ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವದೆಹಲಿಯಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅಂತ್ಯಕ್ರಿಯೆ

ಕೋವಿಡ್ ನಿಯಮದಿಂದ ಸ್ವಗ್ರಾಮಕ್ಕೆ ತರಲಿಲ್ಲ ಪಾರ್ಥಿವ ಶರೀರ
Last Updated 24 ಸೆಪ್ಟೆಂಬರ್ 2020, 18:20 IST
ಅಕ್ಷರ ಗಾತ್ರ
ADVERTISEMENT
""
""

ನವದೆಹಲಿ: ಕೋವಿಡ್‌ನಿಂದ ನಿಧನರಾದ ಬೆಳಗಾವಿ ಸಂಸದ, ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ (65) ಅವರ ಅಂತ್ಯಕ್ರಿಯೆ ಇಲ್ಲಿನ ದ್ವಾರಕಾದ ಸೆಕ್ಟರ್‌–24ರಲ್ಲಿರುವ ವೀರಶೈವ ಲಿಂಗಾಯತ ರುದ್ರಭೂಮಿಯಲ್ಲಿ ಗುರುವಾರ ಸಂಜೆ ನೆರವೇರಿತು.

ಸ್ವಗ್ರಾಮ, ಬೆಳಗಾವಿ ತಾಲ್ಲೂಕಿನ ಕೆ.ಕೆ. ಕೊಪ್ಪಕ್ಕೆ ಅಂಗಡಿ ಅವರ ಪಾರ್ಥಿವ ಶರೀರವನ್ನು ಕೊಂಡೊಯ್ಯಬೇಕೆಂಬ ಸಂಬಂಧಿಗಳ ಯತ್ನ ಕೇಂದ್ರದ ಕೋವಿಡ್ ನಿಯಮಾವಳಿಯಿಂದಾಗಿ ಫಲಿಸಲಿಲ್ಲ. ಹಾಗಾಗಿ, ಕುಟುಂಬದ ಕೆಲವೇ ಸದಸ್ಯರ ಸಮ್ಮುಖದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಿತು.

ಪತ್ನಿ ಮಂಗಳಾ, ಪುತ್ರಿಯರು, ಅಳಿಯಂದಿರು, ಬೀಗರಾದ ಜಗದೀಶ ಶೆಟ್ಟರ್‌ ದಂಪತಿ, ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಚಿವ ರಮೇಶ ಜಾರಕಿಹೊಳಿ ಹಾಗೂ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ, ಈರಣ್ಣ ಕಡಾಡಿ ಹಾಜರಿದ್ದರು.

ಬೆಳಗಿನ ಜಾವ 3 ಗಂಟೆಗೇ ನವದೆಹಲಿಗೆ ಬಂದ ಸಚಿವ ಶೆಟ್ಟರ್, ಅಂಗಡಿ ಅವರ ಪಾರ್ಥಿವ ಶರೀರವನ್ನು ಹಸ್ತಾಂತರಿಸುವಂತೆ ಕೇಂದ್ರ ಹಾಗೂ ದೆಹಲಿ ಸರ್ಕಾರಗಳ ಪ್ರಮುಖರೊಂದಿಗೆ ಮಾತುಕತೆ ನಡೆಸಿದರು. ಆದರೆ, ಕೋವಿಡ್‌ ಮಾರ್ಗಸೂಚಿ ಅನ್ವಯ ಪಾರ್ಥಿವ ಶರೀರವನ್ನು ಬೇರೆಡೆ ಸಾಗಿಸಲು ಅನುಮತಿ ಸಿಗಲಿಲ್ಲ.

ಪಿಪಿಇ ಕಿಟ್‌ ಧರಿಸಿದ್ದ ವೈದ್ಯಕೀಯ ಸಿಬ್ಬಂದಿಯು ಅಂಗಡಿ ಅವರ ಪಾರ್ಥಿವ ಶರೀರವನ್ನು ಪೊಲೀಸ್‌ ಭದ್ರತೆಯಲ್ಲಿ ರುದ್ರಭೂಮಿಗೆ ತರುತ್ತಿದ್ದಂತೆಯೇ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತು.

ಕೇಂದ್ರ ಸಂಪುಟದ ಸಂತಾಪ:

ಸಚಿವ ಸುರೇಶ ಅಂಗಡಿ ಅವರ ನಿಧನಕ್ಕೆ ಕೇಂದ್ರದ ಸಚಿವ ಸಂಪುಟ ಗುರುವಾರ ಸಂತಾಪ ಸೂಚಿಸಿತು. ವಿಡಿಯೊ ಕಾನ್ಫರೆನ್ಸ್‌ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಎರಡು ನಿಮಿಷ ಮೌನ ಆಚರಿಸಿ ಮೃತರ ಆತ್ಮಕ್ಕೆ ಶಾಂತಿ ಕೋರಲಾಯಿತು.

ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ, ಲೋಕಸಭೆಯ ಕಾಂಗ್ರೆಸ್‌ ಗುಂಪಿನ ನಾಯಕ ಅಧೀರ್‌ ರಂಜನ್ ಚೌಧರಿ, ರೈಲ್ವೆ ಸಚಿವ ಪೀಯೂಷ್ ಗೋಯಲ್ ಮತ್ತಿತರರು ಸೌಥ್ ಅವೆನ್ಯುದಲ್ಲಿರುವ ಅಂಗಡಿ ಅವರ ನಿವಾಸಕ್ಕೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

ವಸತಿ ಸಚಿವ ವಿ.ಸೋಮಣ್ಣ ಹಾಗೂ ರಾಜ್ಯದ ಬಿಜೆಪಿ ಸಂಸದರು ಕರ್ನಾಟಕ ಭವನದಲ್ಲಿ ಬೆಳಿಗ್ಗೆ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡಿದ್ದರು.

ಜ್ವರ ನಿರ್ಲಕ್ಷಿಸಿದ್ದು ಮುಳುವಾಯಿತೇ?
‘ಹಲ್ಲುನೋವಿನಿಂದಾಗಿಯೇ ಜ್ವರ ಬಂದಿರಬಹುದು’ ಎಂದೇ ಭಾವಿಸಿದ್ದ ಅಂಗಡಿ ಅವರು, ದೆಹಲಿಗೆ ಪ್ರಯಾಣ ಬೆಳೆಸಿದ್ದರು. ದೆಹಲಿ ತಲುಪಿದ ನಂತರವೂ ಎರಡು-ಮೂರು ದಿನ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವಲ್ಲಿ ವಿಳಂಬ ಮಾಡಿದ್ದರು. ಜ್ವರ ತೀವ್ರವಾಗಿ ಗಂಟಲು ನೋವು, ಕೆಮ್ಮು ಕಾಣಿಸಿಕೊಂಡ ಬಳಿಕವಷ್ಟೇ ಅವರು ಏಮ್ಸ್‌ಗೆ ದಾಖಲಾದರು ಎಂದು ಅವರ ಆಪ್ತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಆರಂಭದಲ್ಲಿ ಚಿಕಿತ್ಸೆಗೆ ಸೂಕ್ತವಾಗಿ ಸ್ಪಂದಿಸಿದ್ದ ಅಂಗಡಿ ಅವರಿಗೆ ಉಸಿರಾಟದ ತೊಂದರೆ ಹೆಚ್ಚಿದ್ದರಿಂದ ಪ್ಲಾಸ್ಮಾ ಚಿಕಿತ್ಸೆಯನ್ನೂ ನೀಡಲಾಗಿತ್ತು. ಅದೂ ಫಲ ನೀಡಲಿಲ್ಲ ಎಂದು ಅವರ ಸಂಬಂಧಿಯಾದ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.

ಜ್ವರ ಕಾಣಿಸಿಕೊಂಡಾಗ ಬೆಳಗಾವಿಯಲ್ಲೇ ಚಿಕಿತ್ಸೆ ಪಡೆದು ಮುನ್ನೆಚ್ಚರಿಕೆ ವಹಿಸಿದ್ದರೆ ಅಂಗಡಿ ಅವರು ಗುಣಮುಖ ಆಗಬಹುದಿತ್ತು. ಯಾರೇ ಆಗಲಿ, ಕೊರೊನಾ ಲಕ್ಷಣ ಕಾಣಿಸಿಕೊಂಡಲ್ಲಿ ಕೂಡಲೇ ಚಿಕಿತ್ಸೆ ಪಡೆಯಬೇಕು. ನಿರ್ಲಕ್ಷ್ಯ ಕೂಡದು ಎಂದು ಅವರು
ಸಲಹೆ ನೀಡಿದರು.

ಇನ್ನಷ್ಟು ಓದು:


ಸುರೇಶ್‌ ಅಂಗಡಿಯವರು ಬೆಳಗಾವಿ ತಾಲ್ಲೂಕಿನ ಕೆ.ಕೆ. ಕೊಪ್ಪ ಗ್ರಾಮದಲ್ಲಿ ಚನ್ನಬಸಪ್ಪ–ಸೋಮವ್ವ ದಂಪತಿಯ ಪುತ್ರನಾಗಿ 1955ರ ಜೂನ್ 1ರಂದು ಜನಿಸಿದರು. ಬಿ.ಕಾಂ, ಎಲ್‌.ಎಲ್‌.ಬಿ. ಪದವೀಧರರಾಗಿದ್ದರು.1996ರಲ್ಲಿ ರಾಜಕೀಯ ಜೀವನ ಆರಂಭಿಸಿದರು. 2004ರಿಂದ ಸತತ 4 ಬಾರಿ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದ ಅವರು, ಇದೇ ಮೊದಲ ಬಾರಿಗೆ ಕೇಂದ್ರ ಸಚಿವರಾಗಿದ್ದರು. ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಸೇರಿದಂತೆ ವಿವಿಧ ಸ್ಥಾನಗಳಲ್ಲಿ ಕಾರ್ಯ ನಿರ್ವಹಣೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT