ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಲಿಗಢದಲ್ಲಿ ಧಾರ್ಮಿಕ ಸಭೆ: ಭಾರತವನ್ನು ಹಿಂದೂ ರಾಷ್ಟ್ರವಾಗಿಸಲು ಸ್ವಾಮೀಜಿಗಳ ಕರೆ

ಫಾಲೋ ಮಾಡಿ
Comments

ಲಖನೌ (ಉತ್ತರ ಪ್ರದೇಶ): ‘ಭಾರತ ಇಸ್ಲಾಂ ರಾಷ್ಟ್ರವಾಗಿ ಪರಿವರ್ತನೆಗೊಂಡು ಮುಸ್ಲಿಂ ಪ್ರಧಾನಿ ಬರುವುದನ್ನು ತಡೆಯಬೇಕಿದ್ದರೆ ಭಾರತವನ್ನು 'ಹಿಂದೂ ರಾಷ್ಟ್ರ' ಮಾಡಬೇಕು. ಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಹಡೆಯಬೇಕು, ಹಿಂದೂ ಧರ್ಮದ ಹೆಸರಿನಲ್ಲೇ ಮತ ಚಲಾಯಿಸಬೇಕು’ ಎಂದು ಉತ್ತರ ಪ್ರದೇಶದ ಅಲಿಗಢದಲ್ಲಿ ಸೋಮವಾರ ನಡೆದ ಧಾರ್ಮಿಕ ಸಭೆಯಲ್ಲಿ ಸ್ವಾಮೀಜಿಗಳು ಕರೆ ನೀಡಿದರು.

‘ಭಾರತದಲ್ಲಿ ಇರುವುದು ಒಂದೇ ಧರ್ಮ; ಅದು ಸನಾತನ ಧರ್ಮ. ಹಿಂದೂಗಳು ಒಗ್ಗೂಡಬೇಕು ಮತ್ತು ತಮ್ಮ ಧರ್ಮದ ಆಧಾರದ ಮೇಲೆ ಮತ ಚಲಾಯಿಸಬೇಕು‘ ಎಂದು ಸ್ವಾಮೀಜಿ ಕಾಳಿಚರಣ ಮಹಾರಾಜ್ ಭಾನುವಾರ ಸಭೆಯಲ್ಲಿ ಮಾತನಾಡುತ್ತಾ ಹೇಳಿದರು.

ಕಾಳಿಚರಣ ಸ್ವಾಮೀಜಿ ಅವರು ಮಹಾತ್ಮಾ ಗಾಂಧಿಯನ್ನು ನಿಂದಿಸಿದ ಆರೋಪದ ಮೇಲೆ ಬಂಧನಕ್ಕೀಡಾಗಿ, ಮೂರು ತಿಂಗಳ ಸೆರೆವಾಸ ಅನುಭವಿಸಿ ಇತ್ತೀಚೆಗೆ ಜಾಮೀನು ಪಡೆದು ಹೊರಬಂದಿದ್ದಾರೆ. ಗಾಂಧಿ 'ರಾಷ್ಟ್ರಪಿತ'ರಲ್ಲ ಎಂದು ಅವರು ಹೇಳಿಕೆ ನೀಡಿದ್ದರು.

‘ಮುಸ್ಲಿಮರ ಆಳ್ವಿಕೆಯಲ್ಲಿ ದೇಶದಲ್ಲಿ ಲಕ್ಷಾಂತರ ಹಿಂದೂ ದೇವಾಲಯಗಳನ್ನು ಕೆಡವಲಾಯಿತು. ಸಾವಿರಾರು ಮಹಿಳೆಯರ ಮೇಲೆ ಅತ್ಯಾಚಾರ ನಡೆಯಿತು ಎಂದು ಅವರು ಪ್ರತಿಪಾದಿಸಿದರು. ‘ನಾವು ಒಗ್ಗೂಡಿ ಹಿಂದೂ ಧರ್ಮವನ್ನು ಬೆಂಬಲಿಸದೇ ಹೋದರೆ ನಮ್ಮ ಮಹಿಳೆಯರು ಸುರಕ್ಷಿತವಾಗಿರುವುದಿಲ್ಲ‘ ಎಂದು ಅವರು ಹೇಳಿದರು. ಅಲ್ಲದೇ, ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಬೆಂಬಲಿಸುವಂತೆ ಅವರು ಆಗ್ರಹಿಸಿದರು.

ಕಳೆದ ವರ್ಷ ಉತ್ತರಾಖಂಡದ ಹರಿದ್ವಾರದಲ್ಲಿ ನಡೆದ 'ಧರ್ಮ ಸಂಸದ್' (ಧಾರ್ಮಿಕ ಸಭೆ)ನಲ್ಲಿ ಮುಸ್ಲಿಮರ ವಿರುದ್ಧ ಹೇಳಿಕೆ ನೀಡಿದ್ದ ಯತಿ ನರಸಿಂಹಾನಂದ ಸರಸ್ವತಿ ಅವರು ಭಾರತವನ್ನು ಹಿಂದೂ ರಾಷ್ಟ್ರ ಮಾಡಬೇಕಾಗಿ ಕರೆ ನೀಡಿದರು.
‘ಒಂದು ಯೋಜಿತ ಪಿತೂರಿಯ ಭಾಗವಾಗಿ ನಿರ್ದಿಷ್ಟ ಸಮುದಾಯದ ಜನಸಂಖ್ಯೆಯು ದೇಶದಲ್ಲಿ ವೇಗವಾಗಿ ಹೆಚ್ಚುತ್ತಿದೆ. ಇದು ದೇಶಕ್ಕೆ ಅತ್ಯಂತ ಅಪಾಯಕಾರಿ. ಅದನ್ನು ಎದುರಿಸಲು ಹಿಂದೂಗಳು ತಮ್ಮ ಕೈಲಾದ ಎಲ್ಲವನ್ನೂ ಮಾಡಬೇಕು’ ಎಂದು ಅವರು ಒತ್ತಾಯಿಸಿದರು.

ಮುಸ್ಲಿಮರ ದೇಶಪ್ರೇಮದ ಬಗ್ಗೆಯೂ ಅವರು ಅನುಮಾನ ವ್ಯಕ್ತಪಡಿಸಿದರು. ಯುದ್ಧ ನಡೆದರೆ ಅವರು ಪಾಕಿಸ್ತಾನಕ್ಕೇ ಬೆಂಬಲ ನೀಡುತ್ತಾರೆ ಎಂದೂ ಅವರು ಹೇಳಿದರು.

ಕೆಲ ತಿಂಗಳ ಹಿಂದೆ ಪ್ರಯಾಗರಾಜ್‌ನ 'ಸಂಗಮ'ದಲ್ಲಿ (ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮ) ವಾರ್ಷಿಕ ಧಾರ್ಮಿಕ ಕಾರ್ಯಕ್ರಮ 'ಮಾಘಮೇಳ' ನಡೆದಿತ್ತು. ಅಲ್ಲಿನ ಧಾರ್ಮಿಕ ಸಭೆಯಲ್ಲಿ ಹಿಂದೂ ಸ್ವಾಮೀಜಿಗಳು ಭಾರತವನ್ನು ಹಿಂದೂ ರಾಷ್ಟ್ರವಾಗಿಸಲು ಕರೆ ನೀಡಿದ್ದರು. ಅಲ್ಲದೇ, ಮಹಾತ್ಮ ಗಾಂಧಿಯವರನ್ನು 'ರಾಷ್ಟ್ರಪಿತ' ಎಂದು, ಪಂಡಿತ್ ಜವಾಹರ್ ಲಾಲ್ ನೆಹರು ಅವರನ್ನು ದೇಶದ ಮೊದಲ ಪ್ರಧಾನಿ ಎಂದು ಒಪ್ಪಲು ನಿರಾಕರಿಸಿದ್ದರು.

‘ಭಾರತದಂತಹ ದೇಶದಲ್ಲಿ, ಯಾರಾದರೂ ರಾಷ್ಟ್ರಪುತ್ರರಾಗಬಹುದೇ ಹೊರತು ರಾಷ್ಟ್ರಪಿತರಾಗಲು ಸಾಧ್ಯವಿಲ್ಲ‘ ಎಂದು ಸ್ವಾಮೀಜಿಯೊಬ್ಬರು ಹೇಳಿದ್ದರು. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ 15 ದೇಶಗಳ ಬೆಂಬಲ ಇದ್ದಿದ್ದರಿಂದ ಅವರನ್ನು ದೇಶದ ಮೊದಲ ಪ್ರಧಾನಿ ಎಂದು ಘೋಷಿಸಬೇಕಿತ್ತು. ದೇಶವು ಸ್ವಾತಂತ್ರ್ಯವನ್ನು ಪಡೆಯುವುದಕ್ಕೂ ಮೊದಲೇ ಬೋಸ್ ಭಾರತದ ಪ್ರಧಾನಿಯಾಗಿದ್ದರು’ ಎಂದು ಸ್ವಾಮೀಜಿ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT