ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಲಂಗಾಣ ಸಿ.ಎಂ ಆಯ್ಕೆ ಪ್ರಕ್ರಿಯೆಗೆ ಹೈಕಮಾಂಡ್‌ ತಡೆ

ತೆಲಂಗಾಣ ಸಿಎಲ್‌ಪಿ ನಾಯಕನ ನೇಮಕ– ಖರ್ಗೆಗೆ ಅಧಿಕಾರ, ದೆಹಲಿಗೆ ತೆರಳಿದ ವೀಕ್ಷಕರು
Published 4 ಡಿಸೆಂಬರ್ 2023, 14:41 IST
Last Updated 4 ಡಿಸೆಂಬರ್ 2023, 14:41 IST
ಅಕ್ಷರ ಗಾತ್ರ

ಹೈದರಾಬಾದ್‌: ತೆಲಂಗಾಣದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬೇಕೆಂಬ ಬಗ್ಗೆ ಕಾಂಗ್ರೆಸ್‌ ಪಕ್ಷದ ಹೈಕಮಾಂಡ್‌ ಇನ್ನೂ ನಿರ್ಧರಿಸಬೇಕಿರುವ ಕಾರಣ ಈ ಕುರಿತ ಕುತೂಹಲ ಇನ್ನಷ್ಟು ಸಮಯದವರೆಗೆ ಮುಂದುವರಿಯಲಿದೆ.

ತೆಲಂಗಾಣದ ಎಐಸಿಸಿ ವೀಕ್ಷಕರು ಮುಖ್ಯಮಂತ್ರಿ ಆಯ್ಕೆ ಕುರಿತು ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಇತರ ಉನ್ನತ ನಾಯಕರ ಜತೆ ಚರ್ಚಿಸಲು ದೆಹಲಿಗೆ ತೆರಳಿದ್ದಾರೆ. ಈ ಬಗ್ಗೆ ನಿರ್ಧಾರ ಕೈಗೊಳ್ಳುವವರೆಗೆ ಎಲ್ಲಾ 64 ಶಾಸಕರನ್ನು ನಗರದ ತಾರಾ ಹೋಟೆಲ್‌ಗೆ ಕರೆದೊಯ್ಯಲಾಗಿದೆ.

ಪಿಸಿಸಿ ಅಧ್ಯಕ್ಷ ಎ. ರೇವಂತ್‌ ರೆಡ್ಡಿ ಅವರು ಸೋಮವಾರ ಸಂಜೆ ಅಧಿಕೃತವಾಗಿ ಪ್ರಮಾಣವಚನ ಸ್ವೀಕರಿಸುವುದಷ್ಟೇ ಬಾಕಿ ಇದೆ ಎಂಬಂತೆ ಬಿಂಬಿಸಲಾಗಿತ್ತಾದರೂ ಸಂಜೆಯ ವೇಳೆಗೆ ಇದು ಬೇರೆಯೇ ತಿರುವು ಪಡೆದುಕೊಂಡಿದೆ. ಪಕ್ಷದ ಹೈಕಮಾಂಡ್‌ ಇದನ್ನು ತಡೆಹಿಡಿದಿದೆ.

 ಎಐಸಿಸಿ ವೀಕ್ಷಕ ಮತ್ತು ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಶಾಸಕಾಂಗ ಸಭೆಗೆ ಮೊದಲು ಮುಖ್ಯಮಂತ್ರಿ ಸ್ಥಾನದ  ಆಕಾಂಕ್ಷಿಗಳಾದ ರೇವಂತ್‌ ರೆಡ್ಡಿ, ಶಾಸಕಾಂಗ ಪಕ್ಷದ ನಾಯಕ ಮಲ್ಲು ಭಟ್ಟಿ ವಿಕ್ರಮಾರ್ಕ, ಕೋಮಟಿರೆಡ್ಡಿ ವೆಂಕಟ್‌ ರೆಡ್ಡಿ, ಡಿ.ಶ್ರೀಧರ್‌ ಬಾಬು ಮತ್ತು ಎನ್‌. ಉತ್ತಮ್‌ಕುಮಾರ್‌ ರೆಡ್ಡಿ ಅವರೊಡನೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದರು.

ಮುಖ್ಯಮಂತ್ರಿ ಆಯ್ಕೆ ಕಾರಣಕ್ಕೆ ತಡವಾಗಿದೆಯಾ ಅಥವಾ  ಸಂಪುಟದಲ್ಲಿನ ಇತರ ಸ್ಥಾನ ಮತ್ತು ಹುದ್ದೆಗಳಿಗೆ ಆಯ್ಕೆ ಕಾರಣಕ್ಕೆ ವಿಳಂಬವಾಗುತ್ತಿದೆಯಾ ಎಂಬುದು ತಕ್ಷಣಕ್ಕೆ ಗೊತ್ತಾಗಿಲ್ಲ.

ಹೊಸ ಮುಖ್ಯಮಂತ್ರಿ ಅಧಿಕಾರ ಸ್ವೀಕರಿಸುತ್ತಾರೆ. ರಾಜಭವನದಲ್ಲಿ ಎಲ್ಲಾ ವ್ಯವಸ್ಥೆಗಳು ಆಗಿವೆ ಎಂಬ ವರದಿಗಳು ಇದ್ದರೂ ಮುಖ್ಯಮಂತ್ರಿ ಆಯ್ಕೆ ವಿಚಾರ ಅಂತಿಮಗೊಳ್ಳಲು ಕನಿಷ್ಠ ಇನ್ನೊಂದು ದಿನವಾದರೂ ಬೇಕು ಎಂದು ಪಕ್ಷದ ಮೂಲಗಳು ಹೇಳಿವೆ.

ತೆಲಂಗಾಣ ರಾಜ್ಯಪಾಲೆ ತಮಿಳ್‌ಇಸೈ ಸೌಂದರ್‌ರಾಜನ್‌ ಅವರನ್ನು ಭಾನುವಾರ ರಾತ್ರಿ ಭೇಟಿ ಮಾಡಿ ಸರ್ಕಾರ ರಚನೆಯ ಹಕ್ಕು ಮಂಡಿಸಿದ ಬಳಿಕ ಎಐಸಿಸಿ ವೀಕ್ಷಕರು ಸೋಮವಾರ ಹೊಸ ನಾಯಕನ ಆಯ್ಕೆಗಾಗಿ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆ ನಡೆಸಿದರು.

‘ಸಿಎಲ್‌ಪಿ ನಾಯಕನನ್ನು ನೇಮಕ ಮಾಡುವ ಅಧಿಕಾರವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬಿಟ್ಟುಕೊಡಲು ಸಭೆ ನಿರ್ಧರಿಸಿತು. ಅಲ್ಲದೆ ರಾಜ್ಯ ನಾಯಕತ್ವಕ್ಕೆ ಬೆಂಬಲ ನೀಡಿದ ನಾಯಕರಾದ ಖರ್ಗೆ, ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಮತ್ತು  ಪ್ರಿಯಾಂಕಾ ಗಾಂಧಿ ಅವರಿಗೆ ಕೃತಜ್ಞತೆ ಸಲ್ಲಿಸಿತು’ ಎಂದು ಡಿ.ಕೆ. ಶಿವಕುಮಾರ್‌ ತಿಳಿಸಿದರು.

ವೀಕ್ಷಕರು ಎಲ್ಲಾ 64 ಶಾಸಕರ ವೈಯಕ್ತಿಕ ಅಭಿಪ್ರಾಯ ಸಂಗ್ರಹಿಸಿದ್ದಾರೆ ಎನ್ನಲಾಗಿದೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸ್ಥಾನಕ್ಕೆ ಅನುಕ್ರಮವಾಗಿ  ಪಿಸಿಸಿ ಅಧ್ಯಕ್ಷ ರೇವಂತ್ ರೆಡ್ಡಿ ಮತ್ತು ಭಟ್ಟಿ ವಿಕ್ರಮಾರ್ಕ ಅವರ ಹೆಸರು ಮುಂಚೂಣಿಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT