ಶ್ರೀನಗರ: ‘ಚುನಾವಣೆಯಲ್ಲಿ ನ್ಯಾಷನಲ್ ಕಾಂಗ್ರೆಸ್ (ಎನ್‌ಸಿ) ಪಕ್ಷವನ್ನು ಎದುರಿಸಲು, ಸಂಸದ ಶೇಕ್ ಅಬ್ದುಲ್ ರಶೀದ್ ಅವರ ‘ಅವಾಮಿ ಇತ್ತೇಹಾದ್ ಪಾರ್ಟಿ (ಎಐಪಿ) ಮತ್ತು ‘ಜಮಾತ್ ಇ ಇಸ್ಲಾಮಿ’ ಮೈತ್ರಿಯನ್ನು ದೂರದಿಂದಲೇ ನಿಯಂತ್ರಣ ಮಾಡಲಾಗುತ್ತಿದೆ’ ಎಂದು ಎನ್‌ಸಿ ಮುಖಂಡ ಒಮರ್ ಅಬ್ದುಲ್ಲಾ ಆರೋಪಿಸಿದ್ದಾರೆ.
‘ಈ ಮೈತ್ರಿ ನಿಯಂತ್ರಣದ ಸೂತ್ರವು ಬೇರೆ ಎಲ್ಲಿಯೋ ಇದೆ. ಅದರ ಅಣತಿ ಮತ್ತು ತಾಳಕ್ಕೆ ತಕ್ಕಂತೆ ಈ ಪಕ್ಷಗಳು ಕುಣಿಯುತ್ತಿವೆ’ ಎಂದು ಅಬ್ದುಲ್ಲಾ ಅವರು ಸೋಮವಾರ ಹೇಳಿದರು.
ಪುಲ್ವಾಮಾ ಜಿಲ್ಲೆಯಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ‘ಪಕ್ಷೇತರ ಸದಸ್ಯರಾಗಿ ಸ್ಪರ್ಧಿಸುತ್ತಿರುವ, ನಿಷೇಧಿತ ಜಮಾತೆ ಇ ಇಸ್ಲಾಮಿಯ ಮಾಜಿ ಸದಸ್ಯರ ಜೊತೆ ಎಐಪಿ ಮೈತ್ರಿ ಮಾಡಿಕೊಳ್ಳುತ್ತಿದೆ’ ಎಂಬ ವರದಿ ಕುರಿತ ಪ್ರಶ್ನೆಗೆ ಹೀಗೆ ಪ್ರತಿಕ್ರಿಯಿಸಿದರು.
‘ನ್ಯಾಷನಲ್ ಕಾನ್ಫರೆನ್ಸ್ ಪಕ್ಷ ಎದುರಿಸಲೆಂದೇ ಅವರನ್ನು ಕಣಕ್ಕಿಳಿಸಲಾಗುತ್ತಿದೆ. ಅದರಿಂದ ನಮಗೆ ಚಿಂತೆ ಇಲ್ಲ. ನಾವು ಎದುರಿಸುತ್ತೇವೆ‘ ಎಂದು ಅವರು ಹೇಳಿದರು.
‘ಶ್ರೀನಗರದಲ್ಲಿ ಪ್ರಧಾನಿ ಮೋದಿ ಅವರ ರ‍್ಯಾಲಿಗೆ 30 ಸಾವಿರ ಜನ ಸೇರಲಿದ್ದಾರೆ ಎಂಬ ಬಿಜೆಪಿ ಪ್ರತಿಪಾದನೆ ಕುರಿತ ಪ್ರಶ್ನೆಗೆ, ರ‍್ಯಾಲಿಗೆ ಜನರನ್ನು ಸೇರಿಸಬಹುದು. ಅದರರ್ಥ, ಆ ಎಲ್ಲವೂ ವೋಟುಗಳಾಗಿ ಪರಿವರ್ತನೆ ಆಗುತ್ತವೆ ಎಂದಲ್ಲ’ ಎಂದು ಹೇಳಿದರು.
‘ಪ್ರಧಾನಿ ಈ ಹಿಂದೆಯೇ ಸರ್ಕಾರಿ ನೌಕರರನ್ನು ಒಗ್ಗೂಡಿಸಿ ರ‍್ಯಾಲಿ ನಡೆಸಿದ್ದರು. ನನಗೆ ರ‍್ಯಾಲಿ ತೋರಿಸಬೇಡಿ. ಮತ ಎಷ್ಟಿದೆ ಎಂದು ತೋರಿಸಿ. ಬಿಜೆಪಿಯು ಕಾಶ್ಮೀರ ಕಣಿವೆಯಲ್ಲಿ ಕನಿಷ್ಠ ಒಂದು ಕ್ಷೇತ್ರವನ್ನಾದರೂ ಗೆಲ್ಲಲಿ. ನಂತರ ಇದರ ಬಗ್ಗೆ ಮಾತನಾಡೋಣ‘ ಎಂದರು.