ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಗೆ ಬೇಕಾದವರಿಗೆ ಮಾತ್ರ ಮೀಸಲಾತಿ ಸಲ್ಲದು: ಸುಪ್ರೀಂ ಕೋರ್ಟ್

Published 8 ಫೆಬ್ರುವರಿ 2024, 19:30 IST
Last Updated 8 ಫೆಬ್ರುವರಿ 2024, 19:30 IST
ಅಕ್ಷರ ಗಾತ್ರ

ನವದೆಹಲಿ: ಒಳಮೀಸಲು ಕಲ್ಪಿಸುವ ಉದ್ದೇಶದಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಪಟ್ಟಿಯಲ್ಲಿ ಉಪ ವರ್ಗೀಕರಣ ತರುವ ಅಧಿಕಾರವು ರಾಜ್ಯಗಳಿಗೆ ಇದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸುತ್ತಿರುವ ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠವು, ‘ಹಿಂದುಳಿದ ಜಾತಿಗಳಿಗೆ ಮೀಸಲಾತಿಯನ್ನು ಕಲ್ಪಿಸುವಾಗ ರಾಜ್ಯ ಸರ್ಕಾರಗಳು ತಮಗೆ ಬೇಕಾದ ಜಾತಿಗಳಿಗೆ ಮಾತ್ರ ಅದನ್ನು ನೀಡುವಂತಿಲ್ಲ’ ಎಂದು ಹೇಳಿದೆ.

ಈ ರೀತಿ ಮಾಡಲು ಅವಕಾಶ ನೀಡಿದರೆ, ಓಲೈಕೆಯ ಅಪಾಯಕಾರಿ ಪ್ರವೃತ್ತಿಗೆ ದಾರಿ ಮಾಡಿಕೊಟ್ಟಂತಾಗುತ್ತದೆ ಎಂದು ಪೀಠವು ಆತಂಕ ವ್ಯಕ್ತಪಡಿಸಿದೆ. ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್ ನೇತೃತ್ವದ ಏಳು ನ್ಯಾಯಮೂರ್ತಿಗಳ ಪೀಠವು ಈ ಆತಂಕ ವ್ಯಕ್ತಪಡಿಸಿದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮತ್ತು ಇತರರ ವಾದವನ್ನು ಆಲಿಸಿದ ಪೀಠವು ತೀರ್ಪನ್ನು ಕಾಯ್ದಿರಿಸಿದೆ. ಮೀಸಲಾತಿಯನ್ನು ಕಲ್ಪಿಸಿ ಸಾಮಾಜಿಕ ಹಿಂದುಳಿದಿರುವಿಕೆಯನ್ನು ನಿವಾರಿಸುವುದು ರಾಜ್ಯದ ಹೊಣೆ. ಈ ಹೊಣೆಯನ್ನು ನಿಭಾಯಿಸುವಾಗ ನಿರ್ದಿಷ್ಟ ವರ್ಗವೊಂದು ಅನುಭವಿಸುತ್ತಿರುವ ಅಸಮಾನತೆಯನ್ನು ನಿವಾರಿಸಲು ಸರ್ಕಾರ ಬಯಸಿದರೆ ಆ ಕೆಲಸ ಮಾಡಲು ಅಡ್ಡಿಯಿಲ್ಲ ಎಂದು ಪೀಠವು ಹೇಳಿದೆ.

ಉಪ ವರ್ಗೀಕರಣದಿಂದಾಗಿ ಜಾತಿ ಒಳಗಿನ ಒಂದು ಗುಂಪಿಗೆ ಮೇಲೆ ಬರಲು ಸಾಧ್ಯವಾಗುತ್ತದೆ. ಇದಿಲ್ಲದಿದ್ದರೆ ಒಂದು ವರ್ಗ ಮಾತ್ರ ಪ್ರಯೋಜನ ಪಡೆಯುತ್ತ ಇರುತ್ತದೆ ಎಂದು ಕೋರ್ಟ್ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT