ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ: ಗರ್ಭಿಣಿಯನ್ನು ಕೊಂದಿದ್ದ ಆರು ಮಂದಿಗೆ ಜೀವಾವಧಿ ಶಿಕ್ಷೆ

Published 14 ಡಿಸೆಂಬರ್ 2023, 15:41 IST
Last Updated 14 ಡಿಸೆಂಬರ್ 2023, 15:41 IST
ಅಕ್ಷರ ಗಾತ್ರ

ಜಲ್ನಾ(ಮಹಾರಾಷ್ಟ್ರ): 2020ರಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ 35 ವರ್ಷ ವಯಸ್ಸಿನ ಗರ್ಭಿಣಿಯನ್ನು ಕೊಂದಿದ್ದ ಪ್ರಕರಣದಲ್ಲಿ ನಾಲ್ವರು ಮಹಿಳೆಯರು ಸೇರಿದಂತೆ ಆರು ಮಂದಿಗೆ ಮಹಾರಾಷ್ಟ್ರದ ಜಲ್ನಾ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.

ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ವಿ.ಎಂ. ಮೋಹಿತೆ ಅವರು ಈ ತೀರ್ಪು ನೀಡಿದ್ದಾರೆ. ನ್ಯಾಯಾಲಯವು ಪ್ರತಿ ಅಪರಾಧಿಗೆ ₹1,000 ದಂಡ ವಿಧಿಸಿದೆ.

ಆರು ತಿಂಗಳ ಗರ್ಭಿಣಿಯಾಗಿದ್ದ ಹೀನಾ ಖಾನ್ ಎಂಬುವವರನ್ನು ಜಲ್ನಾ ನಗರದ ಕಾಜಿಪುರ ಪ್ರದೇಶದಲ್ಲಿ ಹತ್ಯೆ ಮಾಡಲಾಗಿತ್ತು. ಪ್ರಕರಣದಲ್ಲಿ ನಿಲೋಫರ್ ಜಾಫರ್ ಖಾನ್ (23), ನಸೀಮಾ ಜಾಫರ್ ಖಾನ್ (55), ಅರ್ಬಾಜ್ ಖಾನ್ ಜಾಫರ್ ಖಾನ್ (20), ಇಸ್ಮಾಯಿಲ್ ಅಹ್ಮದ್ ಶಾ (38), ಹಲೀಮಾ ಬಿ (60) ಮತ್ತು ಶಬಾನಾ ಶಾ (30) ಅಪರಾಧಿಗಳೆಂದು ನ್ಯಾಯಾಲಯವು ತೀರ್ಪು ನೀಡಿದ್ದು, ಜೀವಾವಧಿ ಶಿಕ್ಷೆ ವಿಧಿಸಿದೆ.

ಅಪರಾಧಿಗಳು ಹೀನಾ ಖಾನ್ ಅವರ ಮೊದಲ ಪತಿಯ ಸಂಬಂಧಿಕರು. ಕೆಲ ಆಸ್ತಿ ವಿಚಾರವಾಗಿ ಹೀನಾ ಜತೆ ಜಗಳ ಮಾಡಿಕೊಂಡಿದ್ದರು. ಆಗಸ್ಟ್ 9, 2020ರಂದು, ಆರು ಅಪರಾಧಿಗಳು ಹೀನಾ ಖಾನ್ ಅವರ ಎರಡನೇ ಪತಿ ಸಯ್ಯದ್ ಮಜಿದ್ ತಾಂಬೋಲಿ ಅವರ ನಿವಾಸಕ್ಕೆ ನುಗ್ಗಿ ಹೀನಾ ಮೇಲೆ ಕಬ್ಬಿಣದ ಸರಳುಗಳಿಂದ ಹಲ್ಲೆ ನಡೆಸಿದ್ದರು. ಈ ಸಂದರ್ಭ ಆಕೆ ಸ್ಥಳದಲ್ಲೇ ಸಾವಿಗೀಡಾಗಿದ್ದರು. ದಾಳಿಯಲ್ಲಿ ಪತಿ ತಾಂಬೋಲಿಗೂ ಗಾಯಗಳಾಗಿದ್ದವು ಎಂದು ಸರ್ಕಾರಿ ವಕೀಲ ಭರತ್ ಖಂಡೇಕರ್ ಹೇಳಿದ್ದಾರೆ..

ಪ್ರಕರಣ ಸಂಬಂಧ, ಆರು ಮಂದಿ ಹಲ್ಲೆಕೋರರ ವಿರುದ್ಧ ಇಲ್ಲಿನ ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿಚಾರಣೆಯ ಸಂದರ್ಭದಲ್ಲಿ, ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಸರ್ಕಾರಿ ವಕೀಲರು ಕೋರಿದ್ದರು. ಸಂತ್ರಸ್ತೆಯ ಪತಿ ತಾಂಬೋಲಿ, ವೈದ್ಯಾಧಿಕಾರಿ ಆರ್. ಬಿ. ಶೆಜುಲ್ ಮತ್ತು ತನಿಖಾಧಿಕಾರಿ ಶಿವಾಜಿ ನಾಗ್ವೆ ಪ್ರಕರಣದಲ್ಲಿ ಸಾಕ್ಷಿಗಳಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT