ಗೋಪೇಶ್ವರ್/ ಡೆಹ್ರಾಡೂನ್: ಉತ್ತರಾಖಂಡದ ಚಮೋಲಿ ಜಿಲ್ಲೆಯ ಅಲಕನಂದಾ ನದಿ ದಂಡೆಯಲ್ಲಿ ಬುಧವಾರ ‘ನಮಾಮಿ ಗಂಗೆ’ ಯೋಜನೆಯಡಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಏಕಾಏಕಿ ವಿದ್ಯುತ್ ಪ್ರವಹಿಸಿದ್ದರಿಂದ 15 ಮಂದಿ ದಾರುಣವಾಗಿ ಮೃತಪಟ್ಟಿದ್ದು, ಏಳು ಮಂದಿ ತೀವ್ರ ಗಾಯಗೊಂಡಿದ್ದಾರೆ.
ನದಿ ದಂಡೆಯಲ್ಲಿರುವ ಒಳಚರಂಡಿ ಸಂಸ್ಕರಣಾ ಘಟಕದಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಮೃತಪಟ್ಟವರ ಪೈಕಿ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಪ್ರದೀಪ್ ರಾವತ್ ಸೇರಿದಂತೆ ಮೂವರು ಗೃಹರಕ್ಷಕರೂ ಸೇರಿದ್ದಾರೆ. ಗಾಯಾಳುಗಳ ನೆರವಿಗೆ ಹೆಲಿಕಾಪ್ಟರ್ ಬಳಸಿಕೊಳ್ಳಲಾಗಿದ್ದು, ಎಲ್ಲರನ್ನೂ ಹೃಷಿಕೇಶದ ಏಮ್ಸ್‌ಗೆ ದಾಖಲಿಸಲಾಗಿದೆ.
ದುರಂತದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಉತ್ತರಾಖಂಡ ಸರ್ಕಾರವು, ನ್ಯಾಯಾಂಗ ತನಿಖೆಗೆ ಆದೇಶಿಸಿದೆ. ಜಿಲ್ಲಾ ಹೆಚ್ಚುವರಿ ನ್ಯಾಯಾಧೀಶ ಡಾ.ಅಭಿಷೇಕ್ ತ್ರಿಪಾಠಿ ಅವರಿಗೆ ತನಿಖೆಯ ಹೊಣೆ ನೀಡಲಾಗಿದ್ದು, ಒಂದು ವಾರದೊಳಗೆ ಘಟನೆಗೆ ನಿಖರ ಕಾರಣವನ್ನು ಪತ್ತೆಹಚ್ಚಿ ವರದಿ ಸಲ್ಲಿಸಲು ಆದೇಶದಲ್ಲಿ ತಿಳಿಸಲಾಗಿದೆ.
#WATCH | Uttarakhand: 10 people died and several were injured after a transformer exploded on the banks of the Alaknanda River in the Chamoli district. Injured have been admitted to the district hospital: SP Chamoli Parmendra Doval pic.twitter.com/QKC5vpvbF5
— ANI (@ANI) July 19, 2023
ದುರಂತ ಸಂಭವಿಸಿದ್ದು ಹೇಗೆ?: ಗಂಗಾ ನದಿಯ ಶುದ್ಧೀಕರಣ ಹಾಗೂ ನದಿ ವ್ಯಾಪ್ತಿಯ ಮಾಲಿನ್ಯ ಪ್ರಮಾಣ ತಗ್ಗಿಸುವುದೇ ‘ನಮಾಮಿ ಗಂಗೆ’ ಯೋಜನೆಯ ಮುಖ್ಯ ಉದ್ದೇಶ. ಈ ಯೋಜನಾ ಸ್ಥಳದಲ್ಲಿರುವ ವಿದ್ಯುತ್ ಪರಿವರ್ತಕದ ಬಳಿಯ ಸಂಸ್ಕರಣಾ ಘಟಕದಲ್ಲಿ ಅವಘಡ ಸಂಭವಿಸಿದೆ.
‘ಬೆಳಿಗ್ಗೆ 11.30ಗಂಟೆ ಸುಮಾರಿಗೆ ಘಟಕದಲ್ಲಿ ಅಳವಡಿಸಿದ್ದ ಕಬ್ಬಿಣದ ಕಂಬಿಗಳ ಮೂಲಕ ವಿದ್ಯುತ್ ಪ್ರವಹಿಸಿದೆ. ಬಹುತೇಕರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ವಿದ್ಯುತ್ ಪ್ರವಹಿಸಿದ್ದು ಹೇಗೆ ಎಂಬ ಬಗ್ಗೆ ಸಮಗ್ರ ತನಿಖೆ ನಡೆಸಲಾಗುತ್ತಿದೆ’ ಎಂದು ಚಮೋಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಮೇಂದ್ರ ಡೊಭಾಲ್ ತಿಳಿಸಿದ್ದಾರೆ.
ಸುದ್ದಿ ತಿಳಿದ ತಕ್ಷಣ ದುರಂತ ನಡೆದ ಸ್ಥಳಕ್ಕೆ ತೆರಳಿದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ಹೇಳಿದರು. ಮೃತಪಟ್ಟವರ ಕುಟುಂಬಗಳಿಗೆ ತಲಾ ₹5 ಲಕ್ಷ ಹಾಗೂ ಗಾಯಾಳುಗಳ ಚಿಕಿತ್ಸೆಗೆ ತಲಾ ₹1 ಲಕ್ಷ ಪರಿಹಾರ ಘೋಷಿಸಿದರು.
ದುರಂತದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸುವುದು ನಿಶ್ಚಿತ.ಪುಷ್ಕರ್ ಸಿಂಗ್ ಧಾಮಿ, ಮುಖ್ಯಮಂತ್ರಿ, ಉತ್ತರಾಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.