ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದೆಹಲಿ ಸಿಎಂ ಸ್ಥಾನದಿಂದ ಕೇಜ್ರಿವಾಲ್ ವಜಾ ಕೋರಿದ್ದ ಅರ್ಜಿ ವಜಾ

Published 13 ಮೇ 2024, 9:43 IST
Last Updated 13 ಮೇ 2024, 9:43 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣ ಸಂಬಂಧಿತ ಹಣ ಅಕ್ರಮ ವರ್ಗಾವಣೆ ಪ್ರಕರಣದದಲ್ಲಿ ಬಂಧನವಾಗಿದ್ದ ಹಿನ್ನೆಲೆಯಲ್ಲಿ ದೆಹಲಿ ಮುಖ್ಯಮಂತ್ರಿ ಸ್ಥಾನದಿಂದ ಅರವಿಂದ ಕೇಜ್ರಿವಾಲ್ ಅವರನ್ನು ವಜಾ ಮಾಡಲು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ.

ಅಂತಹ ವಿಷಯಗಳಿಗೆ ನ್ಯಾಯಾಲಯ ಕೈಹಾಕುವುದಿಲ್ಲ. ಅದು ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅವರಿಗೆ ಬಿಟ್ಟ ವಿಚಾರ. ಅವರೇ ಆ ಬಗ್ಗೆ ಪರಿಶೀಲನೆ ನಡೆಸಬೇಕಿದೆ ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರನ್ನೊಳಗೊಂಡ ವಿಭಾಗೀಯ ಪೀಠ ಹೇಳಿದೆ.

‘ಈ ವಿಚಾರಗಳ ಬಗ್ಗೆ ನಾವು ಹೇಗೆ ನಿರ್ಧಾರ ಕೈಗೊಳ್ಳಲು ಸಾಧ್ಯ? ಬೇಕಿದ್ದರೆ ಲೆಫ್ಟಿನೆಂಟ್ ಗವರ್ನರ್ ಕ್ರಮ ಕೈಗೊಳ್ಳಲಿ.. ಆದರೆ, ಅಲ್ಲಿ ಕಾನೂನಿನ ಅನ್ವಯ ಯಾವುದೇ ಹಕ್ಕು ಇಲ್ಲ’ಎಂದು ಪೀಠ ಹೇಳಿದೆ.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೇ 10ರಂದು ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದ್ದ ಸುಪ್ರೀಂ ಕೋರ್ಟ್, ಮುಖ್ಯಮಂತ್ರಿಯಾಗಿ ಅಧಿಕಾರ ಚಲಾಯಿಸುವಂತಿಲ್ಲ. ಅಧಿಕೃತ ಕಡತಗಳಿಗೆ ಸಹಿ ಮಾಡುವಂತಿಲ್ಲ ಎಂದು ಸೂಚಿಸಿತ್ತು.

ಕೇಜ್ರಿವಾಲ್ ಅವರನ್ನು ಸಿಎಂ ಹುದ್ದೆಯಿಂದ ವಜಾಗೊಳಿಸಲು ಕೋರಿದ್ದ ಮನವಿಯನ್ನು ತಿರಸ್ಕರಿಸಿದ್ದ ದೆಹಲಿ ಹೈಕೋರ್ಟ್, ನ್ಯಾಯಾಲಯವನ್ನು ರಾಜಕೀಯದ ಅಂಗಳಕ್ಕೆ ಎಳೆಯುವ ಪ್ರಯತ್ನ ಇದಾಗಿದೆ ಎಂದು ಹೇಳಿತ್ತು.

ಲೋಕಸಭಾ ಚುನಾವಣಾ ದಿನಾಂಕ ಘೋಷಣೆಯಾದ ಕೆಲ ದಿನಗಳ ಬಳಿಕ ಮಾರ್ಚ್ 21ರಂದು ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯ(ಇ.ಡಿ) ಬಂಧಿಸಿತ್ತು. 50 ದಿನಗಳ ಜೈಲುವಾಸದ ಬಳಿಕ ಶುಕ್ರವಾರ(ಮಾರ್ಚ್ 10) ಕೇಜ್ರಿವಾಲ್ ಜೈಲಿನಿಂದ ಬಿಡುಗಡೆ ಆಗಿದ್ದರು.

ದೆಹಲಿಯ 7 ಲೋಕಸಭಾ ಕ್ಷೇತ್ರಗಳಿಗೆ ಇದೇ 25ರಂದು ಚುನಾವಣೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT