ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ಪ್ರಚಾರಕ್ಕೆ ಯೋಧರು: ಮಲ್ಲಿಕಾರ್ಜುನ ಖರ್ಗೆ ಟೀಕೆ

Published 22 ಅಕ್ಟೋಬರ್ 2023, 15:58 IST
Last Updated 22 ಅಕ್ಟೋಬರ್ 2023, 15:58 IST
ಅಕ್ಷರ ಗಾತ್ರ

ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಅಧಿಕಾರಿಗಳನ್ನು ಹಾಗೂ ಯೋಧರನ್ನು ಆಡಳಿತಾರೂಢ ಬಿಜೆಪಿಯ ರಾಜಕೀಯ ಕಾರ್ಯಕರ್ತರನ್ನಾಗಿ, ಮಾರುಕಟ್ಟೆ ಏಜೆಂಟರಂತೆ ಬಳಸಿಕೊಳ್ಳಲು ಮುಂದಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾನುವಾರ ಟೀಕಿಸಿದ್ದಾರೆ.

ಐದು ರಾಜ್ಯಗಳ ವಿಧಾನಸಭೆಗೆ ಮತ್ತು ಲೋಕಸಭೆಗೆ ಚುನಾವಣೆ ಹತ್ತಿರವಾಗುತ್ತಿರುವ ಹೊತ್ತಿನಲ್ಲಿ ಇಡೀ ಆಡಳಿತ ವ್ಯವಸ್ಥೆಯು ‘ಪ್ರಚಾರಕ’ರಂತೆ ಕೆಲಸ ಮಾಡುತ್ತಿದೆ ಎಂದು ಅವರು ದೂರಿದ್ದಾರೆ.

ಹಿರಿಯ ಅಧಿಕಾರಿಗಳನ್ನು ಜಿಲ್ಲೆಗಳ ಮಟ್ಟದಲ್ಲಿ ‘ರಥ ಪ್ರಭಾರಿ’ಗಳನ್ನಾಗಿ ಬಳಸಿಕೊಳ್ಳಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಹಿರಿಯ ಅಧಿಕಾರಿಗಳು ಕಳೆದ ಒಂಬತ್ತು ವರ್ಷಗಳಲ್ಲಿ ಸರ್ಕಾರ ಸಾಧಿಸಿರುವುದನ್ನು ಜನರಿಗೆ ತಿಳಿಸಬೇಕಿದೆ. ವಾರ್ಷಿಕ ರಜೆಯಲ್ಲಿ ಇರುವ ಯೋಧರು ಸರ್ಕಾರದ ಯೋಜನೆಗಳನ್ನು ಪ್ರಚುರಪಡಿಸಬೇಕಿದೆ. ಸರ್ಕಾರದ ಈ ನಡೆಯನ್ನು ಕಟುವಾಗಿ ಟೀಕಿಸಿ, ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

‘ಸರ್ಕಾರಿ ಅಧಿಕಾರಗಳು ಮತ್ತು ಯೋಧರ ವಿಚಾರವಾಗಿ ಹೇಳುವುದಾದರೆ, ಸರ್ಕಾರಿ ಯಂತ್ರವನ್ನು ರಾಜಕಾರಣದಿಂದ ಹೊರಗೆ ಇರಿಸಬೇಕಿರುವುದು ಬಹಳ ಅಗತ್ಯ. ಅದರಲ್ಲೂ ಮುಖ್ಯವಾಗಿ, ಚುನಾವಣೆ ಹತ್ತಿರವಿರುವಾಗ ಈ ಕೆಲಸ ಆಗಲೇಬೇಕು’ ಎಂದು ಅವರು ಹೇಳಿದ್ದಾರೆ.

ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆ ಮತ್ತು ಸಿಬಿಐ, ಬಿಜೆಪಿಯ ಚುನಾವಣಾ ಇಲಾಖೆಯ ರೀತಿಯಲ್ಲಿ ಈಗಾಗಲೇ ವರ್ತಿಸುತ್ತಿರುವಾಗ ‘ಇಡೀ ಸರ್ಕಾರಿ ಯಂತ್ರವನ್ನು ಆಡಳಿತಾರೂಢ ಬಿಜೆಪಿಯ ಏಜೆಂಟರಂತೆ ಬಳಸಿಕೊಳ್ಳಲಾಗುತ್ತಿದೆ’ ಎಂದು ಖರ್ಗೆ ದೂರಿದ್ದಾರೆ.

‘ಎಲ್ಲ ಸಂಸ್ಥೆಗಳು, ಏಜೆನ್ಸಿಗಳು, ವಿಭಾಗಗಳು ಮತ್ತು ಇಲಾಖೆಗಳು ಈಗ ಅಧಿಕೃತವಾಗಿ ಪ್ರಚಾರಕರಾಗಿವೆ’ ಎಂದು ಖರ್ಗೆ ಅವರು ಪತ್ರದಲ್ಲಿ ಲೇವಡಿ ಮಾಡಿದ್ದಾರೆ. ಅಧಿಕಾರಿಗಳು ಮತ್ತು ಯೋಧರಿಗೆ ನೀಡಿರುವ ಸೂಚನೆಯನ್ನು ಹಿಂಪಡೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ.

765 ಜಿಲ್ಲೆಗಳಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಸಮನ್ವಯಕ್ಕೆ ಜಂಟಿ ಕಾರ್ಯದರ್ಶಿ, ನಿರ್ದೇಶಕ ಮತ್ತು ಉಪ ಕಾರ್ಯದರ್ಶಿ ಶ್ರೇಣಿಯ ಅಧಿಕಾರಿಗಳನ್ನು ‘ರಥ ಪ್ರಭಾರಿ’ಗಳನ್ನಾಗಿ ನೇಮಿಸಲು ಹೊರಡಿಸಿರುವ ಸೂಚನೆಯು ಸೇವಾ ನಿಯಮಗಳ ಸ್ಪಷ್ಟ ಉಲ್ಲಂಘನೆ ಎಂದು ಖರ್ಗೆ ವಿವರಿಸಿದ್ದಾರೆ. ಯಾವುದೇ ಸರ್ಕಾರಿ ನೌಕರ ಯಾವುದೇ ರಾಜಕೀಯ ಚಟುವಟಿಕೆಯಲ್ಲಿ ಭಾಗಿಯಾಗುವಂತೆ ಇಲ್ಲ ಎಂದು ನಿಯಮಗಳು ಹೇಳುತ್ತವೆ.

‘ಸರ್ಕಾರಿ ಅಧಿಕಾರಿಗಳು ಮಾಹಿತಿ ಹಂಚುವ ಕೆಲಸ ಮಾಡಬೇಕು ಎಂಬುದು ಒಪ್ಪತಕ್ಕದ್ದು. ಆದರೆ ಅವರು ಸಾಧನೆಗಳನ್ನು ಪ್ರಚುರಪಡಿಸುವ ಕೆಲಸ ಮಾಡಬೇಕು ಎಂಬ ಸೂಚನೆಯು, ಅವರನ್ನು ಆಡಳಿತ ಪಕ್ಷದ ಕಾರ್ಯಕರ್ತರನ್ನಾಗಿಸುವ ಕೆಲಸ. ಕಳೆದ ಒಂಬತ್ತು ವರ್ಷಗಳ ಸಾಧನೆಯನ್ನು ಮಾತ್ರ ಪರಿಗಣಿಸಲಾಗುತ್ತಿದೆ ಎಂಬ ಸಂಗತಿಯು, ಇದು ಬಹಳ ಸ್ಪಷ್ಟವಾದ ರಾಜಕೀಯ ಆದೇಶ ಎಂಬುದನ್ನು ತಿಳಿಸುತ್ತಿದೆ. ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಹಾಗೂ ಲೋಕಸಭಾ ಚುನಾವಣೆಗೆ ಮೊದಲು ಹೀಗೆ ಮಾಡಲಾಗಿದೆ’ ಎಂದು ಖರ್ಗೆ ಹೇಳಿದ್ದಾರೆ.

ಇಂದಿನ ಸರ್ಕಾರದ ಕೆಲಸಗಳ ಪ್ರಚಾರ ಕೆಲಸಕ್ಕೆ ಸರ್ಕಾರದ ಹಿರಿಯ ಅಧಿಕಾರಿಗಳನ್ನು ನಿಯೋಜಿಸಿದಲ್ಲಿ ದೇಶದ ಆಡಳಿತವು ಮುಂದಿನ ಆರು ತಿಂಗಳವರೆಗೆ ಸ್ಥಗಿತಗೊಳ್ಳಲಿದೆ ಎಂದು ಎಚ್ಚರಿಸಿದ್ದಾರೆ.

ವಾರ್ಷಿಕ ರಜೆಯಲ್ಲಿ ಇರುವ ಯೋಧರು ತಮ್ಮ ಸಮಯವನ್ನು ಸರ್ಕಾರದ ಯೋಜನೆಗಳನ್ನು ಪ್ರಚುರಪಡಿಸಲು ಬಳಸಿಕೊಳ್ಳಬೇಕು ಎಂದ ರಕ್ಷಣಾ ಸಚಿವಾಲಯವು ಅಕ್ಟೋಬರ್ 9ರಂದು ಆದೇಶ ಹೊರಡಿಸಿದೆ. ‘ಯೋಧರ ರಜೆಯನ್ನು ರಾಜಕೀಯ ಉದ್ದೇಶಗಳಿಗೆ ಬಳಸಿಕೊಳ್ಳಬಾರದು. ತಿಂಗಳುಗಳ ಕಾಲ ಅಥವಾ ವರ್ಷಗಳ ಕಾಲ ಕಷ್ಟದ ಕೆಲಸ ಮಾಡಿದ ಯೋಧರಿಗೆ ತಮ್ಮ ರಜೆಯನ್ನು ಕುಟುಂಬದ ಸದಸ್ಯರ ಜೊತೆ ಕಳೆಯಲು ಪೂರ್ತಿಯಾಗಿ ಸ್ವಾತಂತ್ರ್ಯ ಇರಬೇಕು’ ಎಂದು ಖರ್ಗೆ ಆಗ್ರಹಿಸಿದ್ದಾರೆ.

ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸಶಸ್ತ್ರ ಪಡೆಗಳನ್ನು ಯಾವತ್ತಿಗೂ ರಾಜಕಾರಣದಿಂದ ದೂರ ಇರಿಸಬೇಕು. ಯೋಧರ ನಿಷ್ಠೆಯು ಯಾವತ್ತಿಗೂ ದೇಶ ಮತ್ತು ಸಂವಿಧಾನಕ್ಕೆ ಆಗಿರಬೇಕು ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT