ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇನಾ ತಾಲೀಮು ಕೈಬಿಡಲು ಚೀನಾಗೆ ವಿವಿಧ ರಾಷ್ಟ್ರಗಳ ಆಗ್ರಹ

ತೈವಾನ್‌ ಬಳಿ ನಡೆಯತ್ತಿರುವ ಕಸರತ್ತು * ಅಮೆರಿಕ ಸೇರಿ ಮೂರು ರಾಷ್ಟ್ರಗಳ ಜಂಟಿ ಹೇಳಿಕೆ
Last Updated 7 ಆಗಸ್ಟ್ 2022, 11:10 IST
ಅಕ್ಷರ ಗಾತ್ರ

ವಾಷಿಂಗ್ಟನ್‌:ತೈವಾನ್‌ ಹಾಗೂ ಅದರ ಆಸುಪಾಸಿನಲ್ಲಿ ನಡೆಸುತ್ತಿರುವ ಸೇನಾ ತಾಲೀಮು ಅನ್ನು ತಕ್ಷಣವೇ ಸ್ಥಗಿತಗೊಳಿಸಬೇಕು ಎಂದು ಅಮೆರಿಕ, ಆಸ್ಟ್ರೇಲಿಯ, ಜಪಾನ್‌ಗಳು ಚೀನಾಗೆ ಆಗ್ರಹಪಡಿಸಿವೆ.

ತೈವಾನ್‌ನಲ್ಲಿ ಶಾಂತಿ ಮತ್ತು ಸ್ಥಿರತೆ ಸ್ಥಾಪನೆಗೆ ಬದ್ಧವಾಗಿರುವುದಾಗಿಯೂ ಈ ದೇಶಗಳು ಪ್ರತಿಪಾದಿಸಿವೆ. ಅಮೆರಿಕ ಸಂಸತ್ತಿನ ಸ್ಪೀಕರ್‌ ನ್ಯಾನ್ಸಿ ಪೆಲೋಸಿ ಅವರು ತೈಪೆಗೆ ಭೇಟಿ ನೀಡಿದ್ದ ಹಿಂದೆಯೇ ಚೀನಾವು ಸೇನಾ ತಾಲೀಮು ಅನ್ನು ಚುರುಕುಗೊಳಿಸಿತ್ತು.

ಕಳೆದ 25 ವರ್ಷಗಳಲ್ಲಿ ತೈವಾನ್‌ಗೆ ಭೇಟಿ ನೀಡಿದ ಅಮೆರಿಕದ ಉನ್ನತ ಸ್ಥಾನದಲ್ಲಿರುವ ಪ್ರಥಮ ರಾಜಕಾರಣಿ ಪೆಲೋಸಿ. ಇವರ ಭೇಟಿ, ತೈವಾನ್‌ ಅಧ್ಯಕ್ಷ ಸಾಯ್ ಇಂಗ್ ವೆನ್‌ ಮತ್ತಿತರ ಮುಖಂಡರ ಜೊತೆಗೆ ನಡೆಸಿದ್ದ ಸಭೆಯು ಚೀನಾವನ್ನು ಕೆರಳಿಸಿತ್ತು.

ಅದರ ಹಿಂದೆಯೇ ಸೇನಾ ತಾಲೀಮು ಆರಂಭಿಸಿದ್ದ ಚೀನಾವು ತೈವಾನ್‌ ಆಸುಪಾಸಿನಲ್ಲಿ ಸಮುದ್ರವನ್ನು ಗುರಿಯಾಗಿಸಿ ಖಂಡಾಂತರ ಕ್ಷಿಪಣಿಗಳನ್ನು ಪ್ರಯೋಗಿಸಿತ್ತು. ಜೊತೆಗೆ ದೊಡ್ಡ ಪ್ರಮಾಣದಲ್ಲಿ ಸೇನಾ ತಾಲೀಮು ಕಾರ್ಯಾಚರಣೆಯನ್ನು ಆರಂಭಿಸಿತ್ತು.

ಈ ಬೆಳವಣಿಗೆಯ ಹಿಂದೆಯೇ ಮೂರು ಪ್ರಮುಖ ರಾಷ್ಟ್ರಗಳು ಜಂಟಿ ಹೇಳಿಕೆ ನೀಡಿದ್ದು, ಸೇನಾ ತಾಲೀಮು ಅನ್ನು ತಕ್ಷಣವೇ ಕೈಬಿಡಬೇಕು ಎಂದು ಚೀನಾಗೆ ಆಗ್ರಹಪಡಿಸಿವೆ. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟೊನಿ ಬ್ಲಿಂಕೆನ್, ಆಸ್ಟ್ರೇಲಿಯ ವಿದೇಶಾಂಗ ಸಚಿವ ಪೆನ್ನಿ ವೊಂಗ್‌, ಜಪಾನ್‌ನ ಸಚಿವ ಹಯಾಷಿ ಯೊಷಿಮಸ ಅವರು ಈ ಕುರಿತು ಜಂಟಿ ಹೇಳಿಕೆ ನೀಡಿದ್ದಾರೆ.

ತಾಲೀಮು ನಿರಂತರ –ಚೀನಾ

ಬೀಜಿಂಗ್: ತೈವಾನ್‌ನ ಪೂರ್ವಭಾಗದಲ್ಲಿ ನಿರಂತರವಾಗಿ ಸೇನಾ ತಾಲೀಮು ನಡೆಸಲಾಗುವುದು ಎಂದು ಚೀನಾ ಪ್ರತಿಪಾದಿಸಿದೆ. ಅಧಿಕಾರಿ ಮೂಲಗಳನ್ನು ಉಲ್ಲೇಖಿಸಿ ಈ ಕುರಿತು ಚೀನಾದ ಅಧಿಕೃತ ಟಿ.ವಿ. ವಾಹಿನಿ ವರದಿ ಮಾಡಿದೆ.

ಚೀನಾ ಮತ್ತು ತೈವಾನ್ ನಡುವಿನ ಗಡಿ ರೇಖೆಯುದ್ದಕ್ಕೂ ಈ ತಾಲೀಮು ನಡೆಯಲಿದೆ ಎಂದು ಹೇಳಿದೆ. ಆದರೆ, ಈ ಗಡಿ ರೇಖೆಗೆ ಕಾನೂನು ಮಾನ್ಯತೆ ಇಲ್ಲ. ಕಳೆದ ಶತಮಾನದಲ್ಲಿ ತನ್ನ ಕಾರ್ಯಾಚರಣೆಯ ಅಗತ್ಯವನ್ನು ಆಧರಿಸಿ ಅಮೆರಿಕದ ಸೇನೆಯು ಈ ‘ಕಾಲ್ಪನಿಕ’ ರೇಖೆಯನ್ನು ಗುರುತು ಮಾಡಿದೆ ಎಂದು ಟಿ.ವಿ.ವಾಹಿನಿಯೂ ಉಲ್ಲೇಖಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT