ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರಿ ಪಂಡಿತರ ಸಮಸ್ಯೆ ನಿರ್ಲಕ್ಷ್ಯ: ನಿವೃತ್ತ ನ್ಯಾ. ಕೌಲ್‌ ವಿಷಾದ

Published 30 ಡಿಸೆಂಬರ್ 2023, 13:19 IST
Last Updated 30 ಡಿಸೆಂಬರ್ 2023, 13:19 IST
ಅಕ್ಷರ ಗಾತ್ರ

ನವದೆಹಲಿ: ಪ್ರತ್ಯೇಕತಾವಾದ, ಭಯೋತ್ಪಾದನೆ ಶುರುವಾದ ನಂತರ 4.5 ಲಕ್ಷ ಕಾಶ್ಮೀರಿ ಪಂಡಿತರು ಕಣಿವೆ ತೊರೆದಿದ್ದಾರೆ. ರಾಜಕೀಯವಾಗಿ ಪ್ರಭಾವ ಬೀರುವಷ್ಟು ದೊಡ್ಡ ಸಂಖ್ಯೆಯ ಮತದಾರರಾಗಿಲ್ಲದ ಕಾರಣಕ್ಕೆ ಅವರನ್ನು ಕಡೆಗಣಿಸಲಾಗಿದೆ ಎಂದು ಸುಪ್ರೀಂ ಕೋರ್ಟ್‌ ವಿಶ್ರಾಂತ ನ್ಯಾಯಮೂರ್ತಿ ಸಂಜಯ್‌ ಕಿಶನ್‌ ಕೌಲ್‌ ಹೇಳಿದ್ದಾರೆ.

‘ಪಿಟಿಐ’ಗೆ ನೀಡಿದ ಸಂದರ್ಶನದಲ್ಲಿ, ‘ಮುಸ್ಲಿಮರು ಬಹುಸಂಖ್ಯಾತರಿರುವ ರಾಜ್ಯದಲ್ಲಿ ಅಲ್ಪಸಂಖ್ಯಾತ ಕಾಶ್ಮೀರಿ ಪಂಡಿತರ ಸಮುದಾಯದವರು ಸ್ಥಳಾಂತರಗೊಂಡ ವಿಷಯದ ಸುತ್ತ ಮೌನ ಆವರಿಸಿದೆ’ ಎಂದು ಅವರು ವಿಷಾದಿಸಿದರು.

‘ಮೊದಲು ಭದ್ರತೆ ನಿಜವಾಗಿಯೂ ಸಮಸ್ಯೆಯಾಗಿರಲಿಲ್ಲ. ಆದರೆ, ನಂತರದಲ್ಲಿ ಒಂದು ಸಮುದಾಯದ ನಾಲ್ಕೂವರೆ ಲಕ್ಷಕ್ಕೂ ಹೆಚ್ಚು ಜನರು ಅವರ ಸ್ವಂತ ದೇಶದಿಂದ, ತಮ್ಮ ಸ್ಥಳದಿಂದ ಸ್ಥಳಾಂತರಗೊಂಡರು. ಇದರಿಂದ ಅವನತಿಯು ಒಂದು ಹಂತ ತಲುಪಿತು. ಕಣಿವೆಯ ಪರಿಸ್ಥಿತಿಯು ಹದಗೆಟ್ಟಿದ್ದರಿಂದ ದೇಶದ ಪ್ರಾದೇಶಿಕ ಸಮಗ್ರತೆಗೆ ಅಪಾಯ ಎದುರಾಗಿದ್ದರಿಂದ ಸೇನೆಯನ್ನು ಕರೆಸಿಕೊಳ್ಳಲಾಯಿತು. ಸ್ವಂತ ನೆಲೆ ತೊರೆದವರು ರಾಜಕೀಯವಾಗಿ ಪ್ರಭಾವ ಬೀರುವಷ್ಟು ದೊಡ್ಡ ಸಮುದಾಯದ ಮತದಾರರು ಆಗಿಲ್ಲದೇ ಇರುವ ಕಾರಣಕ್ಕೆ ಕಾಶ್ಮೀರಿ ಪಂಡಿತರನ್ನು ಕಡೆಗಣಿಸಲಾಯಿತು. ಅವರ ಸಮಸ್ಯೆಯ ಬಗ್ಗೆ ಹೆಚ್ಚು ಗಮನವನ್ನೇ ಕೊಡಲಿಲ್ಲ’ ಎಂದು ಹೇಳಿದರು.   

‘ಸತ್ಯಶೋಧನಾ ಮತ್ತು ಸಾಮರಸ್ಯ ಆಯೋಗ’ ರಚಿಸಬೇಕೆಂಬ ತಮ್ಮ ಶಿಫಾರಸಿನ ಕುರಿತು, ಕೌಲ್ ಅವರು, ‘ಕೆಲವು ತಪ್ಪು ಸಂಭವಿಸಿದೆ ಎಂದು ಒಪ್ಪಿಕೊಳ್ಳುವುದು ಉತ್ತಮ ವಿಧಾನ. ಒಳ್ಳೆಯ ದಿನಗಳನ್ನೇ ನೋಡದ ಇಡೀ ಪೀಳಿಗೆಯ ಜನರು ಈ ಪ್ರದೇಶದಲ್ಲಿದ್ದಾರೆ’ ಎನ್ನುವ ಮೂಲಕ ಸರ್ಕಾರ ತ್ವರಿತ ಕ್ರಮ ಕೈಗೊಳ್ಳಬೇಕೆನ್ನುವುದನ್ನು ಸೂಚ್ಯವಾಗಿ ಹೇಳಿದರು.

ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370 ನೇ ವಿಧಿಯಡಿ ಕಲ್ಪಿಸಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸುವ ಕೇಂದ್ರದ ನಿರ್ಧಾರವನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠದ ಸರ್ವಾನುಮತದ ತೀರ್ಪಿನ ಬಗ್ಗೆ ಈ ಪೀಠದ ಭಾಗವಾಗಿದ್ದ ನ್ಯಾ. ಕೌಲ್ ಅವರು ಸಂದರ್ಶನದಲ್ಲಿ ಮಾತನಾಡಿದರು.

‘ಇದು ಸರ್ವಾನುಮತದ ತೀರ್ಪು ಎಂದ ಮೇಲೆ ನಾವೆಲ್ಲರೂ ಅನುಸರಿಸಲು ಇದು ಸರಿಯಾದ ಮಾರ್ಗವೆಂದೇ ಭಾವಿಸಿರಬೇಕು. ಸಹಜವಾಗಿ, ಪ್ರತಿ ತೀರ್ಪು, ವಿಶೇಷವಾಗಿ ಪ್ರತಿ ಪ್ರಮುಖ ತೀರ್ಪು ಚರ್ಚೆಗಳನ್ನು ಹುಟ್ಟುಹಾಕುತ್ತದೆ. ತೀರ್ಪಿಗೆ ವಿರುದ್ಧ ಅಭಿಪ್ರಾಯವನ್ನು ಹೊಂದಿರುವ ಜನರು ಇದ್ದೇ ಇರುತ್ತಾರೆ. ಇದು ನಿಜವಾಗಿಯೂ ನನ್ನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಏಕೆಂದರೆ ಒಂದು ತೀರ್ಪು ಸನ್ನಿವೇಶ ಆಧರಿಸಿದ ಅಭಿಪ್ರಾಯ. ಆ ಬಗ್ಗೆ ನಾವು ಹೆಚ್ಚು ತಲೆಕೆಡಿಸಿಕೊಳ್ಳಬಾರದು’ ಎಂದರು.

ಜಮ್ಮು ಮತ್ತು ಕಾಶ್ಮೀರದಲ್ಲಿ 1980ರ ನಂತರದಲ್ಲಿ ಪ್ರಭುತ್ವದ ಕಡೆಯಿಂದ ಹಾಗೂ ಸರ್ಕಾರೇತರ ಶಕ್ತಿಗಳಿಂದ ನಡೆದಿರುವ ಮಾನವ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದ ಪ್ರಕರಣಗಳ ತನಿಖೆಗೆ ನಿಷ್ಪಕ್ಷಪಾತದಿಂದ ಕೂಡಿದ ‘ಸತ್ಯಶೋಧನಾ ಮತ್ತು ಸಾಮರಸ್ಯ ಸಮಿತಿ’ ರಚಿಸಬೇಕು ಎಂದು ನ್ಯಾ. ಕೌಲ್ ಅವರು ತಮ್ಮ ಪ್ರತ್ಯೇಕ ತೀರ್ಪಿನಲ್ಲಿ ಶಿಫಾರಸು ಮಾಡಿದ್ದರು. ಸ್ವತಃ ಕಾಶ್ಮೀರಿ ಪಂಡಿತರಾದ ಕೌಲ್ ಅವರು, 30 ವರ್ಷಗಳ ಅನಿಯಂತ್ರಿತ ಹಿಂಸಾಚಾರದ ನಂತರ ಜನರು ಮುಂದೆ ಸಾಗುವ ಸಮಯ ಬಂದಿದೆ ಎಂದಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT