ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ನೀಟ್‌’ ಪರೀಕ್ಷೆ ಅಗತ್ಯವಿಲ್ಲ; ತಮಿಳುನಾಡಿಗೆ ವಿನಾಯಿತಿ ನೀಡಬೇಕು: ನಟ ವಿಜಯ್

Published 3 ಜುಲೈ 2024, 6:42 IST
Last Updated 3 ಜುಲೈ 2024, 6:42 IST
ಅಕ್ಷರ ಗಾತ್ರ

ಚೆನ್ನೈ: ‘ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿನ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಿಂದ (ನೀಟ್‌) ತಮಿಳುನಾಡಿಗೆ ವಿನಾಯಿತಿ ನೀಡಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ‘ತಮಿಳಗ ವೆಟ್ರಿ ಕಳಗಂ’ ಪಕ್ಷದ ನಾಯಕ, ನಟ ವಿಜಯ್ ಮನವಿ ಮಾಡಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ‘ದೇಶದ ಜನರು ‘ನೀಟ್‌’ ಪರೀಕ್ಷೆ ಬಗ್ಗೆ ನಂಬಿಕೆ ಕಳೆದುಕೊಂಡಿದ್ದಾರೆ. ಹಾಗಾಗಿ ಪರೀಕ್ಷೆ ಅಗತ್ಯವಿಲ್ಲ ಎಂಬುದು ಸ್ಪಷ್ಟವಾಗಿದೆ. ಈ ಎಲ್ಲ ಅಂಶಗಳನ್ನು ಗಮನಿಸಿದರೆ ‘ನೀಟ್‌’ ಪರೀಕ್ಷೆಯಿಂದ ವಿನಾಯಿತಿ ಪಡೆಯುವುದು ಅನಿವಾರ್ಯ’ ಎಂದು ಹೇಳಿದ್ದಾರೆ.

ಈಚೆಗೆ ತಮಿಳುನಾಡು ವಿಧಾನಸಭೆಯಲ್ಲಿ ಅಂಗೀಕರಿಸಲಾದ ‘ನೀಟ್‌’ ವಿರುದ್ಧದ ನಿರ್ಣಯವನ್ನು ನಾನು ತುಂಬು ಹೃದಯದಿಂದ ಸ್ವಾಗತಿಸುತ್ತೇನೆ. ಜತೆಗೆ, ತಮಿಳುನಾಡಿನ ಜನರ ಭಾವನೆಗಳನ್ನು ಗೌರವಿಸುವಂತೆ ಕೇಂದ್ರ ಸರ್ಕಾರವನ್ನು ವಿನಂತಿಸುತ್ತೇನೆ ಎಂದು ತಿಳಿಸಿದ್ದಾರೆ.

ಸಂವಿಧಾನದ ಕೆಲವು ಕಾನೂನುಗಳನ್ನು ತಿದ್ದುಪಡಿ ಮಾಡುವ ಮೂಲಕ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ವಿಜಯ್ ಒತ್ತಾಯಿಸಿದ್ದಾರೆ.

ತಮಿಳುನಾಡು ವಿದ್ಯಾರ್ಥಿಗಳಿಗೆ ನೀಟ್‌ನಿಂದ ವಿನಾಯಿತಿ ನೀಡುವ ಸಂಬಂಧ ಇತ್ತೀಚೆಗೆ ಮಸೂದೆಯನ್ನು ವಿಧಾನಸಭೆಯಲ್ಲಿ ಅಂಗೀಕರಿಸಲಾಗಿತ್ತು. ಆದರೆ, ಈ ಮಸೂದೆಗೆ ಅಂಕಿತ ಹಾಕಲು ರಾಜ್ಯಪಾಲ ಆರ್‌.ಎನ್‌.ರವಿ ವಿಳಂಬ ಮಾಡುತ್ತಿದ್ದು, ಅವರ ವಿರುದ್ಧ ಡಿಎಂಕೆ ಇತ್ತೀಚೆಗೆ ವಾಗ್ದಾಳಿ ನಡೆಸಿತ್ತು. ಇದರ ಬೆನ್ನಲ್ಲೇ ಈಗ ಮುಖ್ಯಮಂತ್ರಿ ಸ್ಟಾಲಿನ್‌ ಅವರು ಪ್ರಧಾನಿ ಮುಂದೆ ಈ ಬೇಡಿಕೆ ಮಂಡಿಸಿದ್ದರು.

‘ತಮಿಳುನಾಡು ರೂಪಿಸಿರುವ ಪ್ರವೇಶ ನೀತಿಯು ಆರೋಗ್ಯ ಕ್ಷೇತ್ರದ ಮೂಲಸೌಕರ್ಯಗಳ ಅಭಿವೃದ್ಧಿಯಲ್ಲಿ ಮುಖ್ಯಪಾತ್ರ ವಹಿಸುತ್ತದೆ. ಹೀಗಾಗಿ, ಈ ನೀತಿಯನ್ನು ಸಂರಕ್ಷಿಸುವ ಉದ್ದೇಶದಿಂದ ರಾಜ್ಯಕ್ಕೆ ನೀಟ್‌ನಿಂದ ವಿನಾಯಿತಿ ನೀಡಬೇಕು ಎಂಬ ಬೇಡಿಕೆಯನ್ನು ಮಂಡಿಸುತ್ತಲೇ ಇದ್ದೇವೆ. ರಾಜ್ಯಕ್ಕೆ ಅನುಕೂಲವಾಗುವ ರೀತಿಯಲ್ಲಿ ಈ ಮನವಿಯನ್ನು ಪರಿಗಣಿಸಬೇಕು’ ಎಂದು ಪ್ರಧಾನಿಗೆ ಸ್ಟಾಲಿನ್‌ ಕೋರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT