ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿದ್ಯಾರ್ಥಿನಿ ಅತ್ಯಾಚಾರ-ಕೊಲೆ: ಸುಪ್ರೀಂ ಕೋರ್ಟ್‌ನಿಂದ ಸ್ವಯಂಪ್ರೇರಿತ ದೂರು

Published 18 ಆಗಸ್ಟ್ 2024, 13:16 IST
Last Updated 18 ಆಗಸ್ಟ್ 2024, 13:16 IST
ಅಕ್ಷರ ಗಾತ್ರ

ನವದೆಹಲಿ: ಕೋಲ್ಕತ್ತದ ಆರ್‌.ಜಿ.ಕರ್ ಆಸ್ಪತ್ರೆಯಲ್ಲಿ ನಡೆದ ವೈದ್ಯಕೀಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್‌ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದು, ವಿಚಾರಣೆಯನ್ನು ಆಗಸ್ಟ್ 20ಕ್ಕೆ ನಿಗದಿಪಡಿಸಿದೆ.

ಸುಪ್ರೀಂ ಕೋರ್ಟ್‌ ವೆಬ್‌ಸೈಟ್‌ನಲ್ಲಿ ನೀಡಿರುವ ಮಾಹಿತಿ ಪ್ರಕಾರ, ‘ಆರ್‌.ಜಿ.ಕರ್ ಆಸ್ಪತ್ರೆಯಲ್ಲಿ ನಡೆದಿದೆ ಎನ್ನಲಾದ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಹಾಗೂ ಅದಕ್ಕೆ ಸಂಬಂಧಿಸಿದ ವಿಷಯಗಳು’ ಎಂಬ ಶೀರ್ಷಿಕೆಯಡಿ ಪಟ್ಟಿ ಮಾಡಿರುವ ದೂರನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠ ಆಗಸ್ಟ್‌ 20ರಂದು ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ. ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದೀವಾಲಾ ಮತ್ತು ಮನೋಜ್ ಮಿಶ್ರಾ ಅವರೂ ಪೀಠದಲ್ಲಿದ್ದಾರೆ. 

ಸರ್ಕಾರಿ ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ವೈದ್ಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಘಟನೆಗೆ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿದೆ.

ಆಗಸ್ಟ್‌ 9ರಂದು ನಡೆದ ‘ಭಯಾನಕ ಮತ್ತು ಕ್ರೂರ’ ಕೃತ್ಯ ಹಾಗೂ ಆಗಸ್ಟ್‌ 14ರಂದು ಆರ್‌.ಜಿ.ಕರ್ ಆಸ್ಪತ್ರೆ ಮೇಲೆ ನಡೆದ ದಾಳಿಯ ಕಾರಣ ಈ ಪ್ರಕರಣವನ್ನು ಮುಖ್ಯನ್ಯಾಯಮೂರ್ತಿ ಸ್ವಯಂಪ್ರೇರಿತರಾಗಿ ವಿಚಾರಣೆಗೆ ಕೈಗೆತ್ತಿಕೊಳ್ಳಬೇಕು ಎಂದು ಒತ್ತಾಯಿಸಿ ಹಲವರು ಸುಪ್ರೀಂ ಕೋರ್ಟ್‌ಗೆ ಪತ್ರ ಮುಖೇನ ಅರ್ಜಿ ಸಲ್ಲಿಸಿದ್ದರು. 

ಅತ್ಯಾಚಾರ ಮತ್ತು ಕೊಲೆ ಆರೋಪ ಕುರಿತ ತನಿಖೆಯಲ್ಲಿ ಯಾವುದೇ ಪ್ರಗತಿ ಕಾಣದ್ದಕ್ಕೆ ಕಲ್ಕತ್ತ ಹೈಕೋರ್ಟ್‌, ಕೋಲ್ಕತ್ತ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿತ್ತು. ತನಿಖೆಯನ್ನು ಸಿಬಿಐಗೆ ವರ್ಗಾಯಿಸಿ ಆಗಸ್ಟ್‌ 13ರಂದು ಆದೇಶಿಸಿತ್ತು. 

ಕೋಲ್ಕತ್ತದಲ್ಲಿ ನಡೆದ ಘಟನೆಯು ಆರೋಗ್ಯ ಕಾರ್ಯಕರ್ತರ ಮನೋಬಲದ ಮೇಲೆ ತೀವ್ರ ಪರಿಣಾಮ ಬೀರಿದ್ದು, ದೇಶದಾದ್ಯಂತ ಅವರ ಸುರಕ್ಷತೆ ಬಗ್ಗೆ ಕಳವಳ ಉಂಟುಮಾಡಿದೆ ಎಂದು ಸುಪ್ರೀಂ ಕೋರ್ಟ್‌ಗೆ ಬರೆದಿರುವ ಪತ್ರವೊಂದರಲ್ಲಿ ಹೇಳಲಾಗಿದೆ.

‘ಆರ್‌.ಜಿ.ಕರ್‌ ಆಸ್ಪತ್ರೆ ಮೇಲಿನ ದಾಳಿಯನ್ನು ಅಲ್ಲಿ ನಡೆದ ಪ್ರತ್ಯೇಕ ಘಟನೆ ಎಂದು ಕಡೆಗಣಿಸುವಂತಿಲ್ಲ. ಅದು ಇಡೀ ದೇಶದ ಆರೋಗ್ಯ ವ್ಯವಸ್ಥೆಯ ಮೇಲಿನ ನೇರ ದಾಳಿಯಾಗಿದೆ. ಈ ಘಟನೆಯು ಇತರರ ಸೇವೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟವರ ಸುರಕ್ಷತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ವೈದ್ಯಕೀಯ ಸಂಸ್ಥೆಗಳ ಅಡೆತಡೆಯಿಲ್ಲದ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಜನರಿಗೆ ನ್ಯಾಯದ ಮೇಲೆ ನಂಬಿಕೆ ಬರುವಂತೆ ಮಾಡಲು ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಮಧ್ಯಪ್ರವೇಶಿಸಬೇಕು’ ಎಂದು ಸಿಕಂದರಾಬಾದ್‌ನ ಮೋನಿಕಾ ಸಿಂಗ್‌ ಎಂಬವರು ಪತ್ರದಲ್ಲಿ ಮನವಿ ಮಾಡಿದ್ದರು.

ಕೊಲೆ ಪ್ರಕರಣ ಖಂಡಿಸಿ ಭಾರತೀಯ ವೈದ್ಯಕೀಯ ಸಂಘವು (ಐಎಂಎ) ಶನಿವಾರ ಬೆಳಿಗ್ಗೆ 6ರಿಂದ ಭಾನುವಾರ ಬೆಳಿಗ್ಗೆ 6ರವರೆಗೆ ಒಪಿಡಿ ಸೇವೆಯನ್ನು ಸ್ಥಗಿತಗೊಳಿಸುವಂತೆ ಕರೆ ನೀಡಿದ್ದರಿಂದ ದೇಶದಾದ್ಯಂತ ವೈದ್ಯಕೀಯ ಸೇವೆ ಅಸ್ತವ್ಯಸ್ತಗೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT