ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಲ್ಲೆ, ಡಕಾಯಿತಿ ಪ್ರಕರಣ: ಆಜಂ ಖಾನ್‌ಗೆ 10 ವರ್ಷ ಶಿಕ್ಷೆ

Published 30 ಮೇ 2024, 15:36 IST
Last Updated 30 ಮೇ 2024, 15:36 IST
ಅಕ್ಷರ ಗಾತ್ರ

ಲಖನೌ: ಸಮಾಜವಾದಿ ಪಕ್ಷದ (ಎಸ್‌ಪಿ) ಹಿರಿಯ ನಾಯಕ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಆಜಂ ಖಾನ್‌ ಅವರಿಗೆ 2016ರಲ್ಲಿ ದಾಖಲಾಗಿದ್ದ ಹಲ್ಲೆ, ಡಕಾಯಿತಿ ಮತ್ತು ಇತರ ಪ್ರಕರಣಗಳಲ್ಲಿ ಉತ್ತರಪ್ರದೇಶದ ರಾಂಪುರ ಪಟ್ಟಣದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಗುರುವಾರ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಖಾನ್‌ ಅವರ ಸಹಾಯಕ ಮತ್ತು ಗುತ್ತಿಗೆದಾರ ಬರ್ಕತ್ ಅಲಿ ಅವರಿಗೂ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಸದ್ಯ ಸೀತಾಪುರ ಜಿಲ್ಲಾ ಕಾರಾಗೃಹದಲ್ಲಿರುವ ಖಾನ್‌ ಅವರಿಗೆ ನ್ಯಾಯಾಲಯವು ₹14 ಲಕ್ಷ ದಂಡವನ್ನು ವಿಧಿಸಿದೆ. ಖಾನ್‌ ಅವರು ವಿಡಿಯೊ ಕಾನ್ಫರೆನ್ಸ್‌ ಮೂಲಕ ನ್ಯಾಯಾಲಯಕ್ಕೆ ಹಾಜರಾಗಿದ್ದರು.

ಪ್ರಾಸಿಕ್ಯೂಷನ್ ಪ್ರಕಾರ, ಆಜಂ ಖಾನ್ ಅವರ ನಿರ್ದೇಶನದ ಮೇರೆಗೆ ಬರ್ಕತ್ ಅಲಿ ಮತ್ತು ಇತರರು 2016ರಲ್ಲಿ ರಾಂಪುರ ಪಟ್ಟಣದ ಡುಂಗರ್‌ಪುರ್ ಬಸ್ತಿ ನಿವಾಸಿಗಳ ಮನೆಗಳಿಗೆ ನುಗ್ಗಿ ಅವರ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ಅವರನ್ನು ಮನೆಗಳಿಂದ ಹೊರಹಾಕಿದ್ದರು. ನಿವಾಸಿಗಳ ಮನೆಗಳಿಂದ ಬೆಲೆಬಾಳುವ ವಸ್ತುಗಳನ್ನು ಸಹ ದೋಚಿಕೊಂಡು ಹೋಗಿದ್ದರು.

2019ರಲ್ಲಿ ಈ ಸಂಬಂಧ ಖಾನ್ ಮತ್ತು ಅವರ ಸಹಚರರ ವಿರುದ್ಧ ಒಟ್ಟು 12 ಪ್ರಕರಣಗಳು ದಾಖಲಾಗಿದ್ದವು. ಮೂಲಗಳ ಪ್ರಕಾರ, ಆಜಂ ಖಾನ್ ವಿರುದ್ಧ ಪ್ರಸ್ತುತ 80 ಕ್ರಿಮಿನಲ್ ಪ್ರಕರಣಗಳು ವಿಚಾರಣೆಗೆ ಬಾಕಿ ಉಳಿದಿವೆ.

ಹತ್ತಾರು ಪ್ರಕರಣಗಳಲ್ಲಿ ವಿಚಾರಣೆ ಎದುರಿಸಿರುವ ಆಜಂ ಖಾನ್, ಈ ಹಿಂದೆ ಡುಂಗರ್‌ಪುರ ಬಸ್ತಿ ತೆರವಿಗೆ ಸಂಬಂಧಿಸಿದ ಪ್ರಕರಣಗಳ ಪೈಕಿ ಒಂದು ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿದ್ದು, ಎಂಟು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಕೆಲವು ತಿಂಗಳ ಹಿಂದೆ ಖಾನ್‌ ಅವರಿಗೆ ಅವರ ಮಗ ಅಬ್ದುಲ್ಲಾ ಆಜಂಗೆ ನಕಲಿ ಜನನ ಪ್ರಮಾಣಪತ್ರ ಕೊಡಿಸಿದ ಪ್ರಕರಣದಲ್ಲಿ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಅಲ್ಲದೆ, ಈ ಪ್ರಕರಣದಲ್ಲಿ ಖಾನ್‌ ಅವರ ಪತ್ನಿ ತಂಝೀನ್ ಫಾತಿಮಾ ಮತ್ತು ಮಗ ಅಬ್ದುಲ್ಲಾ ಆಜಂಗೂ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

ನ್ಯಾಯಾಲಯದ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿರುವ ಸಮಾಜವಾದಿ ಪಕ್ಷದ ನಾಯಕರು, ‘ಬಿಜೆಪಿಯ ಕೃಪಾಪೋಷಿತರಾಗಿ ಕೆಲವು ಅಧಿಕಾರಿಗಳು ಆಜಂ ಖಾನ್ ವಿರುದ್ಧ ಸಂಚು ರೂಪಿಸಿದ್ದಾರೆ. ಆಜಂ ಖಾನ್ ಮತ್ತು ಅವರ ಕುಟುಂಬವನ್ನು ಗುರಿಯಾಗಿಸಲಾಗುತ್ತಿದೆ. ಇದು ಸಮಾಜದ ಒಂದು ವರ್ಗವನ್ನು ಭಯಭೀತಗೊಳಿಸುವ ಭಾರಿ ಹುನ್ನಾರದ ಭಾಗವಾಗಿದೆ’ ಎಂದು ಹೇಳಿದ್ದಾರೆ.

ದ್ವೇಷ ಭಾಷಣ ಆರೋಪ ಪ್ರಕರಣದಲ್ಲಿ ಮೂರು ವರ್ಷಗಳ ಶಿಕ್ಷೆಗೆ ಗುರಿಯಾದ ನಂತರ ಆಜಂ ಖಾನ್‌ ಅವರು 2022ರಲ್ಲಿ ಉತ್ತರ ಪ್ರದೇಶ ವಿಧಾನಸಭೆ ಸದಸ್ಯತ್ವವನ್ನು ಕಳೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT