ಶುಕ್ರವಾರ, 8 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನ: ‘ಜಾತ್ಯತೀತ’, ‘ಸಮಾಜವಾದ‘ಕ್ಕೆ ಕೊಕ್‌!

ಸಂವಿಧಾನ ತಿರುಚಲಾಗಿದೆ ಎಂದು ವಿಪಕ್ಷಗಳ ಆಕ್ರೋಶ: ಅಧಿವೇಶನದಲ್ಲಿ ಪ್ರಸ್ತಾಪಿಸಲು ನಿರ್ಧಾರ
Published 20 ಸೆಪ್ಟೆಂಬರ್ 2023, 20:33 IST
Last Updated 20 ಸೆಪ್ಟೆಂಬರ್ 2023, 20:33 IST
ಅಕ್ಷರ ಗಾತ್ರ

ಬೆಂಗಳೂರು/ನವದೆಹಲಿ: ನೂತನ ಸಂಸತ್ ಭವನದಲ್ಲಿ ಮೊದಲ ಅಧಿವೇಶನದ ಆರಂಭದ ಸಲುವಾಗಿ ಕೇಂದ್ರ ಸರ್ಕಾರವು ನೀಡಿರುವ ಸಂವಿಧಾನದ ಪ್ರಸ್ತಾವನೆಯಲ್ಲಿ, ‘ಸಮಾಜವಾದಿ, ಜಾತ್ಯತೀತ ಮತ್ತು ಸಮಗ್ರತೆ’ ಪದಗಳನ್ನು ತೆಗೆದುಹಾಕಲಾಗಿದೆ. ಸರ್ಕಾರವು ಸಂವಿಧಾನವನ್ನು ತಿರುಚಿದೆ, ವಿರೂಪಗೊಳಿಸಿದೆ ಎಂದು ವಿರೋಧ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ. ಈ ವಿಷಯವನ್ನು ಲೋಕಸಭೆಯ ವಿಶೇಷ ಅಧಿವೇಶನದ ಉಳಿದ ದಿನಗಳಲ್ಲಿ ಪ್ರಸ್ತಾಪಿಸಲು ವಿರೋಧ ಪಕ್ಷಗಳು ನಿರ್ಧರಿಸಿವೆ.

ಸಂವಿಧಾನದ ಪ್ರಸ್ತಾವನೆಗೆ ಕೇಂದ್ರ ಸರ್ಕಾರವು ತಂದಿರುವ ಬದಲಾವಣೆಯನ್ನು ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್‌ ಸಂಸದ ಅಧೀರ್ ರಂಜನ್‌ ಚೌಧರಿ ಅವರು ಬಹಿರಂಗಪಡಿಸಿದ್ದರು. ಅವರು, ‘ಸರ್ಕಾರವು ಸಂವಿಧಾನದ ಪ್ರಸ್ತಾವನೆಯನ್ನು ಬದಲಾಯಿಸಿದ್ದು ಸಮಾಜವಾದಿ ಮತ್ತು ಜಾತ್ಯತೀತ ಎಂಬ ಪದಗಳನ್ನು ಕೈಬಿಟ್ಟಿರುವ ಸಂವಿಧಾನದ ಪ್ರತಿಗಳನ್ನು ಸಂಸದರಿಗೆ ನೀಡಿದೆ’ ಎಂದು ಆರೋಪಿಸಿದ್ದರು ಎಂದು ಪಿಟಿಐ ವರದಿ ಮಾಡಿದೆ. ಆದರೆ, ಸರ್ಕಾರವು ನೀಡಿದ್ದ ಪ್ರತಿಯಲ್ಲಿ ‘ರಾಷ್ಟ್ರೀಯ ಏಕತೆ ಮತ್ತು ಸಮಗ್ರತೆ’ ಎಂಬುದನ್ನೂ ‘ರಾಷ್ಟ್ರೀಯ ಏಕತೆ’ ಎಂದು ಬದಲಿಸಿ ಮುದ್ರಿಸಲಾಗಿದೆ.

ಅಧೀರ್ ರಂಜನ್‌ ಅವರ ಆರೋಪಕ್ಕೆ ಪ್ರತಿಕ್ರಿಯಿಸಿರುವ ಕಾನೂನು ಸಚಿವ ಅರ್ಜುನ್‌ ರಾಮ್ ಮೆಘವಾಲ್‌, ‘ಸಂವಿಧಾನದ ಮೂಲ ಪ್ರಸ್ತಾವನೆ ಇರುವ ಪ್ರತಿಯನ್ನು ಸಂಸದರಿಗೆ ನೀಡಲಾಗಿದೆ. ಮೂಲ ಪ್ರತಿಯಲ್ಲಿ ‘ಸಮಾಜವಾದಿ, ಜಾತ್ಯತೀತ’ ಎಂಬ ಪದಗಳು ಇರಲಿಲ್ಲ. ಅವುಗಳನ್ನು ಆನಂತರ ತಿದ್ದುಪಡಿ ಮಾಡಿ ಸೇರಿಸಲಾಗಿದೆ’ ಎಂದು ಸಮರ್ಥಿಸಿಕೊಂಡಿದ್ದಾರೆ.

ಇದಕ್ಕೆ ತಿರುಗೇಟು ನೀಡಿರುವ ಅಧೀರ್, ‘ಇಂದು ನೀವು ಯಾರಿಗಾದರೂ ಸಂವಿಧಾನದ ಪ್ರತಿ ನೀಡುತ್ತೀರಿ ಎಂದಾದರೆ, ಅದು ಈಗ ಜಾರಿಯಲ್ಲಿರುವ ಪ್ರತಿಯೇ ಆಗಿರಬೇಕು. ಹಳೆಯದನ್ನು ನೀಡಬಾರದು’ ಎಂದಿದ್ದಾರೆ. ಜತೆಗೆ ಹೀಗೆ ಮಾಡುವಲ್ಲಿ ಸರ್ಕಾರದ ಉದ್ದೇಶವೇನು ಎಂಬುದು ಅರ್ಥವಾಗತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

1949ರಲ್ಲಿ ಅಂಗೀಕರಿಸಲಾದ ಸಂವಿಧಾನದ ಮೂಲ ಪ್ರತಿಯಲ್ಲಿ ‘ಸಮಾಜವಾದಿ, ಜಾತ್ಯತೀತ ಮತ್ತು ಸಮಗ್ರತೆ’ ಎಂಬ ಪದಗಳು ಇರಲಿಲ್ಲ. 1976ರಲ್ಲಿ ಸಂವಿಧಾನಕ್ಕೆ 42ನೇ ತಿದ್ದುಪಡಿ ತಂದು ಅವುಗಳನ್ನು ಸೇರಿಸಲಾಗಿತ್ತು. ಸರ್ಕಾರವು ಈಗ ಸಂಸದರಿಗೆ ಉಡುಗೊರೆಯಾಗಿ ನೀಡಿರುವ ಸಂವಿಧಾನದ ಪ್ರತಿಯಲ್ಲಿ ಉಳಿದೆಲ್ಲಾ ಅಂಶಗಳು ಇಂದಿನದ್ದೇ ಆಗಿವೆ. ಈಗ ಬಳಕೆಯಲ್ಲಿರುವ ಅಧಿಕೃತ ಪ್ರಸ್ತಾವನೆಯ ಪಠ್ಯವನ್ನೂ ಈ ಪ್ರತಿಯ ಪುಟವೊಂದರಲ್ಲಿ ನೀಡಲಾಗಿದೆ. ಆದರೆ, ಪ್ರತಿಯ ಆರಂಭದಲ್ಲಿ ಹಳೆಯ ಪ್ರಸ್ತಾವನೆಯನ್ನು ನೀಡಿದೆ. ಇದು ಹಳೆಯ ಅಥವಾ ಮೂಲ ಪ್ರಸ್ತಾವನೆ ಎಂದು ಸೂಚಿಸುವ ಯಾವುದೇ ಅಡಿಟಿಪ್ಪಣಿ ಅಥವಾ ಸೂಚನೆಯನ್ನು ಆ ಪುಟದಲ್ಲಿ ನೀಡಿಲ್ಲ.

ಈಗ ಜಾರಿಯಲ್ಲಿರುವ ಸಂವಿಧಾನದ ಪ್ರತಿಯಲ್ಲಿರುವ ಪ್ರಸ್ತಾವನೆ
ಈಗ ಜಾರಿಯಲ್ಲಿರುವ ಸಂವಿಧಾನದ ಪ್ರತಿಯಲ್ಲಿರುವ ಪ್ರಸ್ತಾವನೆ

ಸಮಾಜವಾದಿ ಮತ್ತು ಜಾತ್ಯತೀತ ಎಂಬ ಪದಗಳನ್ನು ಸರ್ಕಾರವು ಅತ್ಯಂತ ಜಾಣತನದಿಂದ ಕೈಬಿಟ್ಟಿದೆ. ಇದು ಅತ್ಯಂತ ಗಂಭೀರವಾದ ವಿಚಾರ. ಬಿಜೆಪಿಯ ಉದ್ದೇಶವೇನು?

-ಅಧೀರ್ ರಂಜನ್‌ ಚೌಧರಿ ಲೋಕಸಭೆ ವಿರೋಧ ಪಕ್ಷದ ನಾಯಕ

ಸಂವಿಧಾನಕ್ಕೆ ಹಲವು ಬಾರಿ ತಿದ್ದುಪಡಿ ತರಲಾಗಿದೆ. ಈಗ ಯಾರಿಗಾದರೂ ಸಂವಿಧಾನದ ಪ್ರತಿ ನೀಡುವುದಾದರೆ ಅದರಲ್ಲಿ ಆ ಎಲ್ಲಾ ತಿದ್ದುಪಡಿಗಳು ಇರಲೇಬೇಕು

-ಡೋಲಾ ಸೆನ್‌ ಟಿಎಂಸಿ ಸಂಸದೆ

ಸಮಾಜವಾದಿ ಮತ್ತು ಜಾತ್ಯತೀತ ಪದಗಳನ್ನು ಕೈಬಿಟ್ಟಿರುವ ಕ್ರಮವು ಬಿಜೆಪಿ ನಿಜವಾಗಿಯೂ ಪಕ್ಷಪಾತದ ಪಕ್ಷ ಎಂಬುದನ್ನು ಬಯಲು ಮಾಡಿದೆ. ಸುಳ್ಳು ಸಮರ್ಥನೆಯನ್ನು ಬಿಜೆಪಿ ನಿಲ್ಲಿಸಲಿ

-ಕ್ಲೈಡ್‌ ಕ್ರಾಸ್ಟೊ ಎನ್‌ಸಿಪಿ ವಕ್ತಾರ

ಭಾರತ ಸಂವಿಧಾನದ ಪ್ರಸ್ತಾವನೆಯಿಂದ ಈ ಪದಗಳನ್ನು ತೆಗೆದುಹಾಕಿರುವ ಬಿಜೆಪಿ ಸರ್ಕಾರದ ಕ್ರಮವು ಕಡು ಅಪರಾಧ. ಇದನ್ನು ನಾವು ಲೋಕಸಭೆಯಲ್ಲಿ ಪ್ರಶ್ನಿಸುತ್ತೇವೆ

-ಬಿನೋಯ್ ವಿಸ್ವಂ ಸಿಪಿಐ ಸಂಸದ

ಸಂವಿಧಾನಕ್ಕೆ ತಿದ್ದುಪತಿ ತರದ ಹೊರತು ಇಂತಹ ಬದಲಾವಣೆ ಮಾಡಲು ಸಾಧ್ಯವಿಲ್ಲ. ಹಾಗೇನಾದರೂ ಮಾಡಿದ್ದರೆ ಅದು ಸರ್ಕಾರಕ್ಕೆ ಮುಳುವಾಗಲಿದೆ

-ಅಶ್ವಿನಿ ಕುಮಾರ್‌ ಕಾಂಗ್ರೆಸ್‌ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT