ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಹಾರ: ‘ಜನ ವಿಶ್ವಾಸ ಯಾತ್ರೆ’ಗೆ ಚಾಲನೆ

Published 20 ಫೆಬ್ರುವರಿ 2024, 16:15 IST
Last Updated 20 ಫೆಬ್ರುವರಿ 2024, 16:15 IST
ಅಕ್ಷರ ಗಾತ್ರ

ಪಟ್ನಾ: ರಾಷ್ಟ್ರೀಯ ಜನತಾ ದಳದ ನಾಯಕ ತೇಜಸ್ವಿ ಯಾದವ್‌ ಅವರು ‘ಜನ ವಿಶ್ವಾಸ ಯಾತ್ರೆ’ಗೆ ಮಂಗಳವಾರ ಚಾಲನೆ ನೀಡಿ, ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮುಜಾಫರ್‌ಪುರದಿಂದ ಆರಂಭವಾಗುವ ಯಾತ್ರೆಯು 11 ದಿನಗಳವರೆಗೆ ಬಿಹಾರದಾದ್ಯಂತ ನಡೆಯಲಿದೆ. ರಾಜ್ಯದ 38 ಜಿಲ್ಲೆಗಳಲ್ಲೂ ತೇಜಸ್ವಿ ಅವರು ಯಾತ್ರೆ ಕೈಗೊಳ್ಳಲಿದ್ದಾರೆ.

ಮುಜಾಫರ್‌ಪುರಕ್ಕೆ ಹೊರಡುವ ಮುನ್ನ ಪತ್ರಕರ್ತರೊಂದಿಗೆ ಇಲ್ಲಿ ಮಾತನಾಡಿದ ತೇಜಸ್ವಿ ಅವರು, ‘ಆರ್‌ಜೆಡಿ ಪಕ್ಷವು ಬಿಹಾರದ ವಿಧಾನಸಭೆಯಲ್ಲಿ ದೀರ್ಘ ಕಾಲದಿಂದ ಇರುವ ಪಕ್ಷವಾಗಿದೆ. ಬಿಹಾರದ ಜನರು ನಮ್ಮ ಪಕ್ಷದ ಮೇಲೆ ಪ್ರೀತಿಯ ಮಳೆಗರೆದಿದ್ದಾರೆ. ಅವರಿಗಾಗಿ ಕೆಲಸ ಮಾಡಲು ನಮ್ಮನ್ನು ಮತ್ತಷ್ಟು ಬಲವಾಗಿ ಬೆಂಬಲಿಸಬೇಕೆಂದು ಜನರನ್ನು ಒತ್ತಾಯಿಸಲು ಮತ್ತು ಜನರ ವಿಶ್ವಾಸವನ್ನು ಗಳಿಸಲು ಈ ಯಾತ್ರೆ ಹಮ್ಮಿಕೊಂಡಿದ್ದೇನೆ’ ಎಂದರು.

‘ನನ್ನ ಆಶೀರ್ವಾದ ನನ್ನ ಮಗನ ಮೇಲೆ ಸದಾ ಇರುತ್ತದೆ. ಆತ ತನ್ನ ಗುರಿಯನ್ನು ಸೇರಲಿ ಎಂದು ಬಯಸುತ್ತೇನೆ’ ಎಂದು ತೇಜಸ್ವಿ ತಂದೆ, ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಅವರು ಹೇಳಿದರು.

‘ನಿತೀಶ್‌ ಕುಮಾರ್‌ ಅವರು ನಮ್ಮೊಂದಿಗೆ ನಡೆದುಕೊಂಡ ರೀತಿ ಅನುಚಿತವಾಗಿದೆ. ಎಂದಿಗೂ ನಾವು ಮೈತ್ರಿಯನ್ನು ಮುರಿದಿಲ್ಲ. ನಿತೀಶ್‌ ಅವರೇ ಅದರಿಂದ ಯಾವಾಗಲೂ ದೂರ ಓಡುತ್ತಾರೆ’ ಎಂದು ತೇಜಸ್ವಿ ತಾಯಿ, ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ಡಿ ದೇವಿ ಅವರು ಹೇಳಿದ್ದಾರೆ.

ನಿತೀಶ್‌ ವಿರುದ್ಧ ಆಕ್ರೋಶ: ‘ರಾಜ್ಯದ ಜನರ ಕುರಿತು ನಿತೀಶ್‌ ಅವರಿಗೆ ದೂರದೃಷ್ಟಿ ಇಲ್ಲ. ನಮ್ಮೊಂದಿಗಿನ ಮೈತ್ರಿಯನ್ನು ಮುರಿದುಕೊಂಡು, ಬಿಜೆಪಿ ನೇತೃತ್ವದ ಎನ್‌ಡಿಎ ಕೂಟಕ್ಕೆ ಏಕೆ ಸೇರಿಕೊಂಡರು ಎಂಬ ಬಗ್ಗೆಯೂ ಅವರ ಬಳಿ ಸಮರ್ಥ ಕಾರಣವಿಲ್ಲ. ಜನಾದೇಶವನ್ನು ತಮ್ಮ ಕಾಲ ಚಪ್ಪಲಿ ಎಂದು ಅವರು ಪರಿಗಣಿಸುತ್ತಾರೆ’ ಎಂದು ತೇಜಸ್ವಿ ಅವರು ಆಕ್ರೋಶ ವ್ಯಕ್ತಪಡಿಸಿದರು.

‘ಬಿಹಾರಕ್ಕೆ ಸ್ಥಿರತೆ ಮತ್ತು ದೂರದೃಷ್ಟಿಯುಳ್ಳ ನಾಯಕತ್ವದ ಅಗತ್ಯವಿದೆ. ಆದರೆ, ನಿತೀಶ್‌ ಅವರು ತಮ್ಮ ಚಂಚಲ ಸ್ವಭಾವ ಹೊಂದಿದ್ದು, ವಿನೂತನವಾಗಿ ಯೋಚಿಸಲು ಅಸಮರ್ಥರಾಗಿದ್ದಾರೆ. ಈ ಎರಡು ಕೊರತೆಗಳು ತಮಗೆ ಇದೆ ಎಂದೂ ಅವರು ತೋರಿಸಿಕೊಂಡಿದ್ದಾರೆ’ ಎಂದೂ ಹೇಳಿದರು.

ಇದಕ್ಕೂ ಮುನ್ನ ಸೋಮವಾರ ರಾತ್ರಿ ಫೇಸ್‌ಬುಕ್‌ ಲೈವ್‌ಗೆ ಬಂದಿದ್ದ ತೇಜಸ್ವಿ ಅವರು, ‘ನಿತೀಶ್‌ ಅವರು ಹಳೆಯ ಶೈಲಿಯ ನಾಯಕ. ಅವರು ತಮ್ಮ ಕುರ್ಚಿಯನ್ನು ತಮ್ಮಷ್ಟಕ್ಕೇ ಬಿಟ್ಟುಕೊಟ್ಟರೆ ಒಳ್ಳೆಯದು’ ಎಂದಿದ್ದರು.

ಮಾರ್ಚ್‌ 1ರಂದು ‘ಜನ ವಿಶ್ವಾಸ ಯಾತ್ರೆ’ ಮುಕ್ತಾಯಗೊಳ್ಳಲಿದೆ. ಮುಜಾಫರ್‌ಪುರ ಭೇಟಿಯ ನಂತರ ತೇಜಸ್ವಿ ಅವರು ಮಂಗಳವಾರದಂದು ಸೀತಾಮಢಿ ಹಾಗೂ ಶಿಯೋಹರ್‌ನಲ್ಲಿ ಸಾರ್ವಜನಿಕ ಭಾಷಣಗಳನ್ನು ಮಾಡಲಿದ್ದಾರೆ. ನಂತರ ಮೋತಿಹಾರಿಯಲ್ಲಿ ವಾಸ್ತವ್ಯ ಮಾಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT