ಗೋರಖ್‌ಪುರ (ಉತ್ತರಪ್ರದೇಶ): ಉತ್ತರ ಪ್ರದೇಶದ ಕುಶಿನಗರ ಜಿಲ್ಲೆಯಲ್ಲಿ ಇಬ್ಬರು ಆರ್ಕೆಸ್ಟ್ರಾ ಡಾನ್ಸರ್‌ಗಳನ್ನು ಅಪಹರಿಸಿ, ಬಂದೂಕು ತೋರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿ ಎಂಟು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಸೋಮವಾರ ರಾತ್ರಿ ರಾಮ್‌ಕೋಲಾ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯಿಂದ ಸಂತ್ರಸ್ತೆಯರನ್ನು ಅಪಹರಿಸಲಾಗಿದೆ. ಎರಡು ಎಸ್‌ಯುವಿಗಳಲ್ಲಿ ಬಂದ ಆರೋಪಿಗಳು ಮೊದಲು ಗುಂಡಿನ ದಾಳಿ ನಡೆಸಿ ಡಾನ್ಸರ್‌ಗಳನ್ನು ಅಪಹರಿಸಿದ್ದಾರೆ. ಕಪ್ತಂಗಂಜ್ ಪ್ರದೇಶದಲ್ಲಿನ ಆರೋಪಿ ಅಜಿತ್ ಸಿಂಗ್ ಎಂಬಾತನ ಮನೆಗೆ ಕರೆದೊಯ್ದರು, ಅಲ್ಲಿ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ ಎಂದು ಕುಶಿನಗರ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಕುಮಾರ್ ಮಿಶ್ರಾ ಹೇಳಿದ್ದಾರೆ.
ಆರೋಪಿಗಳಾದ ನಾಗೇಂದ್ರ ಯಾದವ್, ಅಶ್ವನ್ ಸಿಂಗ್, ಕ್ರಿಶ್ ತಿವಾರಿ, ಅರ್ಥಕ್ ಸಿಂಗ್, ಅಜಿತ್ ಸಿಂಗ್ ಮತ್ತು ಡಾ. ವಿವೇಕ್ ಸೇಠ್ ಎಂಬುವರನ್ನು ಸೋಮವಾರ ರಾತ್ರಿ ಬಂಧಿಸಲಾಗಿದೆ.
ಇನ್ನಿಬ್ಬರು ಆರೋಪಿಗಳಾದ ನಿಸಾರ್ ಅನ್ಸಾರಿ ಮತ್ತು ಆದಿತ್ಯ ಸಾಹ್ನಿ ಎಂಬುವರನ್ನು ಮಂಗಳವಾರ ಸಂಜೆ ಎನ್‌ಕೌಂಟರ್ ನಂತರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಅರ್ಥಕ್ ಸಿಂಗ್ ಸ್ಥಳೀಯ ಬಿಜೆಪಿ ಮುಖಂಡ ಆದಿತ್ಯ ಪ್ರತಾಪ್ ಸಿಂಗ್ ಅವರ ಪುತ್ರ ಎಂದು ಪಕ್ಷದ ಮುಖಂಡರೊಬ್ಬರು ತಿಳಿಸಿದ್ದಾರೆ. ಆದಿತ್ಯ ಪ್ರತಾಪ್ ಸಿಂಗ್ ಬಿಜೆಪಿಯ ಸದಸ್ಯರಾಗಿದ್ದಾರೆ ಎಂದು ಪಕ್ಷದ ಗೋರಖ್‌ಪುರ ಜಿಲ್ಲಾಧ್ಯಕ್ಷ ಯುಧಿಸ್ತಿರ್ ಸಿಂಗ್ ಹೇಳಿದ್ದಾರೆ.
ಮತ್ತೊಬ್ಬ ಆರೋಪಿ ವೈದ್ಯ ವಿವೇಕ್ ಸೇಠ್ ಗೋರಖ್‌ಪುರದಲ್ಲಿ ವೈದ್ಯ ವೃತ್ತಿ ನಡೆಸುತ್ತಿದ್ದಾನೆ.
ಆರೋಪಿಗಳಿಂದ ಅಕ್ರಮ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.