ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗಂಗಾನದಿ ಸೇತುವೆ ಕುಸಿದ ಪ್ರಕರಣ| ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ: ನಿತೀಶ್‌ ಕುಮಾರ್‌

Published : 5 ಜೂನ್ 2023, 14:23 IST
Last Updated : 5 ಜೂನ್ 2023, 14:23 IST
ಫಾಲೋ ಮಾಡಿ
Comments

ಪಟ್ನಾ (ಪಿಟಿಐ): ಬಿಹಾರದಲ್ಲಿ ಗಂಗಾನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿದ್ದ ನಾಲ್ಕು ಪಥಗಳ ಬೃಹತ್‌ ಸೇತುವೆ ಕುಸಿದ ಮರು ದಿನವೇ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು, ಈ ಘಟನೆಯಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸೋಮವಾರ ಹೇಳಿದ್ದಾರೆ.

‘ಈ ಸೇತುವೆಯನ್ನು ಸರಿಯಾಗಿ ನಿರ್ಮಿಸಿಲ್ಲ. ಹಾಗಾಗಿಯೇ 2022ರ ಏಪ್ರಿಲ್‌ನಿಂದ ಈವರೆಗೆ ಎರಡು ಬಾರಿ ಸೇತುವೆ ಕುಸಿದಿದೆ. ಇದು ತುಂಬಾ ಗಂಭೀರ ವಿಷಯ. ಸಂಬಂಧಿಸಿದ ಇಲಾಖೆಯು ಈ ಬಗ್ಗೆ ಈಗಾಗಲೇ ತನಿಖೆ ನಡೆಸುತ್ತಿದೆ. ತಪ್ಪಿಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ನಿತೀಶ್ ಅವರು ಸುದ್ದಿಗಾರರಿಗೆ ತಿಳಿಸಿದರು.

ಭಾನುವಾರ ಕುಸಿದ ಸೇತುವೆ, ಕಳೆದ ವರ್ಷವೂ ಒಮ್ಮೆ ಕುಸಿದಿತ್ತು ಎಂದಿರುವ ನಿತೀಶ್‌ ಕುಮಾರ್‌, 2014ರಲ್ಲಿ ಶುರುವಾದ ಸೇತುವೆ ನಿರ್ಮಾಣದ ಕಾಮಗಾರಿ ಇದುವರೆಗೂ ಯಾಕಾಗಿ ಪೂರ್ಣಗೊಂಡಿಲ್ಲ ಎಂದು ಪ್ರಶ್ನಿಸಿದ್ದಾರೆ.

‘ಸೇತುವೆಯ ಕಾಮಗಾರಿ ಕಾಲಮಿತಿಯಲ್ಲಿ ಯಾಕಾಗಿ ಮುಗಿಯದೇ ವಿಳಂಬದಲ್ಲಿ ಸಾಗಿತ್ತು ಎನ್ನುವ ಬಗ್ಗೆಯೂ ತನಿಖೆ ನಡೆಸಲು ಸಂಬಂಧಿಸಿದ ಇಲಾಖೆಗೆ ಸೂಚಿಸಲಾಗಿದೆ. ಈ ಬಗ್ಗೆ ಉಪಮುಖ್ಯಮಂತ್ರಿ ನಿಗಾ ವಹಿಸಿದ್ದಾರೆ’ ಎಂದು  ತಿಳಿಸಿದರು.

ಘಟನೆ ನಡೆದ ತಕ್ಷಣ ಭಾನುವಾರ ಪ್ರತಿಕ್ರಿಯಿಸಿದ್ದ, ರಸ್ತೆ ನಿರ್ಮಾಣ ಇಲಾಖೆಯ ಖಾತೆ ಹೊಂದಿರುವ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್‌ ಅವರು ‘ದೋಷಪೂರಿತ ನಿರ್ಮಾಣ ಹಂತದ ಸೇತುವೆ ತೆರವುಗೊಳಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ’ ಎಂದು ಹೇಳಿದ್ದರು. 

ಎರಡು ಬಾರಿ ಕುಸಿದ ಸೇತುವೆ: 

14 ತಿಂಗಳ ಅವಧಿಯಲ್ಲಿ ಈ ಸೇತುವೆ ಎರಡು ಬಾರಿ ಕುಸಿದಿದ್ದು, ಮೊದಲ ಬಾರಿಗೆ ಭಾಗಲ್ಪುರದ ಸುಲ್ತಾನ್‌ಗಂಜ್‌ ಬದಿಯಲ್ಲಿ 2022ರ ಏಪ್ರಿಲ್‌ನಲ್ಲಿ ಎರಡು ತುಂಡಾಗಿ ಬಿದ್ದಿತ್ತು. ಈಗ ಎರಡನೇ ಬಾರಿಗೆ ಭಾನುವಾರ ಸಂಜೆ ಖಗಾಡಿಯಾ ಬದಿಯಲ್ಲಿ ಕುಸಿದು ಬಿದ್ದಿದೆ. 

ಮೂರು ಪಿಲ್ಲರ್‌ಗಳ ಮೇಲೆ ಇರಿಸಲಾಗಿದ್ದ 30 ಸ್ಲಾಬ್‌ಗಳ ಸಮೇತ ನಿರ್ಮಾಣ ಹಂತದ ಸೇತುವೆ ನದಿಗೆ ಕುಸಿದು ಬಿದ್ದಿದೆ. ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.

ಸುಲ್ತಾನ್‍ಗಂಜ್- ಆಗುಣಿ ಘಾಟ್ ನಡುವೆ ಗಂಗಾನದಿಗೆ 3.16 ಕಿ.ಮೀ ಉದ್ದನೆಯ ನಾಲ್ಕು ಪಥಗಳ ಸೇತುವೆಯನ್ನು ಸುಮಾರು ₹1,700 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿತ್ತು. ಹರಿಯಾಣ ಮೂಲದ ಗುತ್ತಿಗೆದಾರರು ಈ ಸೇತುವೆ ನಿರ್ಮಿಸುತ್ತಿದ್ದಾರೆ. 

ಸುಲ್ತಾನ್‌ಗಂಜ್ ಮತ್ತು ಖಗಾಡಿಯಾ ಜಿಲ್ಲೆಗಳನ್ನು ಸಂಪರ್ಕಿಸುವ ಈ ಸೇತುವೆಯ ನಿರ್ಮಾಣವನ್ನು 2014ರಲ್ಲಿ ಆರಂಭಿಸಲಾಗಿತ್ತು. ಉತ್ತರ ಬಿಹಾರ ಮತ್ತು ದಕ್ಷಿಣ ಬಿಹಾರವನ್ನು ಬೆಸೆಯುವ, ಗಂಗಾನದಿಗೆ ನಿರ್ಮಿಸುತ್ತಿದ್ದ ಆರನೇ ಸೇತುವೆ ಇದಾಗಿದ್ದು, ಸುಲ್ತಾನ್‌ಗಂಜ್‌, ಖಗಾಡಿಯಾ, ಸಹಾರ್ಸಾ, ಮಾಧೇಪುರ ಮತ್ತು ಸುಪಾನ್‌ಗೆ ಪ್ರಯಾಣಿಸುವ ಸಮಯವನ್ನು ಈ ಸೇತುವೆ ತಗ್ಗಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT