಜತೆಗೆ ವಿವಾಹೇತರ ಸಂಬಂಧವನ್ನೂ ಇರಿಸಿಕೊಳ್ಳಲು ಈ ತೀರ್ಪು ಅವಕಾಶ ಕೊಟ್ಟಿದೆ’ ಎಂದು ಅವರು ಹೇಳಿದ್ದಾರೆ.

ಸಾಮಾಜಿಕ ಕಾರ್ಯಕರ್ತೆ ಬೃಂದಾ ಅಡಿಗೆ ಅವರಿಗೂ ತೀರ್ಪು ಸಮಾಧಾನ ತಂದಿಲ್ಲ. ಈ ತೀರ್ಪು ದೇಶದಲ್ಲಿ ಬಹುವಿವಾಹಕ್ಕೆ ಅವಕಾಶ ಕೊಡುವುದೇ ಎಂದು ಅವರು ಪ‍್ರಶ್ನಿಸಿದ್ದಾರೆ.

‘ಗಂಡಸರು ಎರಡು ಅಥವಾ ಮೂರು ಮದುವೆ ಆಗುವುದು ವಿರಳ ಏನಲ್ಲ. ಎರಡನೇ ಮದುವೆಯಾದಾಗ ಮೊದಲ ಹೆಂಡತಿಯನ್ನು, ಮೂರನೇ ಮದುವೆಯಾದಾಗ ಎರಡನೇ ಹೆಂಡತಿಯನ್ನು ಕೈಬಿಡುವುದು ಸಾಮಾನ್ಯ. ವ್ಯಭಿಚಾರವು ಅಪರಾಧ ಅಲ್ಲ ಎಂದಾದರೆ ತಮ್ಮನ್ನು ಬಿಟ್ಟುಹೋಗುವ ಗಂಡನ ವಿರುದ್ಧ ಹೆಂಡತಿಯು ದೂರು ದಾಖಲಿಸುವುದಾದರೂ ಹೇಗೆ’ ಎಂದು ಅವರು ಕೇಳಿದ್ದಾರೆ.

ಕಾಂಗ್ರೆಸ್‌ ನಾಯಕಿ ರೇಣುಕಾ ಚೌಧರಿ ಅವರೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘ಇದು ತ್ರಿವಳಿ ತಲಾಖ್‌ ಅನ್ನು ಅಪರಾಧ ಎಂದು ಪರಿಗಣಿಸಿದ್ದಕ್ಕೆ ಸಮಾನವಾದ ತೀರ್ಪು. ಈಗ ಹೆಂಡತಿಯನ್ನು ಗಂಡ ಬಿಟ್ಟು ಹೋದರೂ ತಲಾಖ್ ಕೊಡದೆ ಇರಬಹುದು. ಗಂಡಸರು ಒಂದಕ್ಕಿಂತ ಹೆಚ್ಚು ಮದುವೆ ಮಾಡಿಕೊಳ್ಳಬಹುದು. ಇದು ಮಹಿಳೆಯನ್ನು ಇನ್ನಷ್ಟು ಸಂಕಷ್ಟಕ್ಕೆ ತಳ್ಳುತ್ತದೆ. ಈ ಬಗ್ಗೆ ನ್ಯಾಯಾಲಯವು ಇನ್ನಷ್ಟು ಸ್ಪಷ್ಟತೆ ನೀಡಬೇಕು’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT