ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Telangana Election 2023: ಕಾಂಗ್ರೆಸ್‌ಗೆ ಬೆಂಬಲ ಘೋಷಿಸಿದ ವೈ.ಎಸ್. ಶರ್ಮಿಳಾ

Published 3 ನವೆಂಬರ್ 2023, 9:16 IST
Last Updated 3 ನವೆಂಬರ್ 2023, 9:16 IST
ಅಕ್ಷರ ಗಾತ್ರ

ಹೈದರಾಬಾದ್‌: ನವೆಂಬರ್‌ 30ರಂದು ನಡೆಯಲಿರುವ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸದಿರಲು ಮತ್ತು ಪ್ರತಿಪಕ್ಷ ಕಾಂಗ್ರೆಸ್‌ಗೆ ಬೇಷರತ್ತಾಗಿ  ಬೆಂಬಲ ನೀಡಲು  ವೈಎಸ್‌ಆರ್ ತೆಲಂಗಾಣ ಪಕ್ಷ (ವೈಎಸ್‌ಆರ್‌ಟಿಪಿ) ನಿರ್ಧರಿಸಿದೆ ಎಂದು ಪಕ್ಷದ ಅಧ್ಯಕ್ಷೆ ವೈ.ಎಸ್‌. ಶರ್ಮಿಳಾ ಶುಕ್ರವಾರ ಇಲ್ಲಿ ಹೇಳಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು,  ಮುಖ್ಯಮಂತ್ರಿ ಕೆ. ಚಂದ್ರಶೇಖರ ರೆಡ್ಡಿ ನೇತೃತ್ವದ ಬಿಆರ್‌ಎಸ್‌ನ ಭ್ರಷ್ಟ ಮತ್ತು ಜನ ವಿರೋಧಿ ಆಡಳಿತವನ್ನು ಕೊನೆಗಾಣಿಸಲು ಕಾಂಗ್ರೆಸ್‌ಗೆ ಬೆಂಬಲ ನೀಡುತ್ತಿರುವುದಾಗಿ  ಹೇಳಿದರು. ಈ ಕುರಿತು ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರಿಗೆ ಪತ್ರ ಬರೆದಿರುವುದಾಗಿಯೂ ತಿಳಿಸಿದರು.

ರಾಜ್ಯದಲ್ಲಿ ಆಡಳಿತ ಬದಲಾವಣೆಯ ಸಾಧ್ಯತೆಗಳು ಇರುವಾಗ ಸರ್ಕಾರಿ ವಿರೋಧಿ ಮತಗಳನ್ನು ಒಡೆಯಲು ತಾವು ಬಯಸುವುದಿಲ್ಲ ಎಂದ ಅವರು ಕಾಂಗ್ರೆಸ್‌ ನಾಯಕರು ಮತ್ತು ಅವರ ಕಾರ್ಯಕ್ರಮಗಳ ಬಗ್ಗೆ ತಮಗೆ ಅತ್ಯಂತ ಗೌರವವಿದೆ. ಕಾಂಗ್ರೆಸ್‌ನ ಮತಗಳನ್ನು ಒಡೆದು ಆಡಳಿತ ಬಿಆರ್‌ಎಸ್‌ಗೆ ಅನುಕೂಲ ಮಾಡಿಕೊಡಲು ತಾವು ಬಯಸುವುದಿಲ್ಲ ಎಂದು ವಿವರಿಸಿದರು.

ಅವಿಭಜಿತ ಆಂಧ್ರಪ್ರದೇಶದಲ್ಲಿ ತಮ್ಮ ತಂದೆ ದಿವಂಗತ ರಾಜಶೇಖರ ರೆಡ್ಡಿ ಅವರು ಕಾಂಗ್ರೆಸ್ಸನ್ನು ಅಧಿಕಾರಕ್ಕೆ ತಂದಿದ್ದರು ಎಂದರು.

‘ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಪಾದಯಾತ್ರೆಯು ಕರ್ನಾಟಕದಲ್ಲಿ ಪರಿಣಾಮ ಬೀರಿದೆ. ತೆಲಂಗಾಣದಲ್ಲೂ ಅದು ತನ್ನ ಪರಿಣಾಮ ಬೀರುವ ಹಂತದಲ್ಲಿರುವಾಗ ನಾವು ಕಾಂಗ್ರೆಸ್‌ಗೆ ನೋವು ಉಂಟು ಮಾಡಲು ಬಯಸುವುದಿಲ್ಲ. ಕಾಂಗ್ರೆಸ್‌ ನಾಯಕರು ನನಗೆ ಹೊರಗಿನವರಲ್ಲ’ ಎಂದು ವಿವರಣೆ ನೀಡಿದರು.

ಕಾಂಗ್ರೆಸ್‌ ಮತಗಳನ್ನು ಒಡೆದು ಚಂದ್ರಶೇಖರ್‌ ರಾವ್‌ ಅವರು ಮತ್ತೆ ಮುಖ್ಯಮಂತ್ರಿಯಾಗುವಂತೆ ಮಾಡಿದರೆ, ಇತಿಹಾಸ ತಮ್ಮನ್ನು ಕ್ಷಮಿಸುವುದಿಲ್ಲ ಎಂಬ ಹೆದರಿಕೆ ಇರುವುದಾಗಿಯೂ ಅವರು  ಹೇಳಿದರು.

ಇದಕ್ಕೂ ಮೊದಲು ಶರ್ಮಿಳಾ ಅವರು, ತಮ್ಮ ಪಕ್ಷವು ಕಾಂಗ್ರೆಸ್‌ ಜತೆ ವಿಲೀನಗೊಳ್ಳುವ ಕುರಿತು ಅಥವಾ ಚುನಾವಣಾ ಪೂರ್ವ ಸೀಟು ಹಂಚಿಕೆ ಬಗ್ಗೆ ಆ ಪಕ್ಷದ ಹೈಕಮಾಂಡ್‌ ಜತೆ ಚರ್ಚೆ ನಡೆಸಿದ್ದರು. ಆದರೆ ಅದು ಫಲಕಾರಿಯಾಗಲಿಲ್ಲ.

119 ಸ್ಥಾನಗಳ ತೆಲಂಗಾಣ ವಿಧಾನಸಭೆಗೆ ನವೆಂಬರ್ 30ರಂದು ಚುನಾವಣೆ ನಡೆಯಲಿದ್ದು, ಡಿ.3ರಂದು ಮತ ಎಣಿಕೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT