ನವದೆಹಲಿ: ಎಂ–ಪಾಕ್ಸ್ ಪತ್ತೆ ಹಚ್ಚುವ ಆರ್‌ಟಿ-ಪಿಸಿಆರ್ ಕಿಟ್ ತಯಾರಿಕೆಗೆ ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಘಟನೆಯಿಂದ (ಸಿಡಿಎಸ್‌ಸಿಒ) ಅನುಮತಿ ಪಡೆದಿರುವುದಾಗಿ 'ಸೀಮೆನ್ಸ್ ಹೆಲ್ತಿನಿಯರ್ಸ್' ಕಂಪನಿ ತಿಳಿಸಿದೆ.
ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಕಿಟ್‌ಗೆ ದೊರೆತಿರುವ ಅನುಮೋದನೆಯು ಎಂ-ಪಾಕ್ಸ್ 'ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ' ವಿರುದ್ಧದ ಹೋರಾಟದಲ್ಲಿ ಮಹತ್ವದ ಪಾತ್ರವಹಿಸಲಿದೆ. ಕಿಟ್ ಅನ್ನು ಕಂಪನಿಯ ವಡೋದರ ಘಟಕದಲ್ಲಿ ತಯಾರಿಸಲಾಗುವುದು. ಈ ಘಟಕವು ವಾರ್ಷಿಕ 10 ಲಕ್ಷ ಕಿಟ್ ತಯಾರಿಸುವ ಸಾಮರ್ಥ್ಯ ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ.
ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆಯಿಂದ (ಐಸಿಎಂಆರ್) ಪ್ರಾಯೋಗಿಕವಾಗಿ ಮಾನ್ಯತೆ ಗಿಟ್ಟಿಸಿರುವ ಈ ಕಿಟ್ ಬಳಕೆಯಿಂದ 40 ನಿಮಿಷಗಳಲ್ಲೇ ಫಲಿತಾಂಶ ಬರಲಿದೆ. ಇದರಿಂದ ಶೀಘ್ರ ಚಿಕಿತ್ಸೆ, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಸಾಧ್ಯ ಎಂದು 'ಸೀಮೆನ್ಸ್ ಹೆಲ್ತಿನಿಯರ್ಸ್' ವ್ಯವಸ್ಥಾಪಕ ನಿರ್ದೇಶಕ ಹರಿಹರನ್ ಸುಬ್ರಮಣಿಯನ್ ಹೇಳಿದ್ದಾರೆ.
ವೈರಸ್‌ನ ಹೊಸ ರೂಪಾಂತರ ತಳಿ ಪತ್ತೆಯಾದ ಬಳಿಕ ಎಂ–ಪಾಕ್ಸ್ ಸೋಂಕನ್ನು ಜಾಗತಿಕ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಎಂದು ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯೂಎಚ್‌ಒ) ಘೋಷಿಸಿದೆ
ಎಂ–ಪಾಕ್ಸ್ ಅನ್ನು ಈ ಮೊದಲು 'ಮಂಕಿಪಾಕ್ಸ್' ಎನ್ನಲಾಗುತ್ತಿತ್ತು. ವರ್ಣಭೇದ ಹಾಗೂ ತಾರತಮ್ಯ ಧೋರಣೆಯ ಆರೋಪಗಳು ಕೇಳಿಬಂದ ಕಾರಣ ಡಬ್ಲ್ಯುಎಚ್‌ಒ 2022ರಲ್ಲಿ 'ಎಂಪಾಕ್ಸ್' ಎಂದು ಮರುನಾಮಕರಣ ಮಾಡಿದೆ.