ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉಪವಾಸ ಸತ್ಯಾಗ್ರಹ ಮುಂದುವರಿಸಿರುವ ಸೋನಮ್‌ ವಾಂಗ್ಚುಕ್‌

Published : 2 ಅಕ್ಟೋಬರ್ 2024, 13:32 IST
Last Updated : 2 ಅಕ್ಟೋಬರ್ 2024, 13:32 IST
ಫಾಲೋ ಮಾಡಿ
Comments

ನವದೆಹಲಿ: ಲಡಾಖ್‌ನ ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್‌ ಮತ್ತು ಇತರ 150 ಪ್ರತಿಭಟನಕಾರರು ಬುಧವಾರ ಕೂಡ ಅನಿರ್ದಿಷ್ಟ ಉಪವಾಸವನ್ನು ಮುಂದುವರಿಸಿದ್ದಾರೆ.

‘ಶಾಂತಿ ಮತ್ತು ಪ್ರಜಾಪ್ರಭುತ್ವವನ್ನು ಸಂಕೇತಿಸುವ ಗಾಂಧಿ ಜಯಂತಿ ದಿನವೂ ತಮ್ಮ ಹಕ್ಕುಗಳು ದಮನಕ್ಕೆ ಒಳಗಾಗಿವೆ’ ಎಂದು ವಾಂಗ್ಚುಕ್‌ ಹೇಳಿದ್ದಾರೆ.

ಒಂದು ತಿಂಗಳ ಹಿಂದೆ ಲೆಹ್‌ನಿಂದ ಪ್ರಾರಂಭವಾದ ‘ದೆಹಲಿ ಚಲೋ ಪಾದಯಾತ್ರೆ’ಯನ್ನು ವಾಂಗ್ಚುಕ್‌ ಮುನ್ನಡೆಸುತ್ತಿದ್ದರು. ಸೋಮವಾರ ರಾತ್ರಿ ಅವರನ್ನು ಮತ್ತು ಅವರ ಬೆಂಬಲಿಗರನ್ನು ದೆಹಲಿಯ ಸಿಂಘು ಗಡಿಯಲ್ಲಿ ಪೊಲೀಸರು ವಶಕ್ಕೆ ಪಡೆದು, ವಿವಿಧ ಪೊಲೀಸ್ ಠಾಣೆಗಳಿಗೆ ಕರೆದೊಯ್ದಿದ್ದರು.

‘ನಾವು ಪಾದಯಾತ್ರಿಗಳು ಆತಂಕದ ಪರಿಸ್ಥಿತಿಯಲ್ಲಿದ್ದೇವೆ. ನಮ್ಮನ್ನು 24 ಗಂಟೆಗಳಿಗೂ ಹೆಚ್ಚು ಸಮಯದಿಂದ ಪೊಲೀಸ್‌ ವಶದಲ್ಲಿರಿಸಿಕೊಳ್ಳಲಾಗಿದೆ. ಇದು ಕಾನೂನುಬಾಹಿರ. ನಮ್ಮನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಬೇಕು’ ಎಂದು ಲೆಹ್‌ ಅಪೆಕ್ಸ್ ಬಾಡಿ (ಎಲ್‌ಎಬಿ) ಸಂಯೋಜಕ ಜಿಗ್ಮತ್ ಪಾಲ್ಜೋರ್ ಬುಧವಾರ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ನಮ್ಮ ಮೊಬೈಲ್‌ ಫೋನ್‌ಗಳನ್ನು ಬವಾನಾ ಪೊಲೀಸ್ ಠಾಣೆಯಲ್ಲಿ ಜಪ್ತಿ ಮಾಡಲಾಗಿದ್ದು, ಇದರಿಂದ ಹೊರ ಜಗತ್ತಿನ ಸಂಪರ್ಕ ಕಡಿತಗೊಂಡಿದೆ’ ಎಂದೂ ಪಾಲ್ಜೋರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ವಾಂಗ್ಚುಕ್‌ ಮತ್ತು ಇತರ ಲಡಾಖಿಗಳನ್ನು ಮಂಗಳವಾರ ರಾತ್ರಿ ಬಿಡುಗಡೆ ಮಾಡಲಾಗಿತ್ತು. ಆದರೆ, ಅವರು ದೆಹಲಿಯ ಕೇಂದ್ರ ಭಾಗದ ಕಡೆಗೆ ಮೆರವಣಿಗೆ ಹೊರಡಲು ಸಿದ್ಧರಾಗಿದ್ದರು. ಹಾಗಾಗಿ, ಅವರನ್ನು ಮತ್ತೆ ವಶಕ್ಕೆ ಪಡೆಯಲಾಯಿತು’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ‘ಪಿಟಿಐ’ಗೆ ತಿಳಿಸಿದ್ದಾರೆ.

ವಾಂಗ್ಚುಕ್‌ ಅವರನ್ನು ಬವಾನಾ ಪೊಲೀಸ್ ಠಾಣೆಯಲ್ಲಿ ಇತರರನ್ನು ನರೇಲಾ ಕೈಗಾರಿಕಾ ಪ್ರದೇಶ, ಅಲಿಪುರ್ ಹಾಗೂ ಕಾಂಝವಾಲಾ ಪೊಲೀಸ್ ಠಾಣೆಗಳಲ್ಲಿ ಇರಿಸಲಾಗಿದೆ ಎಂದು ಅವರು ಹೇಳಿದರು.

ಲಡಾಖ್‌ಗೆ ರಾಜ್ಯದ ಸ್ಥಾನದ ನೀಡುವಂತೆ, ಅದನ್ನು ಸಂವಿಧಾನದ ಆರನೇ ಪರಿಚ್ಛೇದಕ್ಕೆ ಸೇರಿಸುವಂತೆ ಒತ್ತಾಯಿಸಿ ನಾಲ್ಕು ವರ್ಷಗಳಿಂದ ಆಂದೋಲನ ನಡೆಸುತ್ತಿರುವ ಕಾರ್ಗಿಲ್ ಡೆಮಾಕ್ರಟಿಕ್ ಅಲಯನ್ಸ್ (ಕೆಡಿಎ) ಜೊತೆಗೆ ಲೆಹ್ ಅಪೆಕ್ಸ್ ಬಾಡಿ (ಎಲ್‌ಎಬಿ) ಈ ಪಾದಯಾತ್ರೆಯನ್ನು ಆಯೋಜಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT