ನವದೆಹಲಿ: ವಕ್ಫ್ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದ ಬಳಿಕ, ಪರಿಶೀಲನೆಗಾಗಿ ಸಂಸತ್ತಿನ ಸ್ಥಾಯಿ ಸಮಿತಿಗೆ ಕಳುಹಿಸುವಂತೆ ವಿರೋಧ ಪಕ್ಷಗಳು ಬುಧವಾರ ಒತ್ತಾಯಿಸಿವೆ.
ಇದಕ್ಕೆ ಪ್ರತಿಕ್ರಿಯಿಸಿದ ಸರ್ಕಾರ, ‘ಲೋಕಸಭೆಯಲ್ಲಿ ಈ ಬಗ್ಗೆ ಚರ್ಚೆಯಾದ ಬಳಿಕ ವ್ಯವಹಾರ ಸಲಹಾ ಸಮಿತಿಯು ಈ ಬಗ್ಗೆ ಗಮನಹರಿಸಲಿದೆ’ ಎಂದು ತಿಳಿಸಿದೆ.
‘ಮಸೂದೆಯನ್ನು ಸಂವಿಧಾನ ಸಮಿತಿಗೆ ಕಳುಹಿಸುವ ಬಗ್ಗೆ ಗುರುವಾರ ನಿರ್ಧರಿಸಲಾಗುವುದು ಎಂದು ಪ್ರಮುಖ ಪಕ್ಷಗಳ ನಾಯಕರನ್ನೊಳಗೊಂಡ ಸಮಿತಿಯ ಸಭೆಯಲ್ಲಿ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಚರ್ಚಿಸಿದ್ದಾರೆ’ ಎಂದು ಮೂಲಗಳು ತಿಳಿಸಿವೆ.
‘ಮಸೂದೆಯು ಗುರುವಾರ ಲೋಕಸಭೆಯಲ್ಲಿ ಮಂಡನೆಯಾದ ಬಳಿಕ ಅದನ್ನು ಅಂಗೀಕರಿಸುವಂತೆ ಒತ್ತಾಯಿಸುವುದಿಲ್ಲ’ ಎಂದು ಸರ್ಕಾರವು ಸಮಿತಿಯ ಸಭೆಯಲ್ಲಿ ತಿಳಿಸಿದೆ.
‘ಕೆಲ ಮುಸ್ಲಿಂ ಸಂಘಟನೆಗಳಿಂದ ವಿರೋಧ ಹೊಂದಿರುವ ಪ್ರಸ್ತಾವಿತ ಮಸೂದೆಯನ್ನು ಸರ್ಕಾರ ಪರಿಶೀಲನೆಗಾಗಿ ಸಂಸದೀಯ ಸಮಿತಿಗೆ ಕಳುಹಿಸುವ ಸಾಧ್ಯತೆ ಹೆಚ್ಚಿದೆ. ಸರ್ಕಾರದ ಅಜೆಂಡಾವನ್ನು ಬೆಂಬಲಿಸುವ ಕೆಲ ಪಕ್ಷಗಳು ಪಸ್ತಾವಿತ ಮಸೂದೆಯಲ್ಲಿ ಮೀಸಲಾತಿಯನ್ನು ಬಯಸುತ್ತಿವೆ’ ಎಂದು ಮೂಲಗಳು ತಿಳಿಸಿದೆ.
ಲೋಕಸಭೆಯಲ್ಲಿ ಇಲಾಖೆಗಳಿಗೆ ಸಂಬಂಧಿಸಿದ ಸ್ಥಾಯಿ ಸಮಿತಿಗಳು ಅಸ್ತಿತ್ವದಲ್ಲಿ ಇಲ್ಲ. ಸ್ಥಾಯಿ ಸಮಿತಿಯ ಅನುಪಸ್ಥಿತಿಯಲ್ಲಿ ಮಸೂದೆಯ ಬಗ್ಗೆ ಚರ್ಚೆಗೆ ಪ್ರತ್ಯೇಕ ಸಮಿತಿ ರಚಿಸುವ ಅವಕಾಶ ಸಂಸತ್ತಿಗಿದೆ.